ಪೊಲೀಸ್ ಇಲಾಖೆಯಲ್ಲಿ ಶೇ.25ರಷ್ಟು ಮಹಿಳಾ ಪ್ರಾತಿನಿಧ್ಯ

Update: 2018-02-16 18:01 GMT

* ಕಮಿಷನರ್ ಕಚೇರಿಗಳಲ್ಲಿ ‘ನಿರ್ಭಯ ಕೇಂದ್ರ’
* ಮಂಗಳೂರಿನಲ್ಲಿ ಅತ್ಯುನ್ನತ ಭದ್ರತಾ ವ್ಯವಸ್ಥೆ ಕಾರಾಗೃಹ

ಬೆಂಗಳೂರು, ಫೆ. 16: ಪೊಲೀಸ್ ಇಲಾಖೆಯಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಮುಂದಿನ 5 ವರ್ಷದಲ್ಲಿ ಶೇ.25ಕ್ಕೆ ಹೆಚ್ಚಿಸಲಾಗುವುದು. ಅಲ್ಲದೆ, ಕ್ರೀಡೆಯಲ್ಲಿ ರಾಷ್ಟ್ರ ಅಥವಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಇಲಾಖೆಯ ನೇರ ನೇಮಕಾತಿಗೆ ಹೊಸ ನೀತಿ ರೂಪಿಸಿ, ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಶುಕ್ರವಾರ ವಿಧಾನಸಭೆಯಲ್ಲಿ ಆಯವ್ಯಯ ಮಂಡನೆ ಮಾಡಿದ ಅವರು, ಪೊಲೀಸ್ ನೇಮಕಾತಿ ಪ್ರಕ್ರಿಯೆಗಳನ್ನು ನಡೆಸಲು ಶಾಶ್ವತವಾದ ಪೊಲೀಸ್ ಸೇವೆಗಳ ನೇಮಕಾತಿ ಮಂಡಳಿಯನ್ನು ಸ್ಥಾಪಿಸಲಾಗುವುದು. ಮುಂದಿನ ಎರಡು ವರ್ಷಗಳಲ್ಲಿ ಪ್ರಸ್ತುತ ಅಸ್ತಿತ್ವದಲ್ಲಿರುವ ಪೊಲೀಸ್ ತರಬೇತಿ ಶಾಲೆಗಳ ತರಬೇತಿ ನೀಡುವ ಸಾಮರ್ಥ್ಯ ಹಾಗೂ ಸೌಲಭ್ಯಗಳನ್ನು ಹೆಚ್ಚಿಸಲಾಗುವುದು.

ಮುಂದಿನ ಎರಡು ವರ್ಷಗಳಲ್ಲಿ 50 ಕೋಟಿ ರೂ.ಗಳ ವೆಚ್ಚದಲ್ಲಿ ತರಬೇತಿಯ ಸಾಮರ್ಥ್ಯವನ್ನು 3200 ರಿಂದ 5 ಸಾವಿರಕ್ಕೆ ಹೆಚ್ಚಿಸಲಾಗುವುದು. ಪೊಲೀಸರ ಶೌರ್ಯ ಸಾಹಸವನ್ನು ಗೌರವಿಸಲು ಬೆಂಗಳೂರಿನಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಶಾಶ್ವತ ರಾಜ್ಯ ಪೊಲೀಸ್ ಸ್ಮಾರಕವನ್ನು ನಿರ್ಮಿಸಲಾಗುವುದು.

ಸೈಬರ್ ಅಪರಾಧಗಳನ್ನು ಪರಿಣಾಮಕಾರಿಯಾಗಿ ತನಿಖೆ ಮಾಡಲು ಮತ್ತು ನಿಯಂತ್ರಿಸಲು ಸೈಬರ್ ಪೊಲೀಸ್ ಠಾಣೆಗಳಿಗೆ ನೆರವಾಗಲು 5 ಕೋಟಿ ರೂ.ಗಳ ವೆಚ್ಚದಲ್ಲಿ ಸೈಬರ್ ಫೋರೆನ್ಸಿಕ್ ಪ್ರಯೋಗಾಲಯ ಸ್ಥಾಪಿಸಲಾಗುವುದು. ಪೊಲೀಸ್ ವ್ಯವಸ್ಥೆ ಮತ್ತಷ್ಟು ನಾಗರಿಕ ಸ್ನೇಹಿಯಾಗಲು ತಂತ್ರಾಂಶಗಳ ಉನ್ನತೀಕರಣದ ಮೂಲಕ ಇಲಾಖೆಯ ಮಾಹಿತಿ ತಂತ್ರಜ್ಞಾನ ಜಾಲವನ್ನು ಬಲಪಡಿಸಲಾಗುವುದು ಹಾಗೂ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಿಗೆ ಬ್ರಾಡ್‌ಬ್ಯಾಂಡ್ ಕ್ಷಮತೆಯನ್ನು ಹೆಚ್ಚಿಸಲಾಗುವುದು.

ರಾಜ್ಯದ ಎಲ್ಲ ಪೊಲೀಸ್ ಕಮಿಷನರ್ ಕಚೇರಿಗಳಲ್ಲಿ ‘ನಿರ್ಭಯ ಕೇಂದ್ರ’ಗಳನ್ನು ಸ್ಥಾಪಿಸಲಾಗುವುದು. ಜಿಲ್ಲಾ ಕೇಂದ್ರಗಳಲ್ಲಿನ ಎಲ್ಲ್ಲ ಮಹಿಳಾ ಪೊಲೀಸ್ ಠಾಣೆಗಳನ್ನು ಒನ್ ಸ್ಟಾಪ್ ಸರ್ವಿಸ್ ಸೆಂಟರ್‌ಗಳನ್ನಾಗಿ ಉನ್ನತೀಕರಿಸಲಾಗುವುದು. ಎಲ್ಲ ಪೊಲೀಸ್ ಠಾಣೆ ಹಾಗೂ ಕಚೇರಿಗಳಲ್ಲಿ ಮಹಿಳೆಯರಿಗೆ ಶೌಚಾಲಯಗಳನ್ನು ನಿರ್ಮಿಸಲಾಗುವುದು.

ಬಾಕಿ ಉಳಿದಿರುವ ವಿಚಾರಣೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಎಲ್ಲ ಜಿಲ್ಲಾ ಕಾರಾಗಹಗಳು ಹಾಗೂ ನ್ಯಾಯಾಲಯಗಳಿಗೆ ವಿಡಿಯೋ ಲಿಂಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು. ಮಂಗಳೂರಿನಲ್ಲಿ 85 ಕೋಟಿ ರೂ. ವೆಚ್ಚದಲ್ಲಿ ಹೊಸ ಅತ್ಯುನ್ನತ ಭದ್ರತಾ ವ್ಯವಸ್ಥೆಯ ಕಾರಾಗೃಹವನ್ನು ನಿರ್ಮಿಸಲಾಗುವುದು. ಕೈದಿಗಳಿಗೆ ವಿವಿಧ ವತ್ತಿಗಳಲ್ಲಿ ಕೌಶಲ್ಯ ತರಬೇತಿ ನೀಡಿ ಪುನರ್ವಸತಿಗೆ ನೆರವಾಗಲು ಕರ್ನಾಟಕ ಕಾರಾಗಹ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಲಾಗುವುದು.

ಬೆಂಗಳೂರು ಕೇಂದ್ರ ಕಾರಾಗಹದಲ್ಲಿ 100 ಕೋಟಿ ರೂ.ಗಳ ವೆಚ್ಚದಲ್ಲಿ ಅತ್ಯುನ್ನತ ಭದ್ರತಾ ವಿಭಾಗವನ್ನು ಸ್ಥಾಪಿಸಲಾಗುವುದು. ಕೆಎಸ್‌ಎಎಫ್‌ಇ-1 ಯೋಜನೆಯಡಿ 213 ಅಗ್ನಿಶಾಮಕ ಠಾಣೆಗಳನ್ನು ಸ್ಥಾಪಿಸುವ ಮೂಲಕ ರಾಜ್ಯದ 176 ತಾಲೂಕುಗಳ ಪೈಕಿ 174 ತಾಲೂಕುಗಳಲ್ಲಿ ಅಗ್ನಿ ಸುರಕ್ಷತೆಯನ್ನು ವಿಸ್ತರಿಸಿದೆ. ಇನ್ನೂ ಹೆಚ್ಚಿನ ಅಗ್ನಿ ಸುರಕ್ಷತೆಯನ್ನು ಹಾಗೂ ಉನ್ನತೀಕರಿಸಿದ ವಿಪತ್ತು ಮತ್ತು ತುರ್ತು ಪರಿಸ್ಥಿತಿ ನಿರ್ವಹಣೆಯನ್ನು ಹಾಲಿ ಇರುವ ಎಲ್ಲಾ ತಾಲೂಕುಗಳು ಮತ್ತು ಹೊಸದಾಗಿ ರಚಿಸಿದ 50 ತಾಲೂಕುಗಳಲ್ಲಿ ಕೆಎಸ್‌ಎಎಫ್‌ಇ-2 ಯೋಜನೆಯಡಿ ಹೊಸ ಅಗ್ನಿಶಾಮಕ ಠಾಣೆಗಳನ್ನು ಮುಂದಿನ ಐದು ವರ್ಷಗಳಲ್ಲಿ ಸ್ಥಾಪಿಸಲಾಗುವುದು.

ನಿವೃತ್ತಿಯ ನಂತರ ಪುನರ್ವಸತಿಯನ್ನು ಒದಗಿಸುವ ಸಲುವಾಗಿ ರಾಜ್ಯದಲ್ಲಿನ ಎಲ್ಲ ಮಾಜಿ ಸೈನಿಕರ ದತ್ತಾಂಶವನ್ನು ಸಿದ್ಧಪಡಿಸಿ ಕೌಶಲ್ಯಾಭಿವೃದ್ಧಿ ಇಲಾಖೆಯೊಂದಿಗೆ ಜೋಡಣೆ ಮಾಡಲಾಗುವುದು. 2018-19ನೆ ಸಾಲಿನಲ್ಲಿ ಒಳಾಡಳಿತ ಇಲಾಖೆಗೆ ಒಟ್ಟಾರೆಯಾಗಿ 6,647 ಕೋಟಿ ರೂ.ಗಳನ್ನು ಒದಗಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News