ಕೇಸರಿ ಗುಂಪಿನಿಂದ ಮತಾಂತರ ಕಾರ್ಯಕ್ರಮ: ಮಾಧ್ಯಮದವರ ಮೇಲೆ ಕಾರ್ಯಕರ್ತರ ಹಲ್ಲೆ

Update: 2018-02-14 18:46 GMT

ಕೋಲ್ಕತಾ, ಫೆ.14: ಕೇಂದ್ರ ಕೋಲ್ಕತಾದ ರಾಣಿ ರಷ್ಮೊನಿ ಅವೆನ್ಯೂದಲ್ಲಿ ಹಿಂದೂ ಮೂಲಭೂತವಾದಿ ಸಂಘಟನೆ ‘ಹಿಂದೂ ಸಂಹತಿ’ ಆಯೋಜಿಸಿದ್ದ ಮುಸ್ಲಿಮ್ ಕುಟುಂಬವೊಂದರ 14 ಸದಸ್ಯರ ಮತಾಂತರ ಕಾರ್ಯಕ್ರಮದಲ್ಲಿ ಮಾಧ್ಯಮದವರ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಯಾವ ಕಾರಣಕ್ಕೆ ಮತಾಂತರ ನಡೆಸಲಾಗಿದೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಯಿಂದ ಕುಪಿತರಾದ ‘ಹಿಂದು ಸಂಹತಿ’ಯ ಕಾರ್ಯಕರ್ತರು ಮಾಧ್ಯಮದವರ ಮೇಲೆ ಹಲ್ಲೆ ನಡೆಸಿದ್ದಾರೆ.ಹುಸೈನ್ ಅಲಿ ಎಂಬಾತನ ಕುಟುಂಬದ 14 ಸದಸ್ಯರು ಬಹಿರಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದು ಇವರಲ್ಲಿ ಮಕ್ಕಳೂ ಸೇರಿದ್ದಾರೆ. ಇವರನ್ನು ಬಲವಂತವಾಗಿ ಮತಾಂತರ ಗೊಳಿಸಲಾಗುತ್ತಿದೆಯೇ ಎಂದು ಮಾಧ್ಯಮದವರು ಪ್ರಶ್ನೆ ಕೇಳಿದಾಗ ಈ ಘಟನೆ ನಡೆದಿದೆ. ಮತಾಂತರಗೊಂಡಿರುವ ಕುಟುಂಬದ ಸದಸ್ಯರೊಡನೆ ಕಾರ್ಯಕ್ರಮದ ಸಂದರ್ಭ ಮಾತನಾಡಬಾರದು ಎಂದು ಮಾಧ್ಯಮದವರಿಗೆ ಮೊದಲೇ ತಿಳಿಸಲಾಗಿತ್ತು. ಸಂಘಟನೆಯ 14ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ 14 ಮುಸಲ್ಮಾನರ ಮತಾಂತರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದು ‘ಘರ್ ವಾಪ್ಸಿ’ (ಮನೆಗೆ ಮರಳಿದ್ದು) ಯಾಗಿದ್ದು ಇಂತಹ ಕಾರ್ಯಕ್ರಮಗಳನ್ನು ಪಶ್ಚಿಮ ಬಂಗಾಲದ ವಿವಿಧೆಡೆ ಬಹಿರಂಗವಾಗಿ ನಡೆಸಲಾಗುತ್ತದೆ ಎಂದು ಸಂಘಟನೆಯ ಮುಖ್ಯಸ್ಥ ತಪನ್ ಘೋಷ್ ತಿಳಿಸಿದ್ದಾರೆ.

ಹಲ್ಲೆ ಘಟನೆಯನ್ನು ಪ.ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಖಂಡಿಸಿದ್ದು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಸಂಘಟನೆಯಿಂದ ಅಂತರ ಕಾಯ್ದುಕೊಂಡಿರುವ ಪ.ಬಂಗಾಲ ಬಿಜೆಪಿಯ ಅಧ್ಯಕ್ಷ ದಿಲೀಪ್ ಘೋಷ್, ಘಟನೆಯನ್ನು ಖಂಡಿಸಿದ್ದಾರೆ. ಎಡಪಕ್ಷದ ಮುಖಂಡ ಸುಜನ್ ಚಕ್ರವರ್ತಿ ಕೂಡಾ ಘಟನೆಯನ್ನು ಖಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News