ಕೇವಲ ಕಳೆದೆರಡು ತಿಂಗಳುಗಳಲ್ಲಿ ಅಮೆರಿಕದ ಶಾಲೆಗಳಲ್ಲಿ ನಡೆದಿರುವ ಶೂಟೌಟ್ ಪ್ರಕರಣಗಳು ಎಷ್ಟು ?

Update: 2018-02-15 06:35 GMT

ವಾಷಿಂಗ್ಟನ್, ಫೆ. 15: ಬುಧವಾರ ಕನಿಷ್ಠ 17 ಮಂದಿಯನ್ನು ಬಲಿ ಪಡೆದ ಫ್ಲಾರಿಡಾದ ಮರ್ಜೊರಿ ಸ್ಟೋನ್ ಮ್ಯಾನ್ ಡೌಗ್ಲಾಸ್ ಹೈಸ್ಕೂಲಿನಲ್ಲಿ ನಡೆದ ಶೂಟೌಟ್ ಪ್ರಕರಣವು ಈ ವರ್ಷದ ಮೊದಲೆರಡು ತಿಂಗಳಲ್ಲಿ ಅಮೆರಿಕಾದ ಶಾಲೆಗಳಲ್ಲಿ ನಡೆದ ಒಟ್ಟು ಶೂಟೌಟ್ ಪ್ರಕರಣಗಳನ್ನು 18ಕ್ಕೇರಿಸಿದೆ.

ಅಮೆರಿಕದ ಸಾರ್ವಜನಿಕ ಸ್ಥಳದಲ್ಲಿ ಗುಂಡಿನ ದಾಳಿಗಳು ಸಾಮಾನ್ಯವಾಗಿ ಬಿಟ್ಟಿವೆ. ಶಾಲೆಗಳಲ್ಲಂತೂ ಇಂತಹ ಶೂಟೌಟ್ ಸಂಭಾವ್ಯತೆಯನ್ನು ಗಮನದಲ್ಲಿಟ್ಟುಕೊಂಡು ನಿಯಮಿತವಾಗಿ ವಿದ್ಯಾರ್ಥಿಗಳಿಗೆ ಇಂತಹ ಸನ್ನಿವೇಶಗಳನ್ನು ಹೇಗೆ ನಿಭಾಯಿಸಬೇಕೆಂಬ ತರಬೇತಿ ಕಾರ್ಯಕ್ರಮಗಳೂ ನಡೆಯುತ್ತವೆ.

ಈ ವರ್ಷದ ಎರಡು ತಿಂಗಳಲ್ಲಿ ನಡೆದ 18 ಶಾಲೆಗಳಲ್ಲಿನ ಶೂಟೌಟ್ ಪ್ರಕರಣಗಳಲ್ಲಿ ಎಂಟು ಪ್ರಕರಣಗಳು ಪ್ರಾಥಮಿಕ ಶಾಲೆಗಳಿಂದ ಹಿಡಿದು ವಿಶ್ವವಿದ್ಯಾಲಯಗಳಲ್ಲಿ ನಡೆದಿದ್ದವು. ಎರಡು ಆತ್ಮಹತ್ಯಾ ದಾಳಿಗಳಾಗಿದ್ದರೆ ಉಳಿದವು ವಿದ್ಯಾರ್ಥಿಗಳನ್ನು ಗುರಿಯಾಗಿಸಿತ್ತು ಎಂದು ಎವ್ರಿಟೌನ್ ಫಾರ್ ಗನ್ ಸೇಫ್ಟಿ ಸಂಸ್ಥೆ ತಿಳಿಸಿದೆ.

ಬುಧವಾರದ ಶೂಟೌಟ್ ಈ ವರ್ಷ ನಡೆದ ಅತ್ಯಂತ ಭೀಕರ ಘಟನೆಯೆಂದು ಹೇಳಲಾಗಿದೆ. ಜನವರಿ 23ರಂದು ಕೆಂಟಕಿ ಹೈಸ್ಕೂಲಿನಲ್ಲಿ ನಡೆದ ಘಟನೆಯೊಂದರಲ್ಲಿ 15 ವರ್ಷದ ಬಾಲಕನೊಬ್ಬ ಗುಂಡು ಹಾರಿಸಿ ಇಬ್ಬರು ವಿದ್ಯಾರ್ಥಿಗಳನ್ನು ಕೊಂದಿದ್ದನಲ್ಲದೆ ಹಲವು ಮಂದಿ ಇತರರನ್ನು ಗಾಯಗೊಳಿಸಿದ್ದ.

ಅದಕ್ಕಿಂತ ಒಂದು ದಿನ ಮೊದಲು ಟೆಕ್ಸಾಸ್ ನ ಶಾಲೆಯ ಕೆಫೆಟೇರಿಯಾದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಹುಡುಗಿಯೊಬ್ಬಳು ಗಾಯಗೊಂಡಿದ್ದಳು. ಅದೇ ದಿನ ನ್ಯೂ ಓರ್ಲಿಯನ್ಸ್ ಹೈಸ್ಕೂಲಿನ ಪಾರ್ಕಿಂಗ್ ಸ್ಥಳದಲ್ಲಿ 14 ವರ್ಷದ ಬಾಲಕನೊಬ್ಬನಿಗೆ ಗುಂಡುತಾಗಿತ್ತು.

ಜನವರಿಯಲ್ಲಿ ಇಯೊವ, ವಾಷಿಂಗ್ಟನ್ ಹಾಗೂ ಕ್ಯಾಲಿಫೋರ್ನಿಯಾದಲ್ಲಿ ಶೂಟೌಟ್ ಪ್ರಕರಣಗಳು ವರದಿಯಾಗಿದ್ದವು. ಈ ಹಿಂದಿನ ಅತ್ಯಂತ ಭೀಕರ ಶೂಟೌಟ್ ಡಿಸೆಂಬರ್ 14, 2012ರಂದು ನಡೆದಿದ್ದು 20 ವರ್ಷದ ಆಡಂ ಲನ್ಝ ಗುಂಡಿನ ದಾಳಿ ನಡೆಸಿದಾಗ 20 ಶಾಲಾ ಮಕ್ಕಳು ಹಾಗೂ ಆರು ಶಿಕ್ಷಕರು ಕನೆಕ್ಟಿಕಟ್ ಎಂಬಲ್ಲಿನ ಸ್ಯಾಂಡಿ ಹುಕ್ ಎಲಿಮೆಂಟರಿ ಸ್ಕೂಲ್, ನ್ಯೂಟೌನ್ ನಲ್ಲಿ  ಮೃತಪಟ್ಟಿದ್ದರು.

ಜನವರಿ 2013ರಿಂದೀಚೆಗೆ ಅಮೆರಿಕದ ಶಾಲೆಗಳಲ್ಲಿ 291 ಶೂಟೌಟ್ ಪ್ರಕರಣಗಳು ನಡೆದಿವೆ ಎಂದು ಎವ್ರಿಟೌನ್ ಫಾರ್ ಗನ್ ಸೇಫ್ಟ್ ಸಂಸ್ಥೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News