ಭಾವೈಕ್ಯತೆಗಾಗಿ ಉತ್ಸವ ಆಚರಣೆ: ಶರಣಪ್ರಕಾಶ್‌ಪಾಟೀಲ್
ಕಲಬುರಗಿ, ಫೆ.14: ಹೈದರಾಬಾದ್-ಕರ್ನಾಟಕ ಭಾಗದ ಇತಿಹಾಸವನ್ನು ಜನಸಾಮಾನ್ಯರಿಗೆ ಪರಿಚಯಿಸಿ, ಭಾವೈಕ್ಯತೆಯನ್ನು ಮೂಡಿಸುವ ಉದ್ದೇಶದಿಂದ ರಾಷ್ಟ್ರಕೂಟ ಮತ್ತು ಬಹಮನಿ ಸುಲ್ತಾನರ ಉತ್ಸವವನ್ನು ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರಕೂಟರ ಉತ್ಸವದ ಜೊತೆಯಲ್ಲಿ ಬಹಮನಿ ಸುಲ್ತಾನರ ಉತ್ಸವವನ್ನು ಮಾಡುತ್ತಿದ್ದೇವೆ. ರಾಷ್ಟ್ರಕೂಟರ ಉತ್ಸವಕ್ಕೂ ಬಿಜೆಪಿಯವರು ವಿರೋಧ ಮಾಡುತ್ತಾರೆಯೇ? ಇತಿಹಾಸಕಾರರು, ಸಾಹಿತಿಗಳು ಸೇರಿದಂತೆ ಎಲ್ಲರ ಜತೆ ಚರ್ಚಿಸಿ ಒಂದು ದಿನದ ಉತ್ಸವವನ್ನು ಆಚರಿಸಲು ಉದ್ದೇಶಿಸಲಾಗಿದೆ ಎಂದರು.
ಆದರೆ, ಬಿಜೆಪಿಯವರು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಅವರಿಗೆ ಬುದ್ಧಿ ಭ್ರಮಣೆಯಾಗಿದೆ. ನಾವು ಯಾರ ಜಯಂತಿಯನ್ನು ಆಚರಿಸುತ್ತಿಲ್ಲ. ಕೇವಲ ಒಂದು ದಿನದ ಉತ್ಸವ ಮಾಡುತ್ತಿದ್ದೇವೆ. ಬಿಜೆಪಿಯವರು ಮಾಹಿತಿ ಇಲ್ಲದೆ ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಶರಣಪ್ರಕಾಶ್ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.