ಎಪ್ರಿಲ್‌ನಿಂದ ಸರಕಾರಿ ನೌಕರರಿಗೆ ಶೇ.30ರಷ್ಟು ವೇತನ ಹೆಚ್ಚಳ: ಸಿದ್ದರಾಮಯ್ಯ

Update: 2018-02-16 16:28 GMT

ಬೆಂಗಳೂರು, ಫೆ.16: 6ನೆ ವೇತನ ಆಯೋಗದ ಶಿಫಾರಸ್ಸಿನ ಅನ್ವಯ ಸರಕಾರಿ ನೌಕರರಿಗೆ ಮೂಲ ವೇತನದ ಶೇ.30ರಷ್ಟು ಹೆಚ್ಚುವರಿ ವೇತನವನ್ನು ಮುಂದಿನ ಎಪ್ರಿಲ್‌ನಿಂದ ಜಾರಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನ್ಯಾ.ಶ್ರೀನಿವಾಸ್ ಮೂರ್ತಿ ನೇತೃತ್ವದ 6ನೆ ವೇತನ ಆಯೋಗದ ಸಮಿತಿ ತನ್ನ ವರದಿಯನ್ನು ಇತ್ತೀಚೆಗಷ್ಟೆ ಸಲ್ಲಿಸಿತ್ತು. ಹೀಗಾಗಿ ಆಯವ್ಯಯದಲ್ಲಿ ಈ ಕುರಿತು ಪ್ರಸ್ತಾಪಿಸಿದ್ದೇನೆ. ಶೀಘ್ರದಲ್ಲೆ ವರದಿ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸಿ ಜಾರಿಗೆ ತರಲಾಗುವುದು ಎಂದು ಅವರು ಹೇಳಿದರು.

6ನೆ ವೇತನ ಆಯೋಗದ ಜಾರಿಯಿಂದ 5.93ಲಕ್ಷ ಹಾಲಿ ಸರಕಾರಿ ನೌಕರರು ಹಾಗೂ 5.73ಲಕ್ಷ ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ. ಇದರಿಂದ ಸರಕಾರಕ್ಕೆ 10,508 ಕೋಟಿ ರೂ. ಹೊರೆ ಬೀಳಲಿದೆ. ಆದರೂ ಸರಕಾರದ ಬಹುದಿನದ ಬೇಡಿಕೆ ಈಡೇರಿಸಿದ ತೃಪ್ತಿ ನನಗಿದೆ ಎಂದು ಅವರು ಹೇಳಿದರು.

ಆದ್ಯತಾ ವಲಯಗಳಿಗೆ ಹೆಚ್ಚಿನ ಆದ್ಯತೆ: ಸರಕಾರಿ ನೌಕರರ ವೇತನ ಹೆಚ್ಚಳ, ರೈತರ ಸಾಲ ಮನ್ನಾದಿಂದಾಗಿ ಸರಕಾರಕ್ಕೆ 14,508 ಕೋಟಿ ರೂ. ಹೆಚ್ಚಿನ ಹೊರೆ ಬೀಳಲಿದೆ. ಆದರೂ ಸರಕಾರದ ಆರ್ಥಿಕ ವ್ಯವಸ್ಥೆ ಸುಸ್ಥಿರವಾಗಿರುವುದರಿಂದ ಸಮಸ್ಯೆಯಾಗುವುದಿಲ್ಲ. ಹೀಗಾಗಿ ಕೃಷಿ, ನೀರಾವರಿ, ಶಿಕ್ಷಣ, ಆರೋಗ್ಯ, ಲೋಕೋಪಯೋಗಿ ಇಲಾಖೆ ಸೇರಿದಂತೆ ಆದ್ಯತೆ ವಲಯಕ್ಕೆ ನೀಡುವ ಅನುದಾನದಲ್ಲಿ ಯಾವುದೆ ಕಡಿತ ಮಾಡಿಲ್ಲವೆಂದು ಅವರು ಹೇಳಿದರು.

ಕಾಂಗ್ರೆಸ್ ಸರಕಾರ ಸಾಲದಲ್ಲಿದೆ ಎಂದು ಕೆಲವು ಪ್ರತಿಪಕ್ಷಗಳ ನಾಯಕರು ಆರೋಪಿಸುತ್ತಿದ್ದಾರೆ. ಇವರ ಆರೋಪ ಕೇವಲ ಜನತೆಯನ್ನು ದಾರಿ ತಪ್ಪಿಸುವುದೇ ಆಗಿದೆ. ನಮ್ಮ ಸರಕಾರ ಕಳೆದ ನಾಲ್ಕು ವರ್ಷಗಳಿಂದ ಖರ್ಚಿಗಿಂತ ಆದಾಯ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ನಮ್ಮ ಸರಕಾರ ಯಾವುದೇ ಸಾಲದಲ್ಲಿ ಸಿಲುಕಿಲ್ಲವೆಂದು ಸಮಜಾಯಿಷಿ ನೀಡಿದರು.

ಅಬಕಾರಿ ಇಲಾಖೆಯನ್ನು ಹೊರತು ಪಡಿಸಿ, ಅಂಚೆ, ಮೋಟಾರ್‌ವಾಹನ ಹಾಗೂ ಹಣಕಾಸು ಇಲಾಖೆ ಸೇರಿದಂತೆ ವಿವಿಧ ಇಲಾಖೆ, ಸಂಸ್ಥೆಗಳಿಂದ ರಾಜ್ಯ ಸರಕಾರಕ್ಕೆ ಬರಬೇಕಾದ ತೆರಿಗೆ ಬಂದಿದೆ. ಹೀಗಾಗಿ ಸರಕಾರದ ಆದಾಯದಲ್ಲಿ ಯಾವುದೆ ಕೊರತೆಯಿಲ್ಲವೆಂದು ಅವರು ಹೇಳಿದರು.

-2018-19ನೆ ಸಾಲಿನ ಆಯವ್ಯಯದಲ್ಲಿ ಎಲ್ಲ ವರ್ಗ, ಸಮುದಾಯಕ್ಕೂ ಸಮಾನ ಅವಕಾಶವನ್ನು ನೀಡಲಾಗಿದೆ. ಮುಖ್ಯವಾಗಿ ಎಲ್ಲ ವರ್ಗದ ಜನರಿಗೂ ಉಚಿತ ಆರೋಗ್ಯವನ್ನು ಕಲ್ಪಿಸುವ ಯೂನಿವರ್ಸಲ್ ಹೆಲ್ತ್ ಕಾರ್ಡ್ ಹಾಗೂ ವಿದ್ಯಾರ್ಥಿನಿಯರಿಗೆ ಪಿಯುಸಿಯಿಂದ ಸ್ನಾತಕೋತ್ತರದವರೆಗೆ ಉಚಿತ ಪ್ರವೇಶ ನೀಡಲಾಗಿದೆ. ಹೀಗೆ ಎಲ್ಲ ಇಲಾಖೆಗಳಲ್ಲೂ ಸಮಾನ ಅವಕಾಶ, ಸೌಲಭ್ಯ ನೀಡಿದ್ದೇನೆ ಎಂಬ ತೃಪ್ತಿಯಿದೆ.
-ನಾನು ಯಾವತ್ತು ಚುನಾವಣೆ ದೃಷ್ಟಿಯಿಂದ ಬಜೆಟ್ ರೂಪಿಸುವುದಿಲ್ಲ. ನಮ್ಮ ಹಣಕಾಸು ಸಂಪನ್ಮೂಲಗಳ ಸೌಲಭ್ಯಗಳನ್ನು ದೃಷ್ಟಿಯಲ್ಲಿಟ್ಟುಕೊಂಡು 2018-19 ಬಜೆಟ್ ಮಂಡಿಸಿದ್ದೇನೆ. ಮುಂದಿನ ಬಾರಿಯೂ ನಾವೇ ಅಧಿಕಾರಕ್ಕೆ ಬರುವುದರಿಂದ ವಸ್ತುನಿಷ್ಠವಾಗಿ, ವೈಜ್ಞಾನಿಕವಾಗಿ ಬಜೆಟನ್ನು ರೂಪಿಸಿ ಮಂಡಿಸಿದ್ದೇನೆ.
-ಸಿದ್ದರಾಮಯ್ಯ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News