‘65,800 ಕೋಟಿ ರೂ.ರಾಜಸ್ವ ಸಂಗ್ರಹಣಾ ಗುರಿ’

Update: 2018-02-16 15:00 GMT

ಬೆಂಗಳೂರು, ಫೆ.16: ಪ್ರಸಕ್ತ ವರ್ಷದ ಆಯವ್ಯಯ ಅಂದಾಜುಗಳನ್ನು 55 ಸಾವಿರ ಕೋಟಿ ರೂ.ಗಳು ಎಂದು ನಿಗದಿಪಡಿಸಲಾಗಿತ್ತು. ಜಿಎಸ್‌ಟಿ ಅನುಷ್ಠಾನದಿಂದಾಗಿ 2017ರ ಜುಲೈ 1ರಿಂದ ಪೆಟ್ರೋಲ್ ಬೆಲೆಯಲ್ಲಿ ಪ್ರತಿ ಲೀಟರಿಗೆ 3.21 ರೂ.ಗಳು ಹಾಗೂ ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ 2.68 ರೂ.ಗಳು ಕಡಿಮೆಯಾಗಿದೆ.

ಈ ಉತ್ಪನ್ನಗಳ ಮೇಲಿನ ಮಾರಾಟ ತೆರಿಗೆಯನ್ನು ಹೆಚ್ಚಳ ಮಾಡದೆ, ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಿದರೂ ಸಹ, ಸರಕಾರವು ನಿಗದಿಪಡಿಸಿದ ಗುರಿಗಿಂತ 2,200 ಕೋಟಿ ರೂ.ಗಳನ್ನು ಮೀರಿ ಹೆಚ್ಚು ಸಂಗ್ರಹಣೆ ಮಾಡುವ ನಿರೀಕ್ಷೆಯಲ್ಲಿದೆ. 2018-19ನೆ ಸಾಲಿಗೆ ವಾಣಿಜ್ಯ ತೆರಿಗೆಗಳ ಇಲಾಖೆಗೆ ರಾಜಸ್ವ ಸಂಗ್ರಹಣಾ ಗುರಿಯನ್ನು 65,800 ಕೋಟಿ ರೂ.ಗಳಿಗೆ ನಿಗದಿ ಮಾಡಲಾಗಿದೆ.

ಕೇಂದ್ರ ಸರಕಾರದ ಉಡಾನ್ ಯೋಜನೆಯನ್ನು ಬೆಂಬಲಿಸಲು ಇವುಗಳಿಗೆ ಮಾರಾಟವಾಗುವ ವೈಮಾನಿಕ ಇಂಧನ(ಎಟಿಎಫ್) ಮೇಲಿನ ಮಾರಾಟ ತೆರಿಗೆಯನ್ನು ಶೇ.28ರಿಂದ ಶೇ.5ಕ್ಕೆ ಇಳಿಸಲು ಪ್ರಸ್ತಾಪಿಸಲಾಗಿದೆ.

ನೋಂದಣಿ ಮತ್ತು ಮುದ್ರಾಂಕ: 2018-19ನೆ ಸಾಲಿಗೆ 10,400 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆ ಗುರಿಯನ್ನು ನಿಗದಿಪಡಿಸಲಾಗಿದೆ.
ಅಬಕಾರಿ : ಮದ್ಯದ 2ರಿಂದ 18ನೇ ಘೋಷಿತ ಬೆಲೆ ಸ್ಲಾಬ್‌ಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕದ ದರಗಳನ್ನು ಹಾಲಿ ಇರುವ ದರಗಳ ಮೇಲೆ ಶೇ.8ರಷ್ಟು ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ. ಇದರೊಂದಿಗೆ ಮತ್ತು ಪರಿಣಾಮಕಾರಿಯಾದ ಜಾರಿ ಮತ್ತು ತನಿಖಾ ಕ್ರಮಗಳ ಮೂಲಕ ಇಲಾಖೆಯು 2018-19ನೆ ಆರ್ಥಿಕ ವರ್ಷಕ್ಕೆ 18,750 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆ ಗುರಿಯನ್ನು ನಿಗದಿಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News