ಪುರುಷ ಸೂಕ್ತದ ಮೂಲಕ ಅಸಮಾನತೆಯನ್ನು ಶಾಶ್ವತಗೊಳಿಸಿದ ಆ ಲೇಖಕ!

Update: 2018-02-16 18:53 GMT

ಭಾರತದ ಸಮಾಜದಲ್ಲಿ ಹಿಂದೆ ಜಾತಿವ್ಯವಸ್ಥೆ ಇರಲಿಲ್ಲ. ಋಗ್ವೇದದಲ್ಲಿಯೂ ಜಾತಿವ್ಯವಸ್ಥೆ ಇರಲಿಲ್ಲ, ‘ಶೂದ್ರ’ ಎಂಬ ವರ್ಣವೇ ಇರಲಿಲ್ಲ! ಇದ್ದದ್ದು ಕೇವಲ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಎಂಬ ಮೂರು ವರ್ಣಗಳಷ್ಟೆ. ಮತ್ತು ಅವುಗಳ ನಡುವೆಯೂ ತಾರತಮ್ಯ, ಮೇಲು-ಕೀಳು ಇರಲಿಲ್ಲ. ಅಂದರೆ ಋಗ್ವೇದದಲ್ಲಿ ಕಂಡುಬರುವ ವರ್ಣವ್ಯವಸ್ಥೆ ಹೇಳುವ ಪುರುಷ ಸೂಕ್ತ ಶ್ಲೋಕ ಋಗ್ವೇದದಲ್ಲಿ ಇರಲೇ ಇಲ್ಲ. ತದನಂತರ ಅದ್ಯಾವುದೋ ಒಂದು ಕಾಲ ಘಟ್ಟದಲ್ಲಿ ಅದನ್ನು ಸೇರಿಸಲಾಗಿದೆ. ಯಾಕೆಂದರೆ ಬಾಬಾಸಾಹೇಬ್ ಅಂಬೇಡ್ಕರರ ಪ್ರಕಾರ ಋಗ್ವೇದದ ಇತರ ಅಧ್ಯಾಯಗಳ ಭಾಷೆಗೂ ಶೈಲಿಗೂ ತಾತ್ಪರ್ಯಕ್ಕೂ ಪುರುಷ ಸೂಕ್ತದ ಭಾಷೆಗೂ ಶೈಲಿಗೂ ತಾತ್ಪರ್ಯಕ್ಕೂ ಭಾರೀ ವ್ಯತ್ಯಾಸವಿದೆ. ಅಂದರೆ ಯಾವುದೋ ಒಂದು ಸಂದರ್ಭದಲ್ಲಿ ಒಂದು ಸಮುದಾಯದ ಲೇಖಕ ನೋರ್ವ ಸ್ವಾರ್ಥಕ್ಕಾಗಿ ಋಗ್ವೇದವನ್ನು ತುಂಬಾ ತಾಂತ್ರಿಕವಾಗಿ ಮೋಸದ ರೀತಿ ತಿದ್ದಿ ಅಲ್ಲಿ ಅಸಮಾನತೆ ಬೋಧಿಸುವ ಪುರುಷ ಸೂಕ್ತ ಶ್ಲೋಕವನ್ನು ಸೇರಿಸಿದ್ದಾನೆ. (ನಿಜ ಹೇಳಬೇಕೆಂದರೆ ಶೂದ್ರರೆಲ್ಲರೂ ಕ್ಷತ್ರಿಯ ವರ್ಣಕ್ಕೆ ಸೇರಿದ್ದರು. ಆದರೆ ಋಗ್ವೇದವನ್ನು ತಿದ್ದಿದ ಆ ವ್ಯಕ್ತಿ ಹಾಗೆ ತಿದ್ದುವಾಗ ಅಲ್ಲಿ ಶೂದ್ರರನ್ನು ಕೆಳ ಮಟ್ಟಕ್ಕೆ ಇಳಿಸಿ, ಯಾಕೆಂದರೆ ಬ್ರಾಹ್ಮಣರಿಗೂ ಶೂದ್ರರಿಗೂ ವೈಮನಸ್ಸು ಉಂಟಾಗುತ್ತದೆ ಅದರ ಸೇಡನ್ನು ಹೀಗೆ ಅವರನ್ನು ಕೆಳಮಟ್ಟಕ್ಕೆ ಇಳಿಸುವ ಮೂಲಕ ತಮ್ಮನ್ನು ಮೇಲ್ಮಟ್ಟಕ್ಕೆ ಏರಿಸುವ ಮೂಲಕ ಬ್ರಾಹ್ಮಣರು ತೀರಿಸಿಕೊಳ್ಳುತ್ತಾರೆ.

ಆಧಾರ: ಬಾಬಾಸಾಹೇಬ್ ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂಪುಟ 7)

ಹಾಗೆಯೇ ಋಗ್ವೇದಕ್ಕೆ ಸೇರಿಸಿದ ಆ ಪುರುಷ ಸೂಕ್ತದ ಶ್ಲೋಕಗಳಲ್ಲಿ ಬ್ರಾಹ್ಮಣರು ಮಾಡಿದ ಒಂದು ತಂತ್ರವೇನೆಂದರೆ ಅಸಮಾನತೆಯನ್ನು ಶಾಶ್ವತ ಮತ್ತು ವ್ಯಕ್ತಿಯ ಹುಟ್ಟಿಗೆ ಲಿಂಕ್ ಮಾಡಿದ್ದು. ಯಾಕೆಂದರೆ ಋಗ್ವೇದ ಕಾಲದಲ್ಲಿ ಯಾರು ಬೇಕಾದರೂ ಬ್ರಾಹ್ಮಣರಾಗಬಹುದಿತ್ತು, ಯಾರು ಬೇಕಾದರೂ ಕ್ಷತ್ರಿಯರಾಗಬಹುದಿತ್ತು, ವೈಶ್ಯರಾಗಬಹುದಿತ್ತು. ಆದರೆ ಪುರುಷ ಸೂಕ್ತ ಶ್ಲೋಕ ಸೇರಿಸಿದ ಇಸವಿಯಲ್ಲಿ ಆ ಪದ್ಧತಿಯನ್ನು ಕಿತ್ತು ಹಾಕಿ ಅದುವರೆಗೆ ಯಾರು ಬ್ರಾಹ್ಮಣರಾಗಿದ್ದರೋ ಅವರು ಮಾತ್ರ ಬ್ರಾಹ್ಮಣರು, ಯಾರು ಕ್ಷತ್ರಿಯರಾಗಿದ್ದರೋ ಅವರು ಮಾತ್ರ ಕ್ಷತ್ರಿಯರು, ವೈಶ್ಯರು ಹೀಗೆ ಮಾಡಲಾಯಿತು ಮತ್ತು ಕ್ಷತ್ರಿಯರಲ್ಲಿಯೂ ತಮ್ಮ ವಿರುದ್ಧ ಬಂಡಾಯ ಎದ್ದಿದ್ದವರನ್ನು ಶೂದ್ರರು ಎನ್ನಲಾಗಿ ಅವರಿಗೆ ಕೀಳು ಮಟ್ಟ ನೀಡಲು ಸೃಷ್ಟಿಕರ್ತನ ಪಾದವನ್ನು ಅವರಿಗೆ ಆರೋಪಿಸಲಾಯಿತು. ಆ ಮೂಲಕ ಅಸಮಾನತೆಯನ್ನು ಶಾಶ್ವತಗೊಳಿಸಲಾಯಿತು. ಖಂಡಿತ, ಇದನ್ನೆಲ್ಲ ಮಾಡಿದ್ದು ಯಾವನೋ ಒಬ್ಬ ಬುದ್ಧಿವಂತ ಲೇಖಕ, ಬರಹಗಾರ.

ತನ್ನ ಬರಹದ ಚಾಕಚಕ್ಯತೆ, ಕುಯುಕ್ತಿಯ ಕಲ್ಪನೆ ಮೂಲಕ ಆತ ಇದನ್ನು ಸಾಧಿಸಿದ. ಯಾಕೆಂದರೆ ಬ್ರಾಹ್ಮಣರು ಸೃಷ್ಟಿಕರ್ತನ ತಲೆಯಿಂದ, ಅಂದರೆ ತಲೆ ಅಂದರೆ ಮೆದುಳು ಅಂದರೆ ಬುದ್ಧಿ ಅರ್ಥಾತ್ ‘ಬುದ್ಧಿವಂತರು’ ಎಂದರ್ಥ! ಇನ್ನು ತೋಳು ಅಂದರೆ ಬಲ. ಅಂದರೆ ಯುದ್ಧ ಮಾಡಲು ತೋಳ್ಬಲ ಬೇಕು! ಆ ಕಾರಣಕ್ಕಾಗಿ ಕ್ಷತ್ರಿಯರನ್ನು ತೃಪ್ತಿಪಡಿಸಿದ ಹಾಗೂ ಆಯಿತು, ಹಾಗೆಯೇ ಅವರನ್ನು ಬ್ರಾಹ್ಮಣರಿಗಿಂತ ಕೆಳಗಿಟ್ಟ ಹಾಗೆಯೂ ಆಯಿತು! ಏಕೆಂದರೆ ತಲೆಯ ಕೆಳಗೆ ತಾನೇ ತೋಳು ಬರುವುದು? ಮತ್ತು ಎಂದಾದರೂ ತೋಳು ತಲೆಗಿಂತ ಮೇಲೆ ಬರಲು ಸಾಧ್ಯವೇ? ಹೀಗೆ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಂಗೆ ಆ ಲೇಖಕ ಕ್ಷತ್ರಿಯರ ತೋಳ್ಬಲಕ್ಕೂ ನ್ಯಾಯ ಒದಗಿಸಿದ ಮತ್ತು ವ್ಯವಸ್ಥಿತವಾಗಿ ಅವರನ್ನು ಬ್ರಾಹ್ಮಣರಿಗಿಂತ ಕೆಳಗಿನ ಸ್ಥಾನದಲ್ಲಿಟ್ಟ. ಇನ್ನು ಇದೇ ಹೋಲಿಕೆ ವೈಶ್ಯರಿಗೂ ಸಲ್ಲುತ್ತದೆ. ಆದರೂ ಮತ್ತೆ ಹೇಳುವುದಾದರೆ, ಈ ನಿಟ್ಟಿನಲ್ಲಿ ವೈಶ್ಯರನ್ನು ಕ್ಷತ್ರಿಯರಿಗಿಂತ ಕೆಳಗಿಳಿಸುವ ಮೂಲಕ ಆ ಲೇಖಕ ಕ್ಷತ್ರಿಯರಿಗೂ ಒಂದು ರೀತಿಯ ಮಾನಸಿಕ ತೃಪ್ತಿ ನೀಡಿದ, ಪರೋಕ್ಷವಾಗಿ ಬ್ರಾಹ್ಮಣರನ್ನು ಮತ್ತಷ್ಟು ಮೇಲಕ್ಕೇರಿಸಿದ! ಈ ನಡುವೆ ತಮ್ಮ ವಿರುದ್ಧ ಅಂದರೆ ಬ್ರಾಹ್ಮಣರ ವಿರುದ್ಧ ಬಂಡಾಯ ಸಾರಿದ್ದ ಕ್ಷತ್ರಿಯ ಸಮುದಾಯದ ಕೆಲವರನ್ನು ಆ ಲೇಖಕ ಈ ಮೂರೂ ವರ್ಣಗಳಿಗಿಂತ ಕೆಳಕ್ಕಿಳಿಸಿ ‘ಶೂದ್ರ’ ಎಂಬ ಹೊಸ ವರ್ಣವನ್ನೇ ಸೃಷ್ಟಿಸಿದ! ಹಾಗೆಯೇ ಅವರನ್ನು ಸೃಷ್ಟಿಕರ್ತನ ಪಾದಕ್ಕೆ ಹೋಲಿಸಿದ. ಆ ಮೂಲಕ ಹೊಲಸು ತುಳಿಯುವ ಪಾದ ಕೀಳು, ಹಾಗಾಗಿ ಆ ಸಮುದಾಯವೂ ಕೀಳು! ಪರಿಣಾಮ ಇದು ಬ್ರಾಹ್ಮಣರನ್ನು ಮತ್ತಷ್ಟು ಮೇಲಕ್ಕೇರಿಸಿತು, ವೈಶ್ಯ ಮತ್ತು ಕ್ಷತ್ರಿಯರಿಗೆ ಮತ್ತಷ್ಟು ತೃಪ್ತಿ ನೀಡಿತು.

ಏಕೆಂದರೆ ನಮ್ಮ ಕೆಳಗೆ ಇನ್ನೊಬ್ಬ ಇದ್ದಾನಲ್ಲ ಎಂಬಂತೆ. ಈ ನಡುವೆ ಬುದ್ಧನ ಅನುಯಾಯಿಗಳಾಗಿ ಈ ಇಡೀ ವ್ಯವಸ್ಥೆಯ ವಿರುದ್ಧ ಇದ್ದವರನ್ನು ‘ಅವರ್ಣೀಯರು’ ಎನ್ನಲಾಯಿತು ಮತ್ತು ಅವರೇ ಇಂದಿನ ಅಸ್ಪಶ್ಯರಾದರು. ಒಟ್ಟಾರೆ ಭಾರತದ ಇಂದಿನ ಸಾಮಾಜಿಕ ವ್ಯವಸ್ಥೆ ಅಂದು ಓರ್ವ ಲೇಖಕನ, ಬರಹಗಾರನ ಬುದ್ಧಿವಂತಿಕೆಯ ಫಲ. ಮಾನವರ ಸೃಷ್ಟಿಯನ್ನು ಸೃಷ್ಟಿಕರ್ತನ ವಿವಿಧ ಅಂಗಗಳ ಮೇಲಿನಿಂದ ಕೆಳಗೆ ಎಂಬಂತೆ ಆತ ಹೋಲಿಸಿದ ಕಲ್ಪನೆ ಮತ್ತು ಹೇಗೆ ಆ ಅಂಗಗಳು ಸ್ಥಳಾಂತರಗೊಳ್ಳುವುದು ಸಾಧ್ಯವಿಲ್ಲವೋ, ಅವುಗಳ ಸ್ಥಾನ ಶಾಶ್ವತವೋ ಹಾಗೆ ಆ ವರ್ಣಗಳ ಶ್ರೇಣೀಕರಣದ ಆ ಸ್ಥಾನಗಳನ್ನು ಆತ ದೇಹದ ಆ ಅಂಗಗಳ ಸ್ಥಾನಗಳಂತೆಯೇ ಶಾಶ್ವತಗೊಳಿಸಿದ ಆ ಪರಿ! ಅಬ್ಬಾ!! ಆತನ ಆ ಹೋಲಿಕೆಗೆ ಕುಯುಕ್ತಿಯ ಆಲೋಚನೆಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ. ಅಂದಹಾಗೆ ಪುರುಷ ಸೂಕ್ತದ ಆ ಶ್ಲೋಕಗಳ ಮೂಲಕ ಆತ ಹೇಳಿದ್ದನ್ನು ತದನಂತರದ ಸಾಹಿತ್ಯಗಳು ಪುನರುಚ್ಛರಿಸಿದವು.

ಅದು ಬ್ರಾಹ್ಮಣಕಗಳಿರಲಿ, ಸೂತ್ರಗಳಿರಲಿ, ಇತರ ವೇದಗಳಿರಲಿ, ವೇದಾಂತವಿರಲಿ, ಪುರಾಣವಿರಲಿ... ಋಗ್ವೇದಕ್ಕೆ ಹೆಚ್ಚುವರಿಯಾಗಿ ಸೇರಿಸಿದ ಪುರುಷ ಸೂಕ್ತದ ಶ್ಲೋಕಗಳನ್ನು ಗಿಣಿ ಪಾಠದಂತೆ ಪುನರುಚ್ಛರಿಸಲಾಯಿತು ಅಸತ್ಯವನ್ನು ಸತ್ಯಗೊಳಿಸಲು, ಅಸಮಾನತೆಯ ಅನ್ಯಾಯವನ್ನು ಶಾಶ್ವತಗೊಳಿಸಲು. ಅಲ್ಲದೆ ಋಗ್ವೇದಕ್ಕೆ ಹೀಗೆ ಹೆಚ್ಚುವರಿಯಾಗಿ ಪುರುಷ ಸೂಕ್ತ ಸೇರಿಸಿದ ಆ ಲೇಖಕ ಇದನ್ನು ತಾನು ಬರೆದಿದ್ದು ಎಂದರೆ ಜನ ಒಪ್ಪಿಕೊಳ್ಳುವುದಿಲ್ಲ ಎಂದು ಅದಕ್ಕೆ ಇನ್ನೊಂದು ತಂತ್ರ ಹೆಣೆದ! ಅದೆಂದರೆ ವೇದಗಳು ಅವು ಅಪೌರುಷೇಯ ಎಂದು! ಅಂದರೆ ಅವುಗಳನ್ನು ಮನುಷ್ಯರೇ ಬರೆಯಲಿಲ್ಲ, ದೇವರು ಬರೆದದ್ದು ಎಂದು! ಆ ಮೂಲಕ ಜನ ಅದರ ವಿರುದ್ಧ ಬಂಡಾಯ ಏಳದಂತೆ ನೋಡಿಕೊಂಡ! ಹಾಗೆಯೇ ಜನರು ಅಷ್ಟೇ, ಇದರ ವಿರುದ್ಧ ಮಾತನಾಡಿದರೆ ದೇವರು ಏನು ಮಾಡುತ್ತಾನೋ ಎಂದು ಹೆದರಿ ಸುಮ್ಮನಾದರು!
 
ಈ ನಡುವೆ ಮತ್ತೂ ಮುಂದುವರಿದ ಆ ಲೇಖಕನ ಮುಂದಿನ ತಲೆಮಾರಿನವರು ‘ಮನು’ ಎಂಬವನ ಮೂಲಕ ಪುರುಷ ಸೂಕ್ತದ ಆ ಅಂಶಗಳೆಲ್ಲವನ್ನು ಕಾನೂನುಬದ್ಧಗೊಳಿಸಲು ‘ಮನುಸ್ಮತಿ’ ಬರೆಸಿದರು. ಇನ್ನು ಆ ಸ್ಮತಿಯನ್ನು ಎಲ್ಲಿ ಎಲ್ಲರೂ ಓದಿ ತಮ್ಮ ಗುಟ್ಟು ತಿಳಿದುಕೊಳ್ಳುತ್ತಾರೋ ಎಂದು ಯೋಚಿಸಿದ ಮನು ಎಂಬ ಆತ ಬಹುಸಂಖ್ಯಾತರನ್ನು ಅದನ್ನು ಓದುವುದರಿಂದ ದೂರ ಇಡಲು ‘‘ಶೂದ್ರರು ಸಂಸ್ಕೃತ ಕಲಿತರೆ ಅವರ ಕಿವಿಗೆ ಕಾದ ಸೀಸೆ ಸುರಿಯಬೇಕು’’ ಎಂದು ಶಿಕ್ಷೆ ಕೂಡ ವಿಧಿಸಿದ. ತನ್ಮೂಲಕ ತಮ್ಮನ್ನು ಯಾರೂ ಪ್ರಶ್ನಿಸದ ಹಾಗೆಯೂ ಅಂತಹ ಲೇಖಕರು ನೋಡಿಕೊಂಡರು. ಒಂದಂತೂ ನಿಜ, ಪುರುಷ ಸೂಕ್ತ ಬರೆದ, ಮನುಸ್ಮತಿ ಬರೆದ ಇಂತಹ ಮಾನವ ವಿರೋಧಿ ಲೇಖಕರ ಬರಹಗಳೇ ಇಂದಿಗೂ ಸಮಾಜವನ್ನು ಆಳುತ್ತಿವೆ.

ಸದ್ಯ ಬಾಬಾ ಸಾಹೇಬ್ ಅಂಬೇಡ್ಕರ್‌ರಂತಹ ಜ್ಞಾನದಲ್ಲಿ ಮನುವನ್ನೂ ಮೀರಿಸುವಂತಹ ಲೇಖಕರು ಬರದಿದ್ದರೆ ಇವೆಲ್ಲವೂ ಇನ್ನೂ ಸಹಸ್ರಮಾನಗಳ ಕಾಲ ಹೀಗೆಯೇ ಇರುತ್ತಿತ್ತೇನೋ. ಆದರೆ ತಮ್ಮ ಅವಿರತ ಹೋರಾಟದ ನಡುವೆಯೂ "Who were Shudras?", "The Untouchables", "Riddles in Hinduism" ಇಂತಹ ಮಹೋನ್ನತ ಸಂಶೋಧನಾತ್ಮಕ ಕೃತಿಗಳನ್ನು ಬರೆದ ಬಾಬಾಸಾಹೇಬ್ ಅಂಬೇಡ್ಕರ್‌ರ ಬರಹಗಳಿಂದಾಗಿ ಶತಮಾನಗಳ ಕಾಲ ಅಡಗಿದ್ದ ಇಂತಹ ಹುಳುಕಿನ ಬರಹಗಳು ಹೊರಬಂದವು. ಅಸಮಾನತೆಯನ್ನು ಸಾಮಾನ್ಯ ಜನರು ಕೂಡ ಪ್ರಶ್ನಿಸುವಂತಾಯಿತು. ಇಲ್ಲದಿದ್ದರೆ ಬೂಟಾಟಿಕೆಯ ಇಂತಹ ಬರಹಗಳೇ ನಿಜವೆಂಬ ನಂಬಿಕೆ ಮತ್ತಷ್ಟು ಹೆಚ್ಚಿ ಅಸಮಾನತೆ ಇನ್ನಷ್ಟು ಶಾಶ್ವತವಾಗುತ್ತಿತ್ತೇನೋ!
    

Writer - ರಘೋತ್ತಮ ಹೊ.ಬ., ಮೈಸೂರು

contributor

Editor - ರಘೋತ್ತಮ ಹೊ.ಬ., ಮೈಸೂರು

contributor

Similar News