ಭಾರತದ ಆರು ಬಾಕ್ಸರ್‌ಗಳು ಫೈನಲ್‌ಗೆ ಲಗ್ಗೆ

Update: 2018-02-14 18:33 GMT

ಜಕಾರ್ತ, ಫೆ.14: ಯುತ್ ವರ್ಲ್ಡ್ ಚಾಂಪಿಯನ್ ಶಶಿ ಚೋಪ್ರಾ(57 ಕೆಜಿ) ಸಹಿತ ಭಾರತದ ಆರು ಬಾಕ್ಸರ್‌ಗಳು ಏಷ್ಯನ್ ಗೇಮ್ಸ್ ಟೆಸ್ಟ್ ಇವೆಂಟ್‌ನಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಇತರ ನಾಲ್ವರು ಬಾಕ್ಸರ್‌ಗಳು ಕಂಚಿಗೆ ತೃಪ್ತಿಪಟ್ಟುಕೊಂಡಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ಶಶಿ ಹಾಗೂ ಪವಿತ್ರಾ(60ಕೆಜಿ) ಫೈನಲ್‌ಗೆ ತಲುಪಿದ್ದಾರೆ. ಪುರುಷರ ವಿಭಾಗದಲ್ಲಿ ಇಂಡಿಯಾ ಓಪನ್‌ನಲ್ಲಿ ಚಿನ್ನದ ಪದಕ ಜಯಿಸಿರುವ ಮನೀಶ್ ಕೌಶಿಕ್(60ಕೆಜಿ), ಮೂರು ಬಾರಿಯ ಕಿಂಗ್ಸ್‌ಕಪ್ ಚಾಂಪಿಯನ್ ಕೆ.ಶ್ಯಾಮ್ ಕುಮಾರ್(49ಕೆಜಿ), ಶೇಖ್ ಸಲ್ಮಾನ್ ಅನ್ವರ್(52ಕೆಜಿ) ಹಾಗೂ ಆಶೀಷ್(64ಕೆಜಿ) ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದಾರೆ.

ಸೆಮಿ ಫೈನಲ್‌ನಲ್ಲಿ ಶಶಿ ಫಿಲಿಪಿನೊ ರಿಝಾರನ್ನು 4-1 ರಿಂದ ಸೋಲಿಸಿದ್ದು ಫೈನಲ್‌ನಲ್ಲಿ ಥಾಯ್ಲೆಂಡ್‌ನ ರಚದಪಾರ್ನ್ ಸಯೊಟೊರನ್ನು ಎದುರಿಸಲಿದ್ದಾರೆ.

ಮತ್ತೊಂದೆಡೆ, ಪವಿತ್ರಾ ದಕ್ಷಿಣ ಕೊರಿಯಾದ ಹ್ವಾಂಗ್ ಹಿಜುಂಗ್‌ರನ್ನು 5-0 ಅಂತರದಿಂದ ಮಣಿಸಿದರು. ಮುಂದಿನ ಸುತ್ತಿನಲ್ಲಿ ಥಾಯ್ಲೆಂಡ್‌ನ ನಿಲಾವನ್‌ರನ್ನು ಎದುರಿಸಲಿದ್ದಾರೆ.

ಪುರುಷರ ಸ್ಪರ್ಧೆಯಲ್ಲಿ ಹಾಲಿ ರಾಷ್ಟ್ರೀಯ ಚಾಂಪಿಯನ್ ಮನೀಶ್ ಚೈನೀಸ್ ತೈಪೆಯ ಲೈ ಚು-ಯೆನ್‌ರನ್ನು 5-0 ಅಂತರದಿಂದ ಸೋಲಿಸಿದ್ದು ಫೈನಲ್‌ನಲ್ಲಿ ಜಪಾನ್‌ನ ರೆಂಟಾರೊ ಕಿಮುರಾರನ್ನು ಎದುರಿಸಲಿದ್ದಾರೆ.

ಎದುರಾಳಿ ಮಲೇಷ್ಯಾದ ಮುಹಮ್ಮದ್ ಫಯಾದ್ ಸ್ಪರ್ಧೆಯಿಂದ ಹಿಂದೆ ಸರಿದ ಕಾರಣ ಶ್ಯಾಮ್ ಕುಮಾರ್(49ಕೆ.ಜಿ.) ಫೈನಲ್‌ಗೆ ತಲುಪಿದ್ದಾರೆ.

ಇಂಡೋನೇಷ್ಯಾದ ಲಿಬರ್ಟಸ್ ಘಾ ವಿರುದ್ಧ ಒಮ್ಮತದ ತೀರ್ಪಿನಲ್ಲಿ ಮುನ್ನಡೆ ಸಾಧಿಸಿರುವ ಆಶೀಷ್ ಫೈನಲ್‌ಗೆ ತಲುಪಿದ್ದು, ಫಿಲಿಪಿನೊ ರೇ ಅವರನ್ನು ಎದುರಿಸಲಿದ್ದಾರೆ.

ಮುಹಮ್ಮದ್ ಖಾನ್(56ಕೆಜಿ), ರಿತು ಗ್ರೆವಾಲ್(51ಕೆಜಿ), ಪವನ್ ಕುಮಾರ್(69ಕೆಜಿ)ಹಾಗೂ ಆಶೀಷ್ ಕುಮಾರ್(75ಕೆಜಿ) ಕಂಚು ಜಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News