ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಗೆ 600 ಕೋಟಿ ರೂ.ಮೀಸಲು

Update: 2018-02-16 15:28 GMT

ಬೆಂಗಳೂರು, ಫೆ. 16: ಶಾಸಕರ ಸ್ಥಳೀಯ ಅಭಿವೃದ್ಧಿ ಯೋಜನೆಗಳಿಗಾಗಿ 600 ಕೋಟಿ ರೂ.ಗಳನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.

ಶುಕ್ರವಾರ ವಿಧಾನಸಭೆಯಲ್ಲಿ ಪ್ರಸಕ್ತ ಸಾಲಿನ ಆಯವ್ಯಯ ಮಂಡಿಸಿದ ಅವರು, ಮಲೆನಾಡು, ಬಯಲುಸೀಮೆ ಮತ್ತು ಕರಾವಳಿ ಪ್ರದೇಶಗಳ ಅಭಿವೃದ್ಧಿ ಮಂಡಳಿಗಳಿಗೆ ಕ್ರಮವಾಗಿ 70 ಕೋಟಿ ರೂ., 55 ಕೋಟಿ ರೂ., 25 ಕೋಟಿ ರೂ.ಗಳನ್ನು ಒದಗಿಸಲಾಗುವುದು ಎಂದು ಘೋಷಿಸಿದರು.

ವಿಶೇಷಾಭಿವೃದ್ಧಿ ಯೋಜನೆಯಡಿ 3ಸಾವಿರ ಕೋಟಿ ರೂ.ಒದಗಿಸಲಾಗುವುದು. ಎಲ್ಲ್ಲ 114 ಹಿಂದುಳಿದ ತಾಲೂಕುಗಳಲ್ಲಿ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಸುಧಾರಿಸಲು ಅಗತ್ಯಕ್ಕೆ ತಕ್ಕಂತೆ ಶಾಲಾ ಕಾಲೇಜುಗಳು ಮತ್ತು ಆಸ್ಪತ್ರೆಗಳನ್ನು ಪ್ರಾರಂಭಿಸಲಾಗುವುದು.

ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಹಾಗೂ ಪ್ರಾದೇಶಿಕ ಅಸಮಾನತೆಗಳ ಅಂತರವನ್ನು ಕಡಿಮೆ ಮಾಡಲು ಹೈ.ಕ.ಪ್ರದೇಶಾಭಿವೃದ್ಧಿ ಮಂಡಳಿ ಮುಖಾಂತರ ಈ ವರ್ಷ 1,500 ಕೋಟಿ ರೂ.ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುವುದು.

ಪ್ರತಿ ಇಲಾಖೆಯ ಭೌತಿಕ ಮತ್ತು ಆರ್ಥಿಕ ಪ್ರಗತಿಯ ದತ್ತಾಂಶದ ಮಾಹಿತಿಯನ್ನು ಪಡೆಯಲು ಮತ್ತು ಪರಸ್ಪರ ಇಲಾಖೆಗಳ ದತ್ತಾಂಶಗಳನ್ನು ವಿಶ್ಲೇಷಿಸಿ, ಸಹಕಾರವನ್ನು ಬಲಪಡಿಸುವ ಮೂಲಕ ಕಾರ್ಯಕ್ರಮ ಸಂಯೋಜನೆಯನ್ನು ಅರ್ಥಪೂರ್ಣಗೊಳಿಸಲು ಕರ್ನಾಟಕ ಮಾಹಿತಿ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದ ಅವರು, ಯೋಜನೆ ಮತ್ತು ಪ್ರದೇಶಾಭಿವೃದ್ಧಿ ಇಲಾಖೆಗೆ ಒಟ್ಟಾರೆಯಾಗಿ 1,763 ಕೋಟಿ ರೂ. ಒದಗಿಸಲಾಗಿದೆ ಎಂದು ಉಲ್ಲೇಖಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News