ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್: ಸಿದ್ದರಾಮಯ್ಯ

Update: 2018-02-16 14:50 GMT

* ಬಿಎಂಟಿಸಿ ಬಸ್‌ಗಳಲ್ಲಿ ಸಿಸಿಟಿವಿ ಕ್ಯಾಮರಾ

* ಎಸ್ಸಿ-ಎಸ್ಟಿಗಳಿಗೆ ಭಾರೀ ವಾಹನ ಚಾಲನಾ ತರಬೇತಿ

ಬೆಂಗಳೂರು, ಫೆ. 16: ಶಾಲೆ/ಕಾಲೇಜಿಗೆ ದೂರ ಪ್ರಯಾಣಿಸುವ ಅನಿವಾರ್ಯತೆ ಇರುವ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ಸಾರಿಗೆ ವೆಚ್ಚ ತೊಡಕಾಗಬಾರದು ಎಂಬ ಕಾಳಜಿ ನಮ್ಮ ಸರಕಾರದ್ದು. ಇದಕ್ಕಾಗಿ ಈಗ ನೀಡುತ್ತಿರುವ ರಿಯಾಯಿತಿ ದರದ ಬಸ್‌ಪಾಸ್‌ಗೆ ಬದಲಾಗಿ 2018-19ನೆ ಸಾಲಿನಿಂದ ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಇದರಿಂದ 19.60 ಲಕ್ಷ ವಿದ್ಯಾರ್ಥಿಗಳು ಪ್ರಯೋಜನವನ್ನು ಪಡೆಯಲಿದ್ದಾರೆ. ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿ ನಿರುದ್ಯೋಗಿ ಮಹಿಳೆಯರಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಬೆಂಗಳೂರು ಮತ್ತು ಧಾರವಾಡಗಳಲ್ಲಿನ ಭಾರಿ ವಾಹನ ಚಾಲಕರ ತರಬೇತಿ ಸಂಸ್ಥೆಗಳಲ್ಲಿ ಸಾರಿಗೆ ಇಲಾಖೆಯಿಂದ 100 ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ 1ಸಾವಿರ ಮಹಿಳಾ ಅಭ್ಯರ್ಥಿಗಳಿಗೆ ಲಘು ಮೋಟಾರು ವಾಹನ ಚಾಲನಾ ತರಬೇತಿ ನೀಡಲಾಗುವುದು.

2018-19ನೆ ಸಾಲಿನಲ್ಲಿ 30 ಬಸ್ ನಿಲ್ದಾಣ, 8 ಬಸ್ ಘಟಕಗಳು ಹಾಗೂ 325 ಬಸ್ ತಂಗುದಾಣಗಳನ್ನು ಮೇಲ್ದರ್ಜೆಗೇರಿಸಲಾಗುವುದು. ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ನಗರಗಳ ನಡುವೆ ಸಂಚಾರಕ್ಕೆ ಕೆಎಸ್ಸಾರ್ಟಿಸಿಯಿಂದ 10 ಡಬ್ಬಲ್ ಡೆಕ್ಕರ್ ಬಸ್‌ಗಳನ್ನು ಖರೀದಿಸಿ ಕಾರ್ಯಾಚರಿಸಲು ಯೋಜಿಸಲಾಗಿದೆ.

ಕೌಶಲ್ಯಾಭಿವೃದ್ಧಿ ಯೋಜನೆಯಡಿ ಸಮಾಜದ ಯುವಜನತೆಯ ಕೌಶಲ್ಯ ಮತ್ತು ಸಾಮರ್ಥ್ಯವನ್ನು ವೃದ್ಧಿಸಲು ರಾಜ್ಯ ಸಾರಿಗೆ ಸಂಸ್ಥೆಗಳ ವತಿಯಿಂದ 13 ಸಾವಿರ ಯುವಜನರಿಗೆ ಚಾಲನೆ ಮತ್ತು ಮೆಕ್ಯಾನಿಕ್ ತರಬೇತಿ ನೀಡಲಾಗುವುದು. ಮಹಿಳೆಯ ಸುರಕ್ಷತೆಗಾಗಿ ನಿರ್ಭಯಾ ಯೋಜನೆಯಡಿ ಬಿಎಂಟಿಸಿ 1 ಸಾವಿರ ಬಸ್ಸುಗಳಲ್ಲಿ ಸಿ.ಸಿ.ಟಿವಿ ಕ್ಯಾಮರಾ ಅಳವಡಿಸಲಾಗುವುದು.

ಕೆಂಪೇಗೌಡ ಅಂತಾರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾಲಿ 2 ಸ್ಥಳಗಳಿಗೆ ಇರುವ ಫ್ಲೈ ಬಸ್ ಸೇವೆಗಳನ್ನು 7 ಸ್ಥಳಗಳಿಗೆ ವಿಸ್ತರಿಸಿ ಕಾರ್ಯಾಚರಣೆಗೊಳಿಸಲು ಯೋಜಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಭಾರಿ ವಾಹನ ಚಾಲಕರ ಬೇಡಿಕೆ ಸಾಕಷ್ಟಿದ್ದು, ಉದ್ಯೋಗಾವಕಾಶವನ್ನು ಸೃಜಿಸಲು ಬೆಂಗಳೂರು ಮತ್ತು ಧಾರವಾಡಗಳಲ್ಲಿನ ಭಾರಿ ವಾಹನ ಚಾಲಕರ ತರಬೇತಿ ಸಂಸ್ಥೆಗಳಲ್ಲಿ ಎಸ್ಸಿಎಸ್ಪಿ/ಟಿಎಸ್ಪಿ ಯೋಜನೆಯಡಿ ಒಟ್ಟು 200 ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಗೆ ಭಾರಿ ವಾಹನ ಚಾಲನಾ ತರಬೇತಿ ನೀಡಲು ಉದ್ದೇಶಿಸಿದೆ.

ತರಬೇತಿ ನಂತರ ಈ ಅಭ್ಯರ್ಥಿಗಳಿಗೆ ಸರಕು ಸಾಗಾಣಿಕೆ ವಾಹನ ಖರೀದಿಸಲು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಹಾಗೂ ದೇವರಾಜ ಅರಸು ಟ್ರಕ್ ಟರ್ಮಿನಲ್ಸ್ ನಿಯಮಿತ ಸಹಯೋಗದೊಂದಿಗೆ ಶೂನ್ಯ ಬಡ್ಡಿ ದರದಲ್ಲಿ 15 ಲಕ್ಷ ರೂ.ಗಳ ಸಾಲ ನೀಡಲು ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಯಡಿ ಫಲಾನುಭವಿಗಳಿಗೆ ನೀಡುವ ಬಡ್ಡಿ ಸಹಾಯಧನಕ್ಕಾಗಿ 2.50 ಕೋಟಿ ರೂ.ಗಳನ್ನು ಒದಗಿಸಲಾಗುವುದು.

ದೇವರಾಜ ಅರಸ್ ಟ್ರಕ್ ಟರ್ಮಿನಲ್ ಮುಖಾಂತರ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಕೆಳಕಂಡ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಮೈಸೂರಿನ ನಂಜನಗೂಡು ವರ್ತುಲ ರಸ್ತೆಯಲ್ಲಿ 6.5 ಎಕರೆ ಪ್ರದೇಶದಲ್ಲಿ 45 ಕೋಟಿ ರೂ.ಗಳ ವೆಚ್ಚದಲ್ಲಿ ಎರಡನೆಯ ಹಂತದ ಟ್ರಕ್ ಟರ್ಮಿನಲ್ ನಿರ್ಮಾಣ ಧಾರವಾಡ ಜಿಲ್ಲೆಯ ಅಂಚಟಗೇರಿ ಗ್ರಾಮದಲ್ಲಿ ಸಂಸ್ಥೆಯು ಹೊಂದಿರುವ 56.13 ಎಕರೆ ಜಮೀನಿನಲ್ಲಿ 110 ಕೋಟಿ ರೂ.ಗಳ ವೆಚ್ಚದಲ್ಲಿ ಟರ್ಮಿನಲ್/ಲಾಜಿಸ್ಟಿಕ್ ಪಾರ್ಕ್ ವೇರ್ ಹೌಸ್ ನಿರ್ಮಾಣ. ಯಶವಂತಪುರ ಟ್ರಕ್ ಟರ್ಮಿನಲ್‌ನಲ್ಲಿ 40 ಕೋಟಿ ರೂ.ಗಳ ವೆಚ್ಚದಲ್ಲಿ ಮಲ್ಟಿವೆಲ್ ಪಾರ್ಕಿಂಗ್ ಕಟ್ಟಡ ನಿರ್ಮಾಣ ಮತ್ತು ಮೂಲಭೂತ ಸೌಲಭ್ಯ ಉನ್ನತೀಕರಣ, ಚಿತ್ರದುರ್ಗದಲ್ಲಿ 14 ಎಕರೆ ಪ್ರದೇಶದಲ್ಲಿ 35 ಕೋಟಿ ರೂ.ಗಳ ವೆಚ್ಚದಲ್ಲಿ ಟ್ರಕ್ ಟರ್ಮಿನಲ್ ಮತ್ತು ಹೈವೇ ಅಮಿನಿಟೀಸ್ ನಿರ್ಮಾಣ.

'ನವಕರ್ನಾಟಕ ನಿರ್ಮಾಣ’ಕ್ಕೆ ಪೂರಕ '

ನವಕರ್ನಾಟಕ ನಿರ್ಮಾಣಕ್ಕೆ ಪೂರಕವಾದ ಸಮಗ್ರ ಅಭಿವೃದ್ಧಿಯ ದೃಷ್ಟಿಕೋನವುಳ್ಳ 2.09ಲಕ್ಷ ಕೋಟಿ ರೂ. ಬಜೆಟ್ ಅನ್ನು ಸಿಎಂ ಸಿದ್ದರಾಮಯ್ಯ ಮಂಡಿಸಿದ್ದು, ರೈತರು, ಮಹಿಳೆಯರು, ವಿದ್ಯಾರ್ಥಿ ಹಾಗೂ ಯುವಜನ ಸೇರಿ ಎಲ್ಲ ವರ್ಗದವರಿಗೆ ಹತ್ತು ಹಲವು  ಯೋಜನೆಗಳನ್ನು ಪ್ರಕಟಿಸಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಪರಿಗಣಿಸಿದ್ದು, ಜನಪರ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಪರ ಬಜೆಟ್ ಮಂಡಿಸಿ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ’

-ಎಚ್.ಎಂ.ರೇವಣ್ಣ ಸಾರಿಗೆ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News