ವನ್ಯಜೀವಿ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ 2 ಸಾವಿರ ಮಾಸಾಶನ

Update: 2018-02-16 15:29 GMT

ಬೆಂಗಳೂರು, ಫೆ.16: ವನ್ಯಪ್ರಾಣಿಗಳ ದಾಳಿಯಿಂದ ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ ಪ್ರಸ್ತುತ ನೀಡುತ್ತಿರುವ 5 ಲಕ್ಷ ರೂ. ಎಕ್ಸ್‌ಗ್ರೇಷಿಯಾ ಜೊತೆಗೆ ಮೃತರ ಕುಟುಂಬಕ್ಕೆ 5 ವರ್ಷಗಳವರೆಗೆ 2 ಸಾವಿರ ರೂ.ಗಳ ಮಾಸಾಶನ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದರು.

* ನಮ್ಮ ಸರಕಾರವು ನದಿಗಳನ್ನು ಸಂರಕ್ಷಿಸಲು ಉದ್ದೇಶಿಸಿದ್ದು, ನದಿಗಳ ಜಲಾನಯನ ಪ್ರದೇಶವನ್ನು ಜಲಾನಯನ ತತ್ವದ ಆಧಾರದನ್ವಯ ಉಪಚರಿಸಿ ನದಿಗಳ ಇಕ್ಕೆಲಗಳಲ್ಲಿ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಬೃಹತ್ ಪ್ರಮಾಣದ ಗಿಡ ನೆಡುವ ಕಾರ್ಯಕ್ರಮವನ್ನು ಸರಕಾರಿ ಇಲಾಖೆಗಳ, ಸರಕಾರೇತರ ಸಂಘ-ಸಂಸ್ಥೆಗಳ ಹಾಗೂ ಸಾರ್ವಜನಿಕರ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗುವುದು. ಇದರಿಂದ ನದಿಗಳ ನೀರಿನ ಸೆಲೆ ಮತ್ತು ನೀರಿನ ಒಳಹರಿವು ಹೆಚ್ಚಳವಾಗುತ್ತದೆ. 10 ಕೋಟಿ ರೂ.ಗಳ ವೆಚ್ಚದಲ್ಲಿ ಈ ಕಾರ್ಯಕ್ರಮವನ್ನು ಕೈಗೊಳ್ಳಲಾಗುವುದು.

* ರೈತರು ಬೆಳೆದ ಮರಗಳ ಮಾರಾಟದಲ್ಲಿನ ಅಡಚಣೆಗಳನ್ನು ನಿವಾರಿಸಿ ವ್ಯವಸ್ಥಿತ ಮಾರುಕಟ್ಟೆ ಕಲ್ಪಿಸಲು ತಾಲೂಕು ಅಥವಾ ಜಿಲ್ಲಾ ಕೇಂದ್ರಗಳಲ್ಲಿ ಸಣ್ಣ ಮರ ಸಂಗ್ರಹಾಲಯದಲ್ಲಿ ಸ್ಥಾಪಿಸಲಾಗುವುದು. ರೈತರು ಬೆಳೆದ ಮರಗಳನ್ನು ಡಿಪೋಗಳಲ್ಲಿ ಅರಣ್ಯ ಇಲಾಖೆ ಮತ್ತು ಎಪಿಎಂಸಿಯ ಸಮನ್ವಯದೊಂದಿಗೆ ಬಹಿರಂಗ ಹರಾಜಿನಲ್ಲಿ ಮಾರಾಟ ಮಾಡಲಾಗುವುದು. ಈ ಉದ್ದೇಶಕ್ಕಾಗಿ 5 ಕೋಟಿ ರೂ.ಗಳನ್ನು ಒದಗಿಸಲಾಗಿದೆ.

* ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ವಾಯುಮಾಲಿನ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಖನಿಜ ನಿಧಿಯ ಅನುದಾನದಡಿಯಲ್ಲಿ 96 ಕೋಟಿ ರೂ.ಗಳ ವೆಚ್ಚದಲ್ಲಿ 42 ನಿರಂತರ ಪರಿವೇಷ್ಟಕ ವಾಯುಗುಣಮಟ್ಟ ಮಾಪನ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.

* 2918-19 ನೆ ಸಾಲಿನಲ್ಲಿ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಗೆ ಒಟ್ಟಾರೆಯಾಗಿ 1,949 ಕೋಟಿ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News