×
Ad

ಶೀಘ್ರದಲ್ಲೇ ಕರ್ನಾಟಕ ಮುನ್ನೋಟ-2025 ಬಿಡುಗಡೆ: ಆರ್.ವಿ.ದೇಶಪಾಂಡೆ

Update: 2018-02-14 22:26 IST

ಬೆಂಗಳೂರು, ಫೆ.14: ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಸದ್ಯದಲ್ಲೆ ಕರ್ನಾಟಕ ಮುನ್ನೋಟ-2025 ಬಿಡುಗಡೆ ಮಾಡಲಾಗುವುದು ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕೆ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.

ಬುಧವಾರ ಭಾರತೀಯ ಕೈಗಾರಿಕೆಗಳ ಒಕ್ಕೂಟ ಏರ್ಪಡಿಸಿದ್ದ 10ನೆ ಆಪರೇಷನಲ್ ಎಕ್ಸಲೆನ್ಸ್ ಮತ್ತು ಪೀಪಲ್ ಎಕ್ಸಲೆನ್ಸ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೃಷಿ, ಪ್ರವಾಸೋದ್ಯಮ, ವೈಮಾನಿಕ ಕ್ಷೇತ್ರ ಸೇರಿದಂತೆ ಎಲ್ಲದರಲ್ಲೂ ಕೌಶಲ್ಯ ಅಗತ್ಯವಾಗಿದ್ದು, ಈ ಬಗ್ಗೆ ಉದ್ಯಮಿಗಳು ಹೆಚ್ಚು ಆಸಕ್ತಿ ವಹಿಸಬೇಕಾಗಿದೆ ಎಂದು ಆಶಿಸಿದರು.

ದೇಶದ ಎಂಜಿನಿಯರಿಂಗ್ ಪದವೀಧರರಲ್ಲಿ ಶೇ.65ರಷ್ಟು ಮತ್ತು ಎಂಬಿಎ ಪದವೀಧರರಲ್ಲಿ ಶೇ.50ರಷ್ಟು ಜನ ನಿರುದ್ಯೋಗಿಗಳಾಗಿದ್ದಾರೆ. ಒಂದೆಡೆ ಉದ್ದಿಮೆಗಳು ಬೆಳೆಯುತ್ತಿದ್ದರೂ ಉದ್ಯೋಗ ಸೃಷ್ಟಿ ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಈ ಸಮಸ್ಯೆಯನ್ನು ಬಗೆಹರಿಸಲು ಉದ್ಯಮಿಗಳು ಸ್ವ ಆಸಕ್ತಿ ವಹಿಸಬೇಕು ಎಂದು ಅವರು ತಿಳಿಸಿದರು.

2025ರ ಹೊತ್ತಿಗೆ ಅತ್ಯಧಿಕ ಸಂಖ್ಯೆಯಲ್ಲಿರುವ ಯುವ ಜನರಿಗೆ ಒಳ್ಳೆಯ ಉದ್ಯೋಗಗಳನ್ನು ಒದಗಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸದ್ಯಕ್ಕೆ 169 ಶತಕೋಟಿ ಡಾಲರ್‌ಗಳಷ್ಟಿರುವ ರಾಜ್ಯದ ಆರ್ಥಿಕತೆಯನ್ನು 2025ರ ಹೊತ್ತಿಗೆ 700 ಶತಕೋಟಿ ಡಾಲರ್‌ಗಳ ಅರ್ಥ ವ್ಯವಸ್ಥೆಯಾಗಿ ಬೆಳೆಸಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದರು.

ಮುಂಬರುವ ದಿನಗಳಲ್ಲಿ ಕೃತಕ ಬುದ್ಧಿಮತ್ತೆಯ ಆರ್ಥಿಕ ಬೆಳವಣಿಗೆಗಳ ಕೇಂದ್ರವಾಗಲಿದೆ. ಇದು ಉತ್ಪಾದನೆಯಿಂದ ಪ್ರಾರಂಭಗೊಂಡು ಆವಿಷ್ಕಾರ, ಕಾರ್ಮಿಕ ಶಕ್ತಿ, ಉತ್ಪಾದಕತೆ ಎಲ್ಲವನ್ನೂ ಆಮೂಲಾಗ್ರವಾಗಿ ಬದಲಾಯಿಸಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ರಾಜ್ಯ ಸರಕಾರವು ಅತ್ಯಾಧುನಿಕ ಡೇಟಾ ಸೈನ್ಸಸ್ ಮತ್ತು ಆರ್ಟಿಫಿಷಿಯಲ್ ಇಂಟಿಲಿಜೆನ್ಸ್ ಕೇಂದ್ರವನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು.

ರಾಜ್ಯದಲ್ಲಿ ವಿದ್ಯುತ್ ಚಾಲಿತ ವಾಹನ ಮತ್ತು ಇಂಧನ ಸಂರಕ್ಷಣೆ ನೀತಿಯನ್ನು ಜಾರಿಗೆ ತಂದ ಎರಡೇ ತಿಂಗಳಲ್ಲಿ ಒಂದು ಸಾವಿರ ಕೋಟಿ ರೂ.ಬಂಡವಾಳ ಹರಿದು ಬಂದಿದೆ. ಮುಂದಿನ ದಿನಗಳಲ್ಲಿ ವಿದ್ಯುತ್ ಚಾಲಿತ ವಾಹನಗಳ ಉದ್ದಿಮೆ ಕ್ಷೇತ್ರವು ಕ್ರಾಂತಿಕಾರಕ ಬೆಳವಣಿಗೆಗೆ ಸಾಕ್ಷಿಯಾಗಲಿದೆ.
-ಆರ್.ವಿ.ದೇಶಪಾಂಡೆ, ಬೃಹತ್ ಕೈಗಾರಿಕಾ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News