ಉಪನಗರ ರೈಲು ಖರೀದಿಗೆ ಕೇಂದ್ರದ ಮನವೊಲಿಕೆ: ಕೇಂದ್ರ ಸಚಿವ ಅನಂತಕುಮಾರ್
ಬೆಂಗಳೂರು, ಫೆ. 14: ಬೆಂಗಳೂರು ಉಪನಗರ ರೈಲು ಸಂಚಾರ ವ್ಯವಸ್ಥೆಗಾಗಿ ಕೇಂದ್ರ ಸರಕಾರದ ಬಜೆಟ್‌ನಲ್ಲಿ 17 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಹೀಗಾಗಿ, ಉಪನಗರ ರೈಲು ಸಂಚಾರದ ಬೋಗಿಗಳನ್ನು ಬೆಂಗಳೂರು ಬಿಇಎಂಎಲ್‌ನಲ್ಲಿಯೇ ಖರೀದಿಸುವಂತೆ ಪ್ರಧಾನಮಂತ್ರಿ, ರಕ್ಷಣಾ ಸಚಿವ ಹಾಗೂ ಕೇಂದ್ರ ರೈಲ್ವೆ ಸಚಿವರ ಮನವೊಲಿಸುವುದಾಗಿ ಎಂದು ಕೇಂದ್ರ ಸಚಿವ ಅನಂತಕುಮಾರ್ ಭರವಸೆ ನೀಡಿದ್ದಾರೆ.
ಬುಧವಾರ ನಗರದ ಬಿಇಎಂಎಲ್ ಸಿದ್ಧಪಡಿಸಿರುವ ಮೂರು ಮೆಟ್ರೋ ಕೋಚ್‌ಗಳನ್ನು ಬೆಂಗಳೂರು ಮೆಟ್ರೋ ಬಿಎಂಆರ್‌ಸಿಎಲ್‌ಗೆ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಇಎಂಎಲ್‌ನಲ್ಲಿ ವಿಶ್ವದರ್ಜೆಯ ರೈಲ್ವೆ ಬೋಗಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ದೇಶದ ಎಲ್ಲ ಮೆಟ್ರೋ ಹಾಗೂ ಉಪನಗರ ರೈಲ್ವೆ ಬೋಗಿಗಳನ್ನು ಬೆಂಗಳೂರಿನ ಬೆಮಲ್‌ನಲ್ಲಿಯೇ ಖರೀದಿ ಮಾಡುವಂತೆ ತಿಳಿಸುತ್ತೇನೆ ಎಂದರು.
ಬೆಂಗಳೂರು ಬಿಇಎಂಎಲ್‌ಗೆ ರಕ್ಷಣಾ ಸಚಿವ, ಕೇಂದ್ರ ರೈಲ್ವೆ ಸಚಿವರನ್ನು ಕರೆತಂದು ಇಲ್ಲಿನ ಗುಣಮಟ್ಟದ ಕೋಚ್ ತಯಾರಿಕೆಯನ್ನು ಮನವರಿಕೆ ಮಾಡಲಾಗುವುದೆಂದ ಅವರು, ಬಿಇಎಂಎಲ್‌ನಲ್ಲಿ ಈಗಾಗಲೇ ವಿಶ್ವದರ್ಜೆಯ ಪ್ರಯಾಣಿಕ ಸ್ನೇಹಿ ಹಾಗೂ ಸುರಕ್ಷಿತ ಕೋಚ್‌ಗಳ ನಿರ್ಮಾಣಕ್ಕಾಗಿ ವಿಶೇಷ ಪರಿಣಿತಿ ಹೊಂದಿದೆ. ಸಾರ್ವಜನಿಕ ವಲಯ ಕಂಪನಿಯಾಗಿ ಬಿಇಎಂಎಲ್ ಅನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ರಕ್ಷಣಾ ಸಚಿವರು ಹಾಗೂ ಪ್ರಧಾನಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.
ನಗರಾಭಿವದ್ಧಿ ಸಚಿವ ಕೆ.ಜೆ. ಜಾರ್ಜ್ ಮಾತನಾಡಿ, ಮೆಟ್ರೊ ಮೊದಲ ಹಂತದ 42 ಕಿ.ಮೀ ಕಾಮಗಾರಿಯನ್ನು ಯಶಸ್ವಿಯಾಗಿ ಪೂರೈಸಲಾಗಿದೆ. ಮೊದಲ ಹಂತದ ವಿಸ್ತರಣೆ ಕಾಮಗಾರಿ ಕೆಂಗೇರಿ ಹಾಗೂ ವೈಟ್‌ಫೀಲ್ಡ್‌ವರೆಗೆ ನಡೆಯಲಿದೆ. ಉಪನಗರ ರೈಲು ಸಂಚಾರಕ್ಕಾಗಿ ಅಗತ್ಯವಿರುವ 12 ಸಾವಿರ ಕೋಟಿ ರೂ.ಗಳಲ್ಲಿ ಶೇ. 50ರಷ್ಟನ್ನು ರಾಜ್ಯ ಸರಕಾರ, ಉಳಿದ ಶೇ. 50ರಷ್ಟನ್ನು ಕೇಂದ್ರ ಸರಕಾರ ಭರಿಸಲಿದೆ. ಭೂ ಸ್ವಾಧೀನಕ್ಕಾಗಿ ಅಗತ್ಯವಿರುವ ಹೆಚ್ಚುವರಿ ಹಣವನ್ನು ರಾಜ್ಯ ಸರಕಾರ ಭರಿಸಬೇಕಾಗಿರುವುದರಿಂದ ಕೇಂದ್ರ ಸರಕಾರ ರಾಜ್ಯದೊಂದಿಗೆ ಕೈಜೋಡಿಸಬೇಕು ಎಂದು ಹೇಳಿದರು.
ಬಿಇಎಂಎಲ್‌ನ ವ್ಯವಸ್ಥಾಪಕ ನಿರ್ದೇಶಕ ಡಿ.ಕೆ. ಹೊಟ ಮಾತನಾಡಿ, ನಗರದಲ್ಲಿ 3 ಕೋಚ್‌ಗಳಿರುವ 50 ಮೆಟ್ರೋ ರೈಲುಗಳು ಸಂಚರಿಸುತ್ತಿವೆ. ಮುಂದಿನ ದಿನಗಳಲ್ಲಿ ಅವುಗಳನ್ನು 6 ಕೋಚ್‌ಗಳನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ 50 ಕೋಚ್‌ಗಳನ್ನು ಸಿದ್ಧಪಡಿಸಲು ಬಿಇಎಂಎಲ್‌ಗೆ ಟೆಂಡರ್ ನೀಡಲಾಗಿದೆ. ಇಂದು ಮೂರು ಕೋಚ್‌ಗಳನ್ನು ಹಸ್ತಾಂತರಿಸಲಾಯಿತು. ಉಳಿದ 46 ಕೋಚ್‌ಗಳನ್ನು 2019ರ ಡಿಸೆಂಬರ್ ಅಂತ್ಯದೊಳಗೆ ಹಸ್ತಾಂತರಿಸಲಾಗುವುದು ಎಂದರು.
ಮಹಿಳೆಯರಿಗೆ ಪ್ರತ್ಯೇಕ ಕೋಚ್‌ಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಮೊದಲ ಕೋಚ್‌ನ 2 ಪ್ರವೇಶ ದ್ವಾರಗಳು ಮಹಿಳೆಯರಿಗೆ ಮೀಸಲಿಡಲಾಗಿದೆ. ಇಂದು ಹಸ್ತಾಂತರಿಸಿರುವ ಮೂರು ಕೋಚ್‌ಗಳ ಸುರಕ್ಷತೆ ಕುರಿತಂತೆ ಪ್ರಾಯೋಗಿಕವಾಗಿ ಪರೀಕ್ಷೆ ನಡೆಸಿದ ನಂತರ ಮುಂದಿನ ಎಲ್ಲ ಕೋಚ್‌ಗಳ ನಿರ್ಮಾಣ ಮಾಡಲಾಗುವುದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ ಮೋಹನ್, ಶಾಸಕ ರಘು, ವಿಧಾನ ಪರಿಷತ್ ಸದಸ್ಯ ನಾರಾಯಣ, ಬಿಎಂಆರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್, ಬಿ.ಇ.ಎಂ.ಎಲ್ ಕಾರ್ಮಿಕ ಸಂಘದ ಅಧ್ಯಕ್ಷ ಇತರರು ಉಪಸ್ಥಿತರಿದ್ದರು.