ದಕ್ಷಿಣ ಆಫ್ರಿಕದಲ್ಲಿ ಸ್ಪಿನ್ನರ್‌ಗಳ ದಾಖಲೆ ಮುರಿದ ಚಹಾಲ್-ಕುಲ್‌ದೀಪ್

Update: 2018-02-14 18:37 GMT

ಪೋರ್ಟ್ ಎಲಿಝಬೆತ್, ಫೆ.14: ಭಾರತದ ಯಜುವೇಂದ್ರ ಚಹಾಲ್ ಹಾಗೂ ಕುಲ್‌ದೀಪ್ ಯಾದವ್ ದಕ್ಷಿಣ ಆಫ್ರಿಕದಲ್ಲಿ ನಡೆದ ದ್ವಿಪಕ್ಷೀಯ ಏಕದಿನ ಸರಣಿಯಲ್ಲಿ ಗರಿಷ್ಠ ವಿಕೆಟ್ ಪಡೆದ ವಿದೇಶಿ ಸ್ಪಿನ್ನರ್‌ಗಳೆಂಬ ಕೀರ್ತಿಗೆ ಭಾಜನರಾಗಿ ಹೊಸ ದಾಖಲೆ ನಿರ್ಮಿಸಿದ್ದಾರೆ.

1998-99ರಲ್ಲಿ ವೆಸ್ಟ್‌ಇಂಡೀಸ್ ಆಲ್‌ರೌಂಡರ್ ಕೀಥ್ ಅಥರ್ಟನ್(7 ಏಕದಿನ, 12 ವಿಕೆಟ್) ನಿರ್ಮಿಸಿರುವ ದಾಖಲೆಯನ್ನು ಚಹಾಲ್-ಯಾದವ್ ಜೋಡಿ ಮುರಿದಿದೆ.

 ಡೇವಿಡ್ ಮಿಲ್ಲರ್‌ರನ್ನು ಪೆವಿಲಿಯನ್‌ಗೆ ಕಳುಹಿಸುವ ಮೂಲಕ ಸರಣಿಯಲ್ಲಿ ಒಟ್ಟು 13 ವಿಕೆಟ್‌ಗಳನ್ನು ಪೂರೈಸಿದ ಚಹಾಲ್ ಅವರು ಅರ್ಥಟನ್ ದಾಖಲೆಯನ್ನು ಮೊದಲು ಮುರಿದರು. ಐದನೇ ಏಕದಿನದಲ್ಲಿ 57 ರನ್‌ಗೆ 4 ವಿಕೆಟ್‌ಗಳನ್ನು ಉರುಳಿಸಿ ಸರಣಿಯಲ್ಲಿ ಒಟ್ಟು 16 ವಿಕೆಟ್‌ಗಳನ್ನು ಪಡೆದ ಕುಲ್‌ದೀಪ್ ಯಾದವ್ ಕೂಡ ವಿಂಡೀಸ್ ಬೌಲರ್ ದಾಖಲೆಯನ್ನು ಪುಡಿಗಟ್ಟಿದರು.

 ಆಫ್-ಸ್ಪಿನ್ನರ್ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಆಗಿದ್ದ ಅರ್ಥರ್ಟನ್ 7 ಏಕದಿನ ಪಂದ್ಯಗಳಲ್ಲಿ 12 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆದಾಗ್ಯೂ ವಿಂಡೀಸ್ 1-6 ರಿಂದ ಸರಣಿ ಸೋತಿತ್ತು. ಶೇನ್ ವಾರ್ನ್ 1993-94ರಲ್ಲಿ ದಕ್ಷಿಣ ಆಫ್ರಿಕದಲ್ಲಿ ನಡೆದ 8 ಪಂದ್ಯಗಳ ಏಕದಿನ ಸರಣಿಯಲ್ಲಿ ಆಫ್ರಿಕದ 11 ವಿಕೆಟ್‌ಗಳನ್ನು, 1996-97ರ 7 ಏಕದಿನಗಳಲ್ಲಿ 10 ವಿಕೆಟ್‌ಗಳನ್ನು ಉರುಳಿಸಿದ್ದರು.

1992-93ರಲ್ಲಿ ದಕ್ಷಿಣ ಆಫ್ರಿಕ ನೆಲದಲ್ಲಿ ನಡೆದ 7 ಏಕದಿನ ಪಂದ್ಯಗಳಲ್ಲಿ ಭಾರತದ ಮಾಜಿ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ 5 ವಿಕೆಟ್‌ಗಳನ್ನು ಕಬಳಿಸಿದ್ದರು. ಇದು ಭಾರತದ ಸ್ಪಿನ್ನರ್ ಆಫ್ರಿಕ ನೆಲದಲ್ಲಿ ತೋರಿದ ಉತ್ತಮ ಪ್ರದರ್ಶನವಾಗಿತ್ತು. ದಕ್ಷಿಣ ಆಫ್ರಿಕ ನೆಲದಲ್ಲಿ ನಡೆದ ದ್ವಿಪಕ್ಷೀಯ ಏಕದಿನ ಸರಣಿಯಲ್ಲಿ ಗರಿಷ್ಠ ವಿಕೆಟ್ ಪಡೆದ ವೇಗ ಅಥವಾ ಸ್ಪಿನ್ ಬೌಲರ್‌ಗಳೆಂದರೆ: ಇಂಗ್ಲೆಂಡ್‌ನ ಕಬೀರ್ ಅಲಿ(2004-05, 7 ಏಕದಿನ, 13 ವಿಕೆಟ್),ಆಸ್ಟ್ರೇಲಿಯದ ಮಿಚೆಲ್ ಜಾನ್ಸನ್(2008-09, 5 ಏಕದಿನ, 13 ವಿಕೆಟ್), ಜೇಸನ್ ಗಿಲ್ಲೆಸ್ಪಿ(2001-02, 6 ಪಂದ್ಯಗಳು, 12 ವಿಕೆಟ್) ಹಾಗೂ ಇಂಗ್ಲೆಂಡ್‌ನ ವೇಗದ ಬೌಲರ್ ಡರೆನ್ ಗಫ್( 1995-96, 1990-00, 2004- 05ರಲ್ಲಿ 11 ವಿಕೆಟ್)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News