ಬಜೆಟ್ ಮಂಡನೆಗೂ ಕಾಡಿದ ಶಾಸಕರ ಕೊರತೆ...!

Update: 2018-02-16 16:49 GMT

ಬೆಂಗಳೂರು, ಫೆ. 16: ಚುನಾವಣೆ ಹೊಸ್ತಿಲಿನಲ್ಲಿ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರ ಸರಕಾರದ ಮಹತ್ವದ, ದಾಖಲೆಯ ಬಜೆಟ್ ಮಂಡನೆ ವೇಳೆ ಶಾಸಕರ ಗೈರು ಹಾಜರಿ ಎದ್ದು ಕಾಣುತ್ತಿತ್ತು.

ಶುಕ್ರವಾರ ವಿಧಾನಸಭೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸ್ಪೀಕರ್ ಕೆ.ಬಿ.ಕೋಳಿವಾಡ, ಬಿಜೆಪಿ ಸದಸ್ಯರಾದ ಲಕ್ಷ್ಮಣ ಸವದಿ ಹಾಗೂ ಸುರೇಶ್ ಬಾಬುರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು. ಆ ಬಳಿಕ ಬಜೆಟ್ ಮಂಡನೆಗೆ ಅವಕಾಶ ಕಲ್ಪಿಸಿದರು.

ವಿಧಾನಸಭೆಯ 224 ಮಂದಿ ಸದಸ್ಯರ ಪೈಕಿ ಅರ್ಧದಷ್ಟು ಶಾಸಕರು ಗೈರು ಹಾಜರಾಗಿದ್ದರು. ಬಜೆಟ್ ಮಂಡನೆ ಕಲಾಪಕ್ಕೂ ಶಾಸಕರು ಹಾಜರಾಗಲು ಆಸಕ್ತಿ ತೋರದಿರುವುದು ಅವರ ಬೇಜವಾಬ್ದಾರಿ ಸಾರ್ವಜನಿಕ ಆಕ್ಷೇಪಕ್ಕೂ ಕಾರಣವಾಗಿದೆ. ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ, ಎಚ್.ಡಿ. ರೇವಣ್ಣ, ಆರೋಗ್ಯ ಸಚಿವ ರಮೇಶ್ ಕುಮಾರ್, ವಸತಿ ಸಚಿವ ಎಂ.ಕೃಷ್ಣಪ್ಪ ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಸದಸ್ಯರು ಗೈರು ಹಾಜರಾಗಿದ್ದರು.

ಗುಸುಗುಸು: ಸಿಎಂ ಸಿದ್ದರಾಮಯ್ಯ ನಿರರ್ಗಳವಾಗಿ ತಮ್ಮ ಬಜೆಟ್ ಭಾಷಣ ಮಾಡುತ್ತಿದ್ದರೆ, ನಟ, ಶಾಸಕ ಅಂಬರೀಶ್ ತಮ್ಮ ಸ್ಥಾನದಿಂದ ಎದ್ದು ಬಂದು ಪಕ್ಷೇತರ ಸದಸ್ಯ ಅಶೋಕ್ ಖೇಣಿ ಅವರೊಂದಿಗೆ ಮಾತುಕತೆ ನಡೆಸಿದರು. ಹಲವು ಶಾಸಕರು, ಸಚಿವರ ಸಾಲಿನಲ್ಲಿದ್ದ ಶಿವಕುಮಾರ್, ಮಹದೇವಪ್ಪ ಅವರೊಂದಿಗೆ ಸಮಾಲೋಚನೆ ನಡೆಸುತ್ತಿದ್ದ ದೃಶ್ಯ ಕಂಡುಬಂತು.

ಜೆಡಿಎಸ್ ಬಂಡಾಯ ಶಾಸಕರಾದ ಚೆಲುವರಾಯ ಸ್ವಾಮಿ ಹಾಜರಿದ್ದರು. ಆದರೆ, ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್, ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ, ಅಖಂಡ ಶ್ರೀನಿವಾಸಮೂರ್ತಿ ಸೇರಿದಂತೆ ಹಲವು ಮಂದಿ ಗೈರು ಹಾಜರಾಗಿದ್ದರು.

ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಬಿಜೆಪಿ ಸದಸ್ಯರಾದ ಕೆ.ಜಿ.ಬೋಪಯ್ಯ, ಬಸವರಾಜ ಬೊಮ್ಮಾಯಿ, ಬಿ.ವೈ.ರಾಘವೇಂದ್ರ, ಸಿ.ಟಿ.ರವಿ ಸೇರಿ 25 ಸದಸ್ಯರನ್ನು ಬಿಟ್ಟರೆ ವಿರೋಧ ಪಕ್ಷದ ಸಾಲಿನಲ್ಲಿ ಆಸನಗಳು ಬಹುತೇಕ ಖಾಲಿ ಖಾಲಿಯಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News