ಉನ್ನತ ಶಿಕ್ಷಣ; ವಿದ್ಯಾರ್ಥಿನಿಯರ ಕಾಲೇಜು ಶಿಕ್ಷಣಕ್ಕೆ ಶುಲ್ಕ ವಿನಾಯಿತಿ
ಬೆಂಗಳೂರು, ಫೆ.16: ಹೆಣ್ಣು ಮಕ್ಕಳನ್ನು ಉನ್ನತ ಶಿಕ್ಷಣದ ಕಡೆಗೆ ಉತ್ತೇಜಿಸಲು ಎಲ್ಲ ಸರಕಾರಿ ಕಾಲೇಜುಗಳಲ್ಲಿ ಪದವಿ ಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶ ಪಡೆಯುವ ಎಲ್ಲಾ ವಿದ್ಯಾರ್ಥಿನಿಯರಿಗೆ ಪೂರ್ಣ ಶುಲ್ಕ ವಿನಾಯಿತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
* ಬಸವಣ್ಣನವರ ಚಿಂತನೆಗಳನ್ನು ನಾಡಿನಾದ್ಯಂತ ಪಸರಿಸಲು, ಅವರ ಚಿಂತನೆಗಳನ್ನು ಹೆಚ್ಚಿನ ಅಧ್ಯಯನಕ್ಕೆ ಒಳಪಡಿಸಲು ಅನುಕೂಲವಾಗುವಂತೆ ಮೈಸೂರು ವಿಶ್ವವಿದ್ಯಾಲಯಕ್ಕೆ ಬಸವ ಅಧ್ಯಯನ ಕೇಂದ್ರ ಸ್ಥಾಪಿಸಲು 2 ಕೋಟಿ ರೂ. ಅನುದಾನ ಒದಗಿಸಲಾಗಿದೆ.
* ರಾಜ್ಯದಲ್ಲಿ ಉನ್ನತ ಶಿಕ್ಷಣವನ್ನು ಹೆಚ್ಚು ಉತ್ಕೃಷ್ಟಗೊಳಿಸಲು ಚಿಕ್ಕಮಗಳೂರಿನಲ್ಲಿ ಕುವುಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಹಾಗೂ ಬಾಗಲಕೋಟೆಯ ಜಮಖಂಡಿಯಲ್ಲಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಸ್ಥಾಪಿಸಲು ತಲಾ ಒಂದು ಕೋಟಿ ರೂ. ಅನುದಾನ ನೀಡಲಾಗಿದೆ.
* ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಲ್ಲಿ 1 ಕೋಟಿ ರೂ.ಗಳ ವೆಚ್ಚದಲ್ಲಿ ಕೊಂಕಣಿ ಅಧ್ಯಯನ ಪೀಠ ಸ್ಥಾಪಿಸಲಾಗುತ್ತಿದೆ.
* 2018-19 ನೆ ಸಾಲಿನಲ್ಲಿ ಉನ್ನತ ಶಿಕ್ಷಣಕ್ಕೆ ಒಟ್ಟಾರೆಯಾಗಿ 4,514 ಕೋಟಿ ರೂ.ಗಳನ್ನು ನೀಡಲಾಗಿದೆ.