2017-18ರಲ್ಲಿ ಶೇ.85ರಷ್ಟು ಜಿಎಸ್‌ಡಿಪಿ ಬೆಳವಣಿಗೆ
ಬೆಂಗಳೂರು, ಫೆ.16: ರಾಜ್ಯದ ಒಟ್ಟಾರೆ ಆಂತರಿಕ ಉತ್ಪನ್ನವು(ಜಿಎಸ್‌ಡಿಪಿ) 2016-17ರಲ್ಲಿದ್ದ ಶೇ.7.5ಕ್ಕೆ ಪ್ರತಿಯಾಗಿ 2017-18ರಲ್ಲಿ ಶೇ.85ರಷ್ಟು ಬೆಳವಣಿಗೆಯಾಗಿದೆ. ಈ ಸಾಲಿನಲ್ಲಿ ಕೃಷಿ ವಲಯವು ಶೇ.4.9ರಷ್ಟು ಬೆಳವಣಿಗೆ ಹೊಂದುವ ನಿರೀಕ್ಷೆಯಿದೆ. ಕೈಗಾರಿಕಾ ವಲಯವು ಶೇ.4.9ರ ಬೆಳವಣಿಗೆಯನ್ನು ಹಾಗೂ ಸೇವಾ ವಲಯವು ಶೇ.10.4ರಷ್ಟು ಬೆಳವಣಿಗೆ ದರ ದಾಖಲಿಸುವ ನಿರೀಕ್ಷೆಯಿದೆ.
2016ರ ನವೆಂಬರ್‌ನಲ್ಲಿ ಘೋಷಿಸಲಾದ ನಗದು ಅಮಾನೀಕರಣದ ಪರಿಣಾಮಗಳನ್ನು ಎದುರಿಸುತ್ತಲೇ 2017-18ರ ಆರ್ಥಿಕ ವರ್ಷ ಆರಂಭವಾಯಿತು. ನಗದು ಅಪಮೌಲ್ಯೀಕರಣದಿಂದಾಗಿ ಬೇಡಿಕೆ ಹಾಗೂ ಪೂರೈಕೆ ಎರಡು ವಿಭಾಗಗಳಲ್ಲಿ ಹೊಡೆತವಾಗಿದ್ದರಿಂದ ಒಟ್ಟಾರೆ ಆರ್ಥಿಕತೆ ಕುಂಠಿತಗೊಂಡಿತು. ಇದು ರಾಜ್ಯದ ಆರ್ಥಿಕತೆಯಷ್ಟೇ ಅಲ್ಲ, ಹಣಕಾಸು ಸ್ಥಿತಿಯ ಮೇಲೂ ಪರಿಣಾಮಬೀರಿದೆ. ವಿಶೇಷವಾಗಿ ಮುದ್ರಾಂಕ ಮತ್ತು ನೋಂದಣಿ ಶುಲ್ಕ ಸೇರಿದಂತೆ ಎಲ್ಲ ತೆರಿಗೆಗಳ ಆದಾಯದ ಮೇಳೆ ವ್ಯತಿರಿಕ್ತ ಪರಿಣಾಮವಾಗಿದೆ.
ವರ್ಷದ ಮಧ್ಯದಲ್ಲಿ ಅಂದರೆ, 1ನೆ ಜುಲೈ 2017ರಿಂದ ದೇಶಾದ್ಯಂತ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ)ಯನ್ನು ಜಾರಿಗೊಳಿಸಲಾಯಿತು. ದೀರ್ಘಾವಧಿಯಲ್ಲಿ ಉದ್ಯಮ, ಗ್ರಾಹಕರು ಹಾಗೂ ರಾಜ್ಯದ ಅರ್ಥವ್ಯವಸ್ಥೆಗೆ ಅನುಕೂಲವಾಗುವ ನಿರೀಕ್ಷೆಯಿದ್ದರೂ, ಅಲ್ಪಾವಧಿಯಲ್ಲಿ ರಾಜ್ಯದ ತೆರಿಗೆ ಸಂಗ್ರಹದಲ್ಲಿ ಕೊರತೆಯಾಗುವ ಸಂಭವ ಇದೆ. ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯಲ್ಲಿ ಆಗಿಂದಾಗ್ಗೆ ಆಗಿರುವ ಬದಲಾವಣೆಗಳು ಹಾಗೂ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ತೊಡಕುಗಳು ತೆರಿಗೆ ಸಂಗ್ರಹಣೆ ಮೇಲೆ ಪರಿಣಾಮ ಬೀರಿದೆ.
ರೈತರ ಕೃಷಿ ಸಾಲ ಮನ್ನಾ ಮತ್ತು ಸರಕಾರಿ ನೌಕರರ ವೇತನ ಪರಿಷ್ಕರಣೆಯಿಂದಾಗಿ ಉಂಟಾಗಿರುವ ಆರ್ಥಿಕ ಹೊರೆಯ ನಡುವೆಯೂ ಸರಕಾರ ರಾಜ್ಯ ಅಭಿವೃದ್ಧಿ ಯೋಜನೆಗಳಿಗೆ ಸಂಪನ್ಮೂಲದ ಕೊರತೆ ಉಂಟಾಗದಂತೆ ಆರ್ಥಿಕ ನಿರ್ವಹಣೆ ಮಾಡುತ್ತಿದೆ.
ರಾಜ್ಯದ ಸಂಚಿತ ನಿಧಿ ಗಾತ್ರವು 2017-18ರಲ್ಲಿ 1,86,561 ಕೋಟಿ ರೂ.ಗಳಿಗೆ ನಿಗದಿಯಾಗಿತ್ತು. ಇದಕ್ಕೆ ಎದುರಾಗಿ 2017-18ರ ಪರಿಷ್ಕೃತ ಅಂದಾಜುಗಳ ಪ್ರಕಾರ ಸಂಚಿತ ನಿಧಿ ಗಾತ್ರವು 1,89,679 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ.
ಆಯವ್ಯಯ ಎಂದರೆ ನನ್ನ ಪಾಲಿಗೆ, ಅಂಕಿ ಅಂಶಗಳ ಕಸರತ್ತು ಅಲ್ಲ, ನಿರ್ಜೀವ ಲೆಕ್ಕಗಳ ಗಣಿತವೂ ಅಲ್ಲ, ಸರಳವಾಗಿ ಹೇಳುವುದಾದರೆ ಇದು ಈ ರಾಜ್ಯದ ಪ್ರತಿಯೊಬ್ಬ ಪ್ರಜೆಯ ನಿತ್ಯದ ಬದುಕಿನ ಲೆಕ್ಕ, ಆತನ ಮನೆಯ ಲೆಕ್ಕ, ಆಯವ್ಯಯ ಮುಂಗಡ ಪತ್ರ ಎನ್ನುವುದು ಅಭಿವೃದ್ಧಿಯ ಗುರಿಸಾಧನೆಯೆಡೆಗೆ ಸಾಗುವ ಮಾರ್ಗ ಎಂದು ನಂಬಿದ್ದೇನೆ. ನುಡಿದಂತೆ ನಡೆಯಬೇಕೆಂಬುದು ನನ್ನ ಬದುಕಿನ ಧ್ಯೇಯ. ಜನತೆಗೆ ಕೊಟ್ಟ ಭರವಸೆಗಳನ್ನೆಲ್ಲವನ್ನೂ ಈಡೇರಿಸಿದ ಆತ್ಮಸಂತೃಪ್ತಿ ನಮ್ಮ ಸರಕಾರದ್ದಾಗಿದೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ13ನೇ ದಾಖಲೆ ಬಜೆಟ್
ಮುಖ್ಯಮಂತ್ರಿಯಾಗಿ ಈವರೆಗೆ ಮಂಡಿಸಿದ ಐದು ಆಯವ್ಯಯ ಪತ್ರಗಳೂ ಸೇರಿದಂತೆ ಒಟ್ಟು ಹನ್ನೆರಡು ಆಯವ್ಯಯ ಪತ್ರಗಳನ್ನು ಮಂಡಿಸಿದ್ದೆ. ಇದು ಹದಿಮೂರನೆ ಆಯವ್ಯಯ ಪತ್ರ. ಒಬ್ಬ ಸಾಮಾನ್ಯ ರೈತನ ಮಗನಿಗೂ ಇಂತಹದೊಂದು ಭಾಗ್ಯ ಒದಗಿಬಂದಿರುವುದೇ ಪ್ರಜಾಪ್ರಭುತ್ವದ ನಿಜವಾದ ಸೌಂದರ್ಯ. ಇದಕ್ಕಾಗಿ ದೇಶದ ಸಂವಿಧಾನಕ್ಕೆ ಮತ್ತು ಅದನ್ನು ರೂಪಿಸಿದ ಡಾ.ಬಾಬಾಸಾಹೇಬ್ ಅಂಬೇಡ್ಕರ್‌ಗೆ ತಲೆಬಾಗುತ್ತೇನೆ.
ನಾನು ಅರ್ಥಶಾಸ್ತ್ರವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಿದ ತಜ್ಞ ಅಲ್ಲ, ಅನುಭವಕ್ಕಿಂತ ಮಿಗಿಲಾದ ಜ್ಞಾನ ಬೇರೆ ಇಲ್ಲ. ರಾಜಕೀಯ ಕ್ಷೇತ್ರ ನನ್ನ ಪಾಲಿನ ಅನುಭವ ಮಂಟಪ, ನಾಲ್ಕು ದಶಕಗಳ ಕಾಲದ ಸುದೀರ್ಘ ರಾಜಕೀಯ ಜೀವನದಲ್ಲಿನ ಜನರೊಂದಿಗಿನ ನನ್ನ ಒಡನಾಟದ ಮೂಲಕ ಅವರಲ್ಲೊಬ್ಬನಾಗಿ ಗಳಿಸಿದ ಅನುಭವವನ್ನೆ ಮುಂಗಡ ಪತ್ರಗಳಲ್ಲಿ ಧಾರೆಯೆರೆಯುತ್ತಾ ಬಂದಿದ್ದೇನೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿಇಲಾಖಾವಾರು ಅನುದಾನ ಹಂಚಿಕೆ
ಕೃಷಿ-5849 ಕೋಟಿ ರೂ.
ತೋಟಗಾರಿಕೆ-995 ಕೋಟಿ ರೂ.
ಪಶುಸಂಗೋಪನೆ-2377 ಕೋಟಿ ರೂ.
ರೇಷ್ಮೆ-457 ಕೋಟಿ ರೂ.
ಮೀನುಗಾರಿಕೆ-252 ಕೋಟಿ ರೂ.
ಸಹಕಾರ-5837 ಕೋಟಿ ರೂ.
ಜಲಸಂಪನ್ಮೂಲ-15,998 ಕೋಟಿ ರೂ.
ಸಣ್ಣ ನೀರಾವರಿ-2114 ಕೋಟಿ ರೂ.
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ-1949 ಕೋಟಿ ರೂ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ-22,350 ಕೋಟಿ ರೂ.
ಉನ್ನತ ಶಿಕ್ಷಣ-4514 ಕೋಟಿ ರೂ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ-6645 ಕೋಟಿ ರೂ.
ವೈದ್ಯಕೀಯ ಶಿಕ್ಷಣ-2177 ಕೋಟಿ ರೂ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ-5317 ಕೋಟಿ ರೂ.
ಸಮಾಜ ಕಲ್ಯಾಣ-6528 ಕೋಟಿ ರೂ.
ಹಿಂದುಳಿದ ವರ್ಗಗಳ ಕಲ್ಯಾಣ-3172 ಕೋಟಿ ರೂ.
ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಹಜ್-2281 ಕೋಟಿ ರೂ.
ವಸತಿ-3942 ಕೋಟಿ ರೂ.
ಕಾರ್ಮಿಕ-531 ಕೋಟಿ ರೂ.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ-794 ಕೋಟಿ ರೂ.
ಕನ್ನಡ ಮತ್ತು ಸಂಸ್ಕೃತಿ-425 ಕೋಟಿ ರೂ.
ಯುವ ಸಬಲೀಕರಣ ಮತ್ತು ಕ್ರೀಡೆ-237 ಕೋಟಿ ರೂ.
ಆಹಾರ ಮತ್ತು ನಾಗರಿಕ ಸರಬರಾಜು-3882 ಕೋಟಿ ರೂ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್-14,268 ಕೋಟಿ ರೂ.
ಯೋಜನೆ ಮತ್ತು ಪ್ರದೇಶಾಭಿವೃದ್ಧಿ-1763 ಕೋಟಿ ರೂ.
ನಗರಾಭಿವೃದ್ಧಿ-17,196 ಕೋಟಿ ರೂ.
ಕಂದಾಯ-6642 ಕೋಟಿ ರೂ.
ಇಂಧನ-14,136 ಕೋಟಿ ರೂ.
ಲೋಕೋಪಯೋಗಿ-9,271 ಕೋಟಿ ರೂ.
ಮೂಲಸೌಲಭ್ಯ ಅಭಿವೃದ್ಧಿ-601 ಕೋಟಿ ರೂ.
ವಾಣಿಜ್ಯ ಮತ್ತು ಕೈಗಾರಿಕೆ -1,681 ಕೋಟಿ ರೂ.
ಮಾಹಿತಿ ತಂತ್ರಜ್ಞಾನ-247 ಕೋಟಿ ರೂ.
ಇ-ಆಡಳಿತ-147 ಕೋಟಿ ರೂ.
ಪ್ರವಾಸೋದ್ಯಮ-459 ಕೋಟಿ ರೂ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ-239 ಕೋಟಿ ರೂ.
ಒಳಾಡಳಿತ-6,647 ಕೋಟಿ ರೂ.
ಸಾರಿಗೆ-2,208 ಕೋಟಿ ರೂ.
ಕಾನೂನು-1,247 ಕೋಟಿ ರೂ.