ಭಾರತಕ್ಕೆ ಗೆಲುವಿನ ಓಟ ಮುಂದುವರಿಸುವ ತವಕ

Update: 2018-02-15 18:16 GMT

ಸೆಂಚೂರಿಯನ್, ಫೆ.15: ಸರಣಿಯ ಎರಡನೇ ಪಂದ್ಯವನ್ನು ಆಡಿರುವ ಸೆಂಚೂರಿಯನ್‌ನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕ ತಂಡ ಆರನೇ ಹಾಗೂ ಕೊನೆಯ ಪಂದ್ಯವನ್ನು ಶುಕ್ರವಾರ ಆಡಲಿವೆ.

ಈಗಾಗಲೇ ಐದನೇ ಏಕದಿನ ಪಂದ್ಯವನ್ನು ಜಯಿಸುವ ಮೂಲಕ 4-1 ರಿಂದ ಐತಿಹಾಸಿಕ ಸರಣಿ ಜಯಿಸಿರುವ ಭಾರತ ಯಾವುದೇ ಒತ್ತಡವಿಲ್ಲದೇ ಕಣಕ್ಕಿಳಿಯಲು ಸಜ್ಜಾಗಿದೆ. ಮತ್ತೊಂದೆಡೆ, ದಕ್ಷಿಣ ಆಫ್ರಿಕ ಆರನೇ ಪಂದ್ಯವನ್ನು ಜಯಿಸುವ ಮೂಲಕ ಭಾರತದ ಸ್ಪಿನ್ನರ್‌ಗಳನ್ನು ದಿಟ್ಟವಾಗಿ ಎದುರಿಸಬಲ್ಲೆ ಎಂದು ಸಾಬೀತುಪಡಿಸುವ ವಿಶ್ವಾಸದಲ್ಲಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ ಪೋರ್ಟ್ ಎಲಿಝಬೆತ್‌ನಲ್ಲಿ ನಡೆದ ಐದನೇ ಏಕದಿನ ಪಂದ್ಯವನ್ನು 73 ರನ್‌ಗಳಿಂದ ಗೆದ್ದುಕೊಂಡಿತ್ತು. ಈ ಮೂಲಕ ಸರಣಿಯಲ್ಲಿ 4-1 ಮುನ್ನಡೆ ಸಾಧಿಸಿತ್ತು. ಟೆಸ್ಟ್ ಸರಣಿಯನ್ನು 1-2 ರಿಂದ ಸೋತಿದ್ದ ಭಾರತ ತಂಡ ದಕ್ಷಿಣ ಆಫ್ರಿಕ ನೆಲದಲ್ಲಿ ಮೊದಲ ಬಾರಿ ಏಕದಿನ ಸರಣಿಯನ್ನು ಜಯಿಸಿ ಇತಿಹಾಸ ನಿರ್ಮಿಸಿದ್ದಲ್ಲದೆ ಐಸಿಸಿ ಟೀಮ್ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಪಡೆದಿತ್ತು. ಈ ಗೆಲುವು ಭಾರತೀಯ ಪಾಳಯದಲ್ಲಿ ನೈತಿಕ ಸ್ಥೈರ್ಯ ತಂದಿದೆ. ಸರಣಿ ಗೆಲುವಿನಿಂದ ತೃಪ್ತರಾಗದ ಕೊಹ್ಲಿ ಶುಕ್ರವಾರ ನಡೆಯಲಿರುವ 6ನೇ ಪಂದ್ಯವನ್ನು ಜಯಿಸುವುದಾಗಿ ಹೇಳಿದ್ದಾರೆ.

‘‘ನಾವು 5-1 ರಿಂದ ಸರಣಿ ಜಯಿಸಲು ಬಯಸಿದ್ದೇವೆ. ಗೆಲುವು ಸಾಧಿಸುವುದು ನಮ್ಮ ಮೊದಲ ಆದ್ಯತೆ. ಪಂದ್ಯ ಗೆಲ್ಲಲು ನಾವು ಏನೂ ಬೇಕಾದರೂ ಮಾಡುತ್ತೇವೆ’’ ಎಂದು ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ.

ಭಾರತ ವಿರುದ್ಧ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯನ್ನು ಆಡುವ ಮೊದಲು ಆರನೇ ಏಕದಿನ ಪಂದ್ಯ ಗೆಲ್ಲುವುದು ದಕ್ಷಿಣ ಆಫ್ರಿಕ ತಂಡಕ್ಕೆ ಅತ್ಯಂತ ಮುಖ್ಯವಾಗಿದೆ.

ದಕ್ಷಿಣ ಆಫ್ರಿಕ ತಂಡ ಏಕದಿನ ಸರಣಿ ಸೋತಿದ್ದಲ್ಲದೆ, ವಿಶ್ವದ ನಂ.1 ಏಕದಿನ ಪಟ್ಟವನ್ನು ಕಳೆದುಕೊಂಡಿದೆ. ಭಾರತ ಸ್ಪಿನ್ ಬೌಲರ್‌ಗಳ ಎದುರು ಬ್ಯಾಟಿಂಗ್ ಮಾಡಲು ಪರದಾಡುತ್ತಿರುವ ದಕ್ಷಿಣ ಆಫ್ರಿಕ ಬ್ಯಾಟ್ಸ್‌ಮನ್‌ಗಳ ನೈತಿಕ ಸ್ಥೈರ್ಯ ಕುಗ್ಗಿಹೋಗಿದೆ. ಎಫ್‌ಡು ಪ್ಲೆಸಿಸ್ ಹಾಗೂ ಕ್ವಿಂಟನ್ ಡಿಕಾಕ್ ಗಾಯಗೊಂಡಿರುವುದು ದಕ್ಷಿಣ ಆಫ್ರಿಕಕ್ಕೆ ಭಾರೀ ಹಿನ್ನಡೆ ಉಂಟು ಮಾಡಿದೆ.

ಭಾರತ ಸೆಂಚೂರಿಯನ್‌ನಲ್ಲಿ ಆಡಿರುವ 2ನೇ ಪಂದ್ಯವನ್ನು 9 ವಿಕೆಟ್‌ಗಳಿಂದ ಗೆದ್ದುಕೊಂಡಿದ್ದು, ಅದೇ ಪ್ರದರ್ಶನ ಪುನರಾವರ್ತಿಸುವ ವಿಶ್ವಾಸದಲ್ಲಿದೆ. 2ನೇ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕವನ್ನು 118 ರನ್‌ಗೆ ನಿಯಂತ್ರಿಸಿ ಸುಲಭ ಜಯ ಸಾಧಿಸಿತ್ತು.

ಉಭಯ ತಂಡಗಳು ಸೆಂಚೂರಿಯನ್‌ನಲ್ಲಿ ಆರು ಬಾರಿ ಮುಖಾಮುಖಿಯಾಗಿದ್ದು ಭಾರತ 3ರಲ್ಲಿ ಜಯ, 2ರಲ್ಲಿ ಸೋತಿದೆ. ಒಂದು ಪಂದ್ಯದಲ್ಲಿ ಫಲಿತಾಂಶ ಬರಲಿಲ್ಲ.

ಭಾರತ ತಂಡ ಕೆಲವು ಆಟಗಾರರಿಗೆ ಆಡುವ ಅವಕಾಶ ಕಲ್ಪಿಸುವ ಸಾಧ್ಯತೆಯಿದೆ.

ಮನೀಷ್ ಪಾಂಡೆ, ಮುಹಮ್ಮದ್ ಶಮಿ ಹಾಗೂ ಶಾರ್ದೂಲ್ ಠಾಕೂರ್ ಆಡುವ 11ರ ಬಳಗ ಸೇರುವ ಸಾಧ್ಯತೆಯಿದೆ.ಪ್ರಸ್ತುತ ಸರಣಿಯಲ್ಲಿ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್‌ಗಳು ಮಿಂಚಿಲ್ಲ. ಹಾಗಾಗಿ ಭಾರತದ ಬ್ಯಾಟಿಂಗ್ ಸರದಿ ಬಲಿಷ್ಠ ಪಡಿಸಲು ಅವಕಾಶ ನೀಡುವ ನಿರೀಕ್ಷೆಯಿದೆ.

ಎಬಿಡಿ ವಿಲಿಯರ್ಸ್ ದಕ್ಷಿಣ ಆಫ್ರಿಕದ ಪ್ರಮುಖ ಆಟಗಾರನಾಗಿದ್ದು, ಹಾಶೀಮ್ ಅಮ್ಲ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಹೆನ್ರಿಕ್ ಕ್ಲಾಸೆನ್ ದೊಡ್ಡ ಹೊಡೆತದಿಂದ ಗಮನಸೆಳೆಯುತ್ತಿದ್ದಾರೆ. ಶುಕ್ರವಾರ ದಕ್ಷಿಣ ಆಫ್ರಿಕ ಪಂದ್ಯವನ್ನು ಜಯಿಸಿ ಟ್ವೆಂಟಿ-20 ಸರಣಿಗೆ ಸಜ್ಜಾಗಬೇಕಾದರೆ ಎಲ್ಲ ಆಟಗಾರರು ಸಾಂಘಿಕ ಪ್ರದರ್ಶನ ನೀಡುವ ಅಗತ್ಯವಿದೆ.

ಮುಖ್ಯಾಂಶಗಳು

►ಒಂದು ವೇಳೆ ಭಾರತ 6ನೇ ಏಕದಿನ ಪಂದ್ಯವನ್ನು ಜಯಿಸಿದರೆ, ದಕ್ಷಿಣ ಆಫ್ರಿಕ ತಂಡ ಎರಡನೇ ಬಾರಿ ಸ್ವದೇಶದಲ್ಲಿ ಐದು ಏಕದಿನ ಪಂದ್ಯಗಳಲ್ಲಿ ಸೋತ ದಾಖಲೆ ಬರೆಯಲಿದೆ. ದಕ್ಷಿಣ ಆಫ್ರಿಕ ಈ ಹಿಂದೆ 2002ರಲ್ಲಿ ಆಸ್ಟ್ರೇಲಿಯ ವಿರುದ್ಧ ಸ್ವದೇಶದಲ್ಲಿ 1-5ರಿಂದ ಸೋತಿತ್ತು.

►ವಿರಾಟ್ ಕೊಹ್ಲಿ ನಾಯಕನಾಗಿ 48 ಏಕದಿನ ಪಂದ್ಯಗಳ ಪೈಕಿ 37ರಲ್ಲಿ ಜಯ ಸಾಧಿಸಿದ್ದಾರೆ. ಕ್ಲೈವ್ ಲಾಯ್ಡಾ, ಹ್ಯಾನ್ಸಿ ಕ್ರೊನಿಯೆ ಹಾಗೂ ರಿಕಿ ಪಾಂಟಿಂಗ್ 48 ಪಂದ್ಯಗಳಲ್ಲಿ 37 ಗೆಲುವು ಸಾಧಿಸಿದ್ದರು.

►ದ್ವಿಪಕ್ಷೀಯ ಸರಣಿಯಲ್ಲಿ ಭಾರತದ ಪರ ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಲು ಕುಲ್‌ದೀಪ್ ಯಾದವ್‌ಗೆ ಇನ್ನು 3 ವಿಕೆಟ್ ಅಗತ್ಯವಿದೆ. ಜಾವಗಲ್ ಶ್ರೀನಾಥ್ ಹಾಗೂ ಅಮಿತ್ ಮಿಶ್ರಾ ತಲಾ 18 ವಿಕೆಟ್‌ಗಳನ್ನು ಪಡೆದು ಗರಿಷ್ಠ ವಿಕೆಟ್ ಪಡೆದ ದಾಖಲೆ ಮಾಡಿದ್ದರು.

ಭಾರತ(ಸಂಭಾವ್ಯ)

►ರೋಹಿತ್ ಶರ್ಮ, ಶಿಖರ್ ಧವನ್, ವಿರಾಟ್ ಕೊಹ್ಲಿ(ನಾಯಕ),ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್/ಕೇದಾರ್ ಜಾಧವ್, ಎಂಎಸ್ ಧೋನಿ(ವಿಕೆಟ್‌ಕೀಪರ್), ಹಾರ್ದಿಕ್ ಪಾಂಡ್ಯ, ಕುಲ್‌ದೀಪ್ ಯಾದವ್, ಮುಹಮ್ಮದ್ ಶಮಿ, ಯಜುವೇಂದ್ರ ಚಹಾಲ್, ಜಸ್‌ಪ್ರಿತ್ ಬುಮ್ರಾ/ಶಾರ್ದೂಲ್ ಠಾಕೂರ್.

ದಕ್ಷಿಣ ಆಫ್ರಿಕ(ಸಂಭಾವ್ಯ)

►ಏಡೆನ್ ಮಾರ್ಕರಮ್(ನಾಯಕ), ಹಾಶಿಮ್ ಅಮ್ಲ, ಜೆ.ಪಿ.ಡುಮಿನಿ, ಎಬಿಡಿ ವಿಲಿಯರ್ಸ್, ಡೇವಿಡ್ ಮಿಲ್ಲರ್, ಹೆನ್ರಿಚ್ ಕ್ಲಾಸೆನ್(ವಿಕೆಟ್‌ಕೀಪರ್), ಕ್ರಿಸ್ ಮೊರಿಸ್, ಫೆಹ್ಲುಕ್ವಾಯೊ, ಕಾಗಿಸೊ ರಬಾಡ, ತಬ್ರೈಝ್ ಶಂಸಿ, ಲುಂಗಿ ನಿಗಿಡಿ.

ಪಂದ್ಯದ ಸಮಯ: ಸಂಜೆ 4:30 ಗಂಟೆಗೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News