×
Ad

ವಿದ್ಯುನ್ಮಾನ ಸಮರ ಸಂಶೋಧನೆಯಲ್ಲಿ ಭಾರತ ಮುಂಚೂಣಿ: ಲೀಸಾ ಫೋರ್ಜ್

Update: 2018-02-14 22:17 IST

ಬೆಂಗಳೂರು, ಫೆ.14: ವಿದ್ಯುನ್ಮಾನ ಸಮರ ಸಂಶೋಧನೆಯಲ್ಲಿ ಭಾರತ ಮುಂಚೂಣಿಯಲ್ಲಿದ್ದು, ಈ ದೇಶವು ತಂತ್ರಜ್ಞಾನ ಅಳವಡಿಕೆಯಲ್ಲಿ ಗಮನಾರ್ಹ ಸಾಧನೆ ಮಾಡುತ್ತಿದೆ ಎಂದು ಅಸೋಸಿಯೇಷನ್ ಆಫ್ ಓಲ್ಡ್ ಕ್ರೋವ್ಸ್ (ಎಓಸಿ) ಅಂತಾರಾಷ್ಟ್ರೀಯ ಅಧ್ಯಕ್ಷೆ ಲೀಸಾ ಫೋರ್ಜ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಅಸೋಸಿಯೇಷನ್ ಆಫ್ ಓಲ್ಡ್ ಕ್ರೋವ್ಸ್ ಭಾರತೀಯ ಘಟಕ ಆಯೋಜಿಸಿದ್ದ ‘5ನೆ ಅಂತಾರಾಷ್ಟ್ರೀಯ ಸಮರ ವಿದ್ಯುನ್ಮಾನ ಇಡಬ್ಲುಸಿಐ 2018’ ಅಧಿವೇಶನದ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು. ಶತಮಾನದ ಅಗ್ರಗಣ್ಯ ಸಂಶೋಧನಾ ಕ್ಷೇತ್ರದಲ್ಲಿ ಹೆಚ್ಚೆಚ್ಚು ಯುವ ವಿಜ್ಞಾನಿಗಳು ಸಕ್ರಿಯವಾಗಿ ಪಾಲ್ಗೊಂಡು ದೇಶದ ಸಮರ ತಂತ್ರಜ್ಞಾನ ಬೆಳವಣಿಗೆಗೆ ಕೊಡುಗೆ ನೀಡಬೇಕಾಗಿದೆ ಎಂದು ಲೀಸಾ ಫೋರ್ಜ್ ಹೇಳಿದರು.

ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದ ಭಾರತ್ ಇಲೆಕ್ಟ್ರಾನಿಕ್ಸ್ ಸಂಸ್ಥೆಯ ಅಧ್ಯಕ್ಷ ಎಂ.ವಿ.ಗೌತಮ್, ಯುದ್ಧದ ಭೀತಿಯನ್ನು ಸದಾ ಎದುರಿಸುವ ರಾಷ್ಟ್ರಗಳು ಪರಸ್ಪರ ಕೈ ಜೋಡಿಸಿ, ಈ ಸಂಘಟನೆಯ ಮೂಲಕ ಸ್ವರಕ್ಷಣೆ ಕಾರ್ಯಕ್ಕೆ ಅಗತ್ಯವಿರುವ ಹೊಸ ಆವಿಷ್ಕಾರಗಳನ್ನು ಕಂಡುಕೊಳ್ಳಬೇಕಾಗಿದೆ ಎಂದರು.

ತನ್ನ ವಾರ್ಷಿಕ ಆಯವ್ಯಯದಲ್ಲಿ ಶೇ.15ರಷ್ಟು ಧನ ವಿನಿಯೋಗವನ್ನು ತಮ್ಮ ಸಂಸ್ಥೆ ವಿದ್ಯುನ್ಮಾನ ಸಮರವ್ಯೂಹ ಕಾರ್ಯಾಚರಣೆಗಾಗಿ ಬಳಸುತ್ತಿದ್ದು, ಈ ನಿಟ್ಟಿನಲ್ಲಿ ಪ್ರಾಮುಖ್ಯತೆಯನ್ನು ಪಡೆದಿದೆ. ಈ ಕ್ಷೇತ್ರವು ಜಾಗತಿಕವಾಗಿ ವೇಗದ ಬದಲಾವಣೆಯತ್ತ ಸಾಗುತ್ತಿದೆ ಎಂದು ಅವರು ಹೇಳಿದರು.

ಭಾರತ ದೇಶವು ಪ್ರಧಾನಮಂತ್ರಿಯವರ ‘ಮೆಕ್ ಇನ್ ಇಂಡಿಯಾ’ ಘೋಷಣೆ ಅನ್ವಯ ಸ್ವದೇಶಿ ತಯಾರಿಕೆಗೆ ಗಮನ ಹರಿಸುವಲ್ಲಿ ಭಾರತ್ ಇಲೆಕ್ಟ್ರಾನಿಕ್ಸ್ ಸಂಸ್ಥೆ ಅಗ್ರಸ್ಥಾನ ಪಡೆದಿದೆ ಎಂದು ಗೌತಮ್ ತಿಳಿಸಿದರು. ದೇಶದ ರಕ್ಷಣಾ ಕಾರ್ಯದಲ್ಲಿ ತೀರಾ ಅಗತ್ಯವಾದ ವಿದ್ಯುನ್ಮಾನ ಸಮರ ವ್ಯವಸ್ಥೆ ಕುರಿತು ಎಓಸಿ ಬೆಂಗಳೂರು ಘಟಕದಂತಹ ಖಾಸಗಿ ಸಂಸ್ಥೆ ಇಂತಹ ಬೃಹತ್‌ ಮಟ್ಟದ ರಕ್ಷಣಾ ತಾಂತ್ರಿಕ ಅಧಿವೇಶನವನ್ನು ಬೆಂಗಳೂರಿನಲ್ಲಿ ಸಂಘಟಿಸಿದ್ದು ಶ್ಲಾಘನೀಯ ಎಂದು ಅವರು ಹೇಳಿದರು.

ದೇಶದ ಅಗ್ರಗಣ್ಯ ಸಂಶೋಧನೆ ಹಾಗೂ ಉತ್ಪಾದನಾ ಕ್ಷೇತ್ರ ಹಾಗೂ ರಕ್ಷಣಾ ದಳದ ತಂತ್ರಜ್ಞಾನ ಶ್ರೇಷ್ಠರು 400ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡ ಈ ಮೂರು ದಿನಗಳ ಬೃಹತ್ ಅಧಿವೇಶನದಲ್ಲಿ ದೇಶದ ಡಿಆರ್‌ಡಿಓ ಹಾಗೂ ಭಾರತ್ ಇಲೆಕ್ಟ್ರಾನಿಕ್ಸ್ ಸಂಸ್ಥೆಗಳು ವಿವಿಧ ವೈಜ್ಞಾನಿಕ ಸಂಸ್ಥೆಗಳೊಂದಿಗೆ ಜೊತೆಯಾಗಿ ಕೈ ಜೋಡಿಸಿದ್ದು ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ವಿಜ್ಞಾನಿ ಡಾ.ಯು.ಕೆ.ರೇವಣ್‌ಕರ್, ಡಿಆರ್‌ಡಿಓ ನಿವೃತ್ತ ವಿಜ್ಞಾನಿ ಜೆ.ಶಂಕರ್‌ರಾವ್, ಭಾರತ್ ಇಲೆಕ್ಟ್ರಾನಿಕ್ಸ್ ಸಂಸ್ಥೆಯ ಅಭಿವೃದ್ಧಿ ಹಾಗೂ ಸಂಶೋಧನಾ ಘಟಕದ ನಿರ್ದೇಶಕ ಡಾ.ಎ.ಟಿ.ಕಲ್ಗಟಕಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News