ರಾಜ್ಯ ಹೆದ್ದಾರಿ ಅಭಿವದ್ಧಿ ಯೋಜನೆಗೆ 3480 ಕೋಟಿ ರೂ. ಅನುದಾನ

Update: 2018-02-16 18:06 GMT

ಬೆಂಗಳೂರು, ಫೆ.16: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 2018-19 ನೆ ಸಾಲಿನ ರಾಜ್ಯ ಬಜೆಟ್‌ನಲ್ಲಿ ರಾಜ್ಯ ಹೆದ್ದಾರಿ ಅಭಿವದ್ಧಿ ಯೋಜನೆಗೆ 3480 ಕೋಟಿ ರೂ. ಮೀಸಲಿಟ್ಟಿದೆ.

* ರಾಜ್ಯ ಹೆದ್ದಾರಿ ಅಭಿವದ್ಧಿ ಯೋಜನೆ ಹಂತ-4ರಲ್ಲಿ 2722 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿ ರಸ್ತೆಗಳನ್ನು 3480 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಿದ್ದು, 2018-19ನೇ ಸಾಲಿನಲ್ಲಿ ವಿವರವಾದ ಯೋಜನಾ ವರದಿಯನ್ನು ತಯಾರಿಸಲಾಗುವುದು.

* ರಸ್ತೆ ಅಪಘಾತಗಳನ್ನು ತಡೆಗಟ್ಟಲು ಇಲಾಖೆಯ ವಿವಿಧ ಯೋಜನೆಗಳಡಿ ರಸ್ತೆ ಸುರಕ್ಷತಾ ಕಾರ್ಯಕ್ರಮಗಳನ್ನು ಕೈಗೊಳ್ಳಲು 150 ಕೋಟಿ ರೂ.ಗಳನ್ನು ನಿಗದಿಪಡಿಸಲಾಗುವುದು.

* ಕೆ.ಆರ್.ಡಿ.ಸಿ.ಎಲ್ ವತಿಯಿಂದ ವಿಶ್ವ ಬ್ಯಾಂಕ್ ನೆರವಿನೊಂದಿಗೆ ಕೈಗೊಳ್ಳಲಾಗುತ್ತಿರುವ 300 ಕಿ.ಮೀ. ಉದ್ದದ 5 ರಸ್ತೆಗಳನ್ನು ಪೂರ್ಣಗೊಳಿಸಲಾಗುವುದು.

* ಇಲಾಖೆಯ ರಸ್ತೆ, ಸೇತುವೆ ಮತ್ತು ಕಟ್ಟಡಗಳ ವಿವರ ಹಾಗೂ ಪ್ರಗತಿಯಲ್ಲಿರುವ ಕಾಮಗಾರಿಗಳ ವಿವರಗಳನ್ನು ಜಿಯೋ ಟ್ಯಾಗ್ ಮಾಡಿ ಜಿಐಎಸ್‌ನಲ್ಲಿ ಅಳವಡಿಸಲಾಗುವುದು.

* ಹೊಸದಿಲ್ಲಿಯಲ್ಲಿರುವ ಕರ್ನಾಟಕ ಭವನ-1ರ ಮುಂಭಾಗವನ್ನು ಕೆಡವಿ ಮುಂದಿನ 2 ವರ್ಷಗಳಲ್ಲಿ 30 ಕೋಟಿ ರೂ.ಗಳ ವೆಚ್ಚದಲ್ಲಿ ಹೊಸ ಭವನವನ್ನು ನಿರ್ಮಿಸಲಾಗುವುದು.

* ಬೆಂಗಳೂರು ಎಂ.ಎಸ್.ಬಿಲ್ಡಿಂಗ್ ಹತ್ತಿರ 20 ಕೋಟಿ ರೂ.ಗಳ ವೆಚ್ಚದಲ್ಲಿ ಮಲ್ಟಿ ಲೆವಲ್ ಕಾರ್ ಪಾರ್ಕಿಂಗ್ ನಿರ್ಮಾಣವನ್ನು ಕೈಗೊಳ್ಳಲಾಗುವುದು.

* ಮಡಿಕೇರಿ-ತಲಕಾವೇರಿ ರಸ್ತೆಯ ಆಯ್ದ ಭಾಗಗಳಲ್ಲಿ 10 ಕೋಟಿ ರೂ.ಗಳ ವೆಚ್ಚದಲ್ಲಿ ಮರು ಡಾಂಬರೀಕರಣ ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು.

* ಬೆಂಗಳೂರು ಉತ್ತರ ತಾಲೂಕಿನ ಬ್ಯಾತ ಗ್ರಾಮದಿಂದ ಹೆಸರಘಟ್ಟ ಫಾರ್ಮ್ ಮೂಲಕ ರಾಜಾನುಕುಂಟೆ-ಮಧುರೆ ರಸ್ತೆ ಸೇರುವ ರಸ್ತೆಗೆ ಪರ್ಯಾಯವಾಗಿ ಬಸವಣ್ಣ ದೇವಸ್ಥಾನದಿಂದ ಕುಕ್ಕನಹಳ್ಳಿ ಮಾರ್ಗವಾಗಿ ಹಾಗೂ ಮಾರ್ಗವಾಗಿ ರಾಜಾನುಕುಂಟೆ-ಮಧುರೆ ರಸ್ತೆಗೆ ಸೇರುವ ರಸ್ತೆ ಅಭಿವೃದ್ಧಿಗಾಗಿ 12 ಕೋಟಿ ರೂ.ಒದಗಿಸಲಾಗುವುದು.

* ಕಾರವಾರ ಬಂದರಿನಲ್ಲಿ 61 ಕೋಟಿ ರೂ. ಮೊತ್ತ್ತದಲ್ಲಿ 250 ಮೀಟರ್ ಉದ್ದದ ಕೋಸ್ಟಲ್ ಬರ್ತ್ ಹಾಗೂ 90 ಕೋಟಿ ರೂ.ಮೊತ್ತದಲ್ಲಿ 425 ಮೀಟರ್ ಉದ್ದದ ಅಲೆ ತಡೆಗೋಡೆ ನಿರ್ಮಾಣ ಮಾಡಲಾಗುವುದು.

* ಹಳೆ ಮಂಗಳೂರು ಬಂದರಿನಲ್ಲಿ 65 ಕೋಟಿ ರೂ. ಮೊತ್ತದಲ್ಲಿ 300 ಮೀಟರ್ ಉದ್ದದ ಕೋಸ್ಟಲ್ ಬರ್ತ್ ನಿರ್ಮಾಣ ಮತ್ತು ಬಂದರಿನ ಆಳವನ್ನು 29 ಕೋಟಿ ರೂ.ಮೊತ್ತದಲ್ಲಿ 7 ಮೀಟರ್‌ವರೆಗೆ ಹೆಚ್ಚಿಸಲು ಹೂಳೆತ್ತುವ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.

* ಲೋಕೋಪಯೋಗಿ ಕೋಡ್‌ಗೆ ಅಗತ್ಯ ತಿದ್ದುಪಡಿ ತರುವ ಮೂಲಕ ಎಲ್ಲ ಸಾರ್ವಜನಿಕ ಕಟ್ಟಡಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯಗಳೊಂದಿಗೆ ಡ್ರೆಸ್ಸಿಂಗ್ ರೂಂಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News