×
Ad

ಕರಾವಳಿ ಪ್ರವಾಸಿ ಸ್ಥಳಗಳಲ್ಲಿ ಹೌಸ್‌ಬೋಟ್, ತೇಲುವ ಉಪಾಹಾರ ಗೃಹ

Update: 2018-02-16 18:43 IST

ಬೆಂಗಳೂರು, ಫೆ. 16: ಕರಾವಳಿ ಪ್ರದೇಶಗಳಲ್ಲಿನ ಆಯ್ದ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಹೌಸ್‌ಬೋಟ್‌ಗಳು ಹಾಗೂ ತೇಲುವ ಉಪಾಹಾರ ಗೃಹಗಳ ಸೌಲಭ್ಯವನ್ನು ಒದಗಿಸಲಾಗುವುದು ಎಂದು ಹಣಕಾಸು ಸಚಿವರೂ ಆಗಿರುವ ಸಿಎಂ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.

ಶುಕ್ರವಾರ ವಿಧಾನಸಭೆಯಲ್ಲಿ 2018-19ನೆ ಸಾಲಿನ ಆಯವ್ಯಯ ಮಂಡಿಸಿದ ಅವರು, ಅಂತಾರಾಷ್ಟ್ರೀಯ, ರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಪ್ರವಾಸಿತಾಣಗಳನ್ನು ಚಲನಚಿತ್ರದಲ್ಲಿ ಪ್ರದರ್ಶಿಸುವ ಮೂಲಕ ಪ್ರಸಿದ್ಧಿಗೊಳಿಸುವ ನಿಟ್ಟಿನಲ್ಲಿ ಮೊಟ್ಟ ಮೊದಲ ಬಾರಿಗೆ ಚಲನಚಿತ್ರ ಪ್ರವಾಸೋದ್ಯಮ ನೀತಿಯನ್ನು ಜಾರಿಗೊಳಿಸಲಾಗುವುದು.

ಕಲಬುರಗಿಯಲ್ಲಿ ಉತ್ತರ ಕರ್ನಾಟಕದ ಕಲೆ, ಸಂಸ್ಕೃತಿ, ಪರಂಪರೆ ಬಿಂಬಿಸುವ ಕಲಬುರಗಿ ಕಲಾಭವನ ನಿರ್ಮಿಸಲು ಉದ್ದೇಶಿಸಲಾಗಿದೆ. ಇಪ್ಪತ್ತು ಪರಂಪರಾ ಪ್ರವಾಸಿ ತಾಣಗಳಲ್ಲಿ ಸಮಗ್ರ ಪ್ರವಾಸಿ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗುತ್ತಿದೆ.
ಇವುಗಳಲ್ಲಿ ಪ್ರಮುಖವಾಗಿ ವಿಶ್ವ ಪಾರಂಪರಿಕ ಪ್ರವಾಸಿ ತಾಣವಾದ ಹಂಪಿ, ಬೇಲೂರು-ಹಳೇಬೀಡು, ಶ್ರವಣಬೆಳಗೊಳ, ನಂದಿಬೆಟ್ಟ, ಸನ್ನತಿ ಹಾಗೂ ಕಲಬುರಗಿ ಕೋಟೆಗಳಲ್ಲಿ ಅಭಿವದ್ಧಿ ಕಾರ್ಯಗಳನ್ನು ಪ್ರಾರಂಭಿಸಲಾಗುವುದು. ಹೊಸದಿಲ್ಲಿಯಲ್ಲಿರುವ ದೆಹಲಿ ಹಾಟ್ ಮಾದರಿಯಲ್ಲಿಯೇ ಮೈಸೂರಿನಲ್ಲಿರುವ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರಕ್ಕೆ ಸೇರಿದ ಜಮೀನಿನಲ್ಲಿ ಮೈಸೂರು ಹಾಟ್‌ನ್ನು ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ.

ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ವಿದೇಶಿ ಹಾಗೂ ದೇಶೀ ಪ್ರವಾಸಿಗರ ಅಂಕಿಅಂಶಗಳನ್ನು ನಿಖರವಾಗಿ ಸಂಗ್ರಹಿಸುವ ಬಗ್ಗೆ ಮಾದರಿ ಸಮೀಕ್ಷೆ ನಡೆಸಲಾಗುವುದು. ಪ್ರಾಚ್ಯವಸ್ತು ಸಂಗ್ರಹಾಲಯ, ಪರಂಪರಾ ಇಲಾಖೆಯು ಹಮ್ಮಿಕೊಳ್ಳುವ ಸ್ಮಾರಕಗಳ ಸಂರಕ್ಷಣಾ ಕೆಲಸವು ಪ್ರವಾಸಿ ತಾಣಗಳಲ್ಲಿರುವ ಸ್ಮಾರಕಗಳ ಸಂರಕ್ಷಣೆಗೆ ಸಂಬಂಧಿಸಿರುವುದರಿಂದ ಸದರಿ ಇಲಾಖೆಯನ್ನು ಪ್ರವಾಸೋದ್ಯಮ ಇಲಾಖೆಯ ವ್ಯಾಪ್ತಿಗೆ ತರಲು ಉದ್ದೇಶಿಸಲಾಗಿದೆ.
2018-19ನೆ ಸಾಲಿನಲ್ಲಿ ಪ್ರವಾಸೋದ್ಯಮ ಇಲಾಖೆಗೆ ಒಟ್ಟಾರೆಯಾಗಿ 459 ಕೋಟಿ ರೂ.ಗಳನ್ನು ಒದಗಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News