ಗ್ರಾಮೀಣಾಭಿವೃದ್ಧಿಗೆ-14,268 ಕೋಟಿ ರೂ.ಅನುದಾನ:

Update: 2018-02-16 15:05 GMT

ಬೆಂಗಳೂರು, ಫೆ. 16: ಉದ್ಯೋಗ ಖಾತರಿ ಯೋಜನೆಯಡಿ ಈಗಾಗಲೇ ವ್ಯಕ್ತಿಗತ ಫಲಾನುಭವಿಗಳು ನಿರ್ಮಿಸಲಾದ ಕೊಳಗಳಲ್ಲಿ ಹಾಗೂ ಸಮುದಾಯದ ಕೊಳಗಳಲ್ಲಿ ಮೀನುಗಾರಿಕೆ ಇಲಾಖೆಯೊಂದಿಗೆ ಒಗ್ಗೂಡಿಸುವಿಕೆ ಮೂಲಕ ನೀಲಿ ಕ್ರಾಂತಿ ಯೋಜನೆ, ನರೇಗಾ ಮಾರ್ಗಸೂಚಿಗಳನ್ನು ಅನುಸರಿಸಿ ಜಲಕೃಷಿ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುವುದು ಎಂದು ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.

ಗ್ರಾ.ಪಂ.ದಾಖಲೆ-ದಾಖಲಾತಿಗಳನ್ನು ಗಣಕೀಕರಣಗೊಳಿಸಲು ಉದ್ದೇಶಿಸಿದ್ದು, ಪ್ರಾಯೋಗಿಕವಾಗಿ ಆಯ್ದ ಗ್ರಾ.ಪಂ.ಗಳಲ್ಲಿ ಜಾರಿಗೊಳಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ ಇದಕ್ಕೆ 5 ಕೋಟಿ ರೂ.ಒದಗಿಸಲಾಗುವುದು. ಅಧಿಕಾರ ವಿಕೇಂದ್ರೀಕರಣ ವ್ಯವಸ್ಥಿತವಾಗಿ ಜಾರಿಗೆ ತಂದ ಹೆಗ್ಗಳಿಕೆ ಕರ್ನಾಟಕ ರಾಜ್ಯದ್ದು, ಈಗಾಗಲೇ ಹಲವಾರು ತಿದ್ದುಪಡಿಗಳನ್ನು ತಂದು ಪಂಚಾಯತ್ ರಾಜ್ ಸಂಸ್ಥೆಗಳನ್ನು ಸಬಲೀಕರಣಗೊಳಿಸಲಾಗಿದೆ.

ಸ್ಥಳೀಯ ಆಡಳಿತವನ್ನು ಇನ್ನಷ್ಟು ಬಲಪಡಿಸಲು ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ-1993 ಪ್ರಕರಣ 296-‘ಎ’ರಡಿ ಪ್ರತಿ ಜಿ.ಪಂ.ಗೆ ಕುಂದುಕೊರತೆ ನಿವಾರಣಾ ಪ್ರಾಧಿಕಾರ ಸ್ಥಾಪಿಸಲಾಗುವುದು ಹಾಗೂ ನಿರ್ವಹಣಾ ವೆಚ್ಚ ಒದಗಿಸಲಾಗುವುದು.

ಗ್ರಾಮೀಣ ರಸ್ತೆಗಳ ನಿರ್ವಹಣೆ ಮತ್ತು ಅಭಿವೃದ್ಧಿಯಲ್ಲಿ ಗುಣಮಟ್ಟವನ್ನು ಕಾಪಾಡಲು ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯೂ ವೃತ್ತಗಳಿಗೆ ಒಂದರಂತೆ 8 ವೃತ್ತಗಳಿಗೆ 8 ಪ್ರತ್ಯೇಕ ಗುಣನಿಯಂತ್ರಣ ಉಪ-ವಿಭಾಗಗಳನ್ನು ಸ್ಥಾಪಿಸಲಾಗುವುದು.

ಪಂಚಾಯತ್ ರಾಜ್ ಸಂಸ್ಥೆಗಳ ಸದಸ್ಯರ ಸಾಮರ್ಥ್ಯ ನಿರ್ಮಾಣ ಮಾಡಲು ಸ್ಥಳೀಯ ನಾಯಕತ್ವದ ಬೆಳವಣಿಗೆಗಾಗಿ ತರಬೇತಿಗಳು ಅತ್ಯವಶ್ಯವಾಗಿದ್ದು, ಇದನ್ನು ಸ್ಥಳೀಯವಾಗಿ ನೀಡಲು ಎಲ್ಲ್ಲ ಗ್ರಾ.ಪಂ.ಗಳಲ್ಲಿ ಉಪಗ್ರಹ ಸ್ವೀಕೃತಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು. 2018-19ನೆ ಸಾಲಿನಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಒಟ್ಟಾರೆಯಾಗಿ 14,268 ಕೋಟಿ ರೂ.ಒದಗಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News