ಸ್ವೆಟಾಸ್ಲಾವ್ ರೋರಿಕ್‌ರ ಕಲಾಕೃತಿಗಳು

Update: 2018-02-17 12:29 GMT

ಭಾಗ-2

ಜಗತ್ಪ್ರಸಿದ್ಧ ರಶ್ಯನ್ ಚಿತ್ರ ಕಲಾವಿದ ಸ್ವೆಟಾಸ್ಲಾವ್ ರೋರಿಕ್ ಕರ್ನಾಟಕದಲ್ಲಿ ಬದುಕಿ ಬಾಳಿದರು. ಅವರ ಹಿನ್ನೆಲೆ, ಕಲಾಜೀವನ ಮುಂತಾದ ವಿಚಾರಗಳನ್ನು ಪರಿಚಯಿಸುವ ಎಂ.ಎಸ್. ನಂಜುಂಡರಾವ್‌ರ ಲೇಖನ.

ಕಳೆದ ಸಂಚಿಕೆಯಿಂದ.....

1938 ರಿಂದ ಸುಮಾರು ಐದು ವರ್ಷಗಳ ಕಾಲ ತಮ್ಮ ತಂದೆವರ ಸಂಶೋಧನಾ ಕಾರ್ಯದಲ್ಲಿ ನೆರವಾಗಿ ಹಿಮಾಲಯ ಹಾಗೂ ಇತರ ಅಮೂಲ್ಯ ಕ್ಷೇತ್ರಗಳ ಔಷಧ ಮೂಲಿಕೆಗಳನ್ನು ಸಂಗ್ರಹಿಸಿ ಅದರ ಬಗ್ಗೆ ದೀರ್ಘವಾದ ವರದಿಯನ್ನು ಸಿದ್ಧಪಡಿಸಿ ವೈದ್ಯಕೀಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದರು.

ಸ್ವೆಟಾಸ್ಲಾವ್‌ರವರು ತಮ್ಮ ಸ್ನೇಹಪರತೆಯಿಂದ ಭಾರತದ ಅನೇಕ ಗಣ್ಯರ ನಿಕಟ ಬಾಂಧವ್ಯವನ್ನು ಗಳಿಸಿಕೊಂಡರು. ಇದರ ಪರಿಣಾಮವಾಗಿ 1945 ರಲ್ಲಿ ರಾಷ್ಟ್ರದ ಬೆಳ್ಳಿ ತೆರೆಯ ಪ್ರಥಮ ತಾರೆ ಶ್ರೀಮತಿ ದೇವಿಕಾ ರಾಣಿಯವರೊಡನೆ ವಿವಾಹ ನೆರವೇರಿತು. ಅದರಿಂದ ರೋರಿಕ್‌ರವರು ನಾಡಿನ ಸಾಂಸ್ಕೃತಿಕ ತಂತುವಿನೊಡನೆ ಹಾಗೂ ರಾಷ್ಟ್ರೀಯ ಭಾವನೆಗಳ ಮುಖ್ಯವಾಹಿನಿಯೊಡನೆ ಬೆರೆತುಕೊಂಡರು. 1946 ರಿಂದ 56ರವರೆಗೆ ಭಾರತದ ವಿವಿಧ ಭಾಗಗಳಿಗೆ ಅಧ್ಯಯನ ಭೇಟಿ ಇತ್ತು ಜನಜೀವನದ ಮುಖ್ಯ ಅಂಶಗಳನ್ನು ಹಾಗೂ ಸಾಂಸ್ಕೃತಿಕ ಪರಂಪರೆಯ ವಿವಿಧ ಮುಖಗಳನ್ನು ಪರಿಚಯಿಸಿಕೊಂಡರು.

ಈ ಸಮಯದಲ್ಲಿ ಅನೇಕ ರಾಷ್ಟ್ರ ನಾಯಕರ ಭಾವಚಿತ್ರಗಳನ್ನು ರಚಿಸಿದರು. ಪಂಡಿತ್ ನೆಹರೂರವರು ತಮ್ಮ ಕುಟುಂಬ ವರ್ಗದವರೊಡನೆ ಆಗಾಗ್ಗೆ ಕುಲು ಕಣಿವೆಗೆ ಭೇಟಿ ಕೊಡುತ್ತಿದ್ದರು. 1945ರಲ್ಲಿ ಅವರ ಭೇಟಿಯ ಸದುಪಯೋಗ ಪಡಿಸಿಕೊಂಡು ನೆಗರೂರವರ ಭಾವಚಿತ್ರಗಳನ್ನು ಅನೇಕ ಭಂಗಿಗಳಲ್ಲಿ ಸೆರೆಹಿಡಿದರು. ಅಲ್ಲದೆ ಬಿಕನೀರ್, ಪಾಟಿಯಾಲ, ದಿಕ್ಪತೀಯ ಮಹಾರಾಜ, ಜೇಮ್ಸ್ ಕಸಿನ್ಸ್ ಮತ್ತು ಪರ್ಸಿಬ್ರೌನ್‌ರವರ ಭಾವಚಿತ್ರಗಳನ್ನು ರಚಿಸಿ ಅವರ ಪ್ರಶಂಸೆಗೆ ಪಾತ್ರರಾದರು.

ಪಂಡಿತ್ ನೆಹರೂರವರ ಆಹ್ವಾನದ ಮೇಲೆ ದಿಲ್ಲಿಯಲ್ಲಿ 1960 ರಲ್ಲಿ ರೋರಿಕ್‌ರವರ ಕಲಾಕೃತಿಗಳ ಪ್ರದರ್ಶನ ಏರ್ಪಾಟಾಯಿತು. ಈ ಪ್ರದರ್ಶನವು ಅತ್ಯಂತ ಯಶಸ್ವಿಯಾಗಿ ನಡೆಯಿತು. ಅನೇಕ ರಾಷ್ಟ್ರ ನಾಯಕರು ಈ ಪ್ರದರ್ಶನವನ್ನು ವೀಕ್ಷಿಸಿದರು. ಈ ಪ್ರದರ್ಶನದಲ್ಲಿ ದೇವಿಕಾ ರಾಣಿಯವರ ವಿವಿಧ ಭಂಗಿಯ ಭಾವಚಿತ್ರಗಳು ಆಕರ್ಷಣೀಯ ಕೃತಿಗಳಾಗಿದ್ದವು. ನೃತ್ಯಗಾತಿ ರೋಷಣ್ ವಜಿಫ್‌ದಾರ್, ರಶ್ಯನ್ ಸಂಜಾತ ರೋಯ ಮಾಗ್ಡೊನೊವ, ಹಿಂದಿನ ಪಾಕಿಸ್ಥಾನದ ಆರ್ಥಿಕ ಸಚಿವರಾಗಿದ್ದ ಮಿ. ಆಸ್ಕಲ್ ಖಾದಿರಿಯವರ ಪತ್ನಿಯ ಭಾವಚಿತ್ರಗಳು ಅತ್ಯಂತ ಜನಪ್ರಿಯತೆ ಗಳಿಸಿದವು. ಆಗಿನ ರಾಷ್ಟ್ರಪತಿಗಳಾಗಿದ್ದ ಡಾ ರಾಧಾಕೃಷ್ಣನ್‌ರವರು ಅಖಿಲ ಭಾರತ ಕಲಾ ಮತ್ತು ಕುಶಲಕಲೆ ಸಂಘದ ಗ್ಯಾಲರಿಯಲ್ಲಿ ಜರುಗಿದ ರೋರಿಕ್‌ರವರ ಕಲಾ ಪ್ರದರ್ಶನಕ್ಕೆ ಭೇಟಿ ಇತ್ತು ತಮ್ಮ ಮುಕ್ತ ಪ್ರಶಂಸೆ ವ್ಯಕ್ತಪಡಿಸಿದರು. ನಂತರ ಈ ಪ್ರದರ್ಶನವನ್ನು ಆಗಿನ ರಶ್ಯಾದ ಪ್ರಧಾನಿಯವರ ಆಹ್ವಾನದ ಮೇಲೆ ಮಾಸ್ಕೊ ನಗರಕ್ಕೆ ಕೊಂಡೊಯ್ಯಲಾಯಿತು. ಇದರಿಂದ ರಶ್ಯಾ ಹಾಗೂ ಭಾರತದ ಬಾಂಧವ್ಯ ಸಾಂಸ್ಕೃತಿಕ ಕ್ಷೇತ್ರದ ಮೂಲಕ ಹೆಚ್ಚಿನ ರೀತಿಯಲ್ಲಿ ವೃದ್ಧಿಯಾಯಿತು. ಲೆನಿನ್‌ಗ್ರಾಡ್‌ನ ಹೆರ್ಮಿಟಾಜ್ ಮ್ಯೂಝಿಯಂ ರೋರಿಕ್‌ರವರ ಇಪ್ಪತ್ತು ಕೃತಿಗಳನ್ನು ಅಳವಡಿಸಿ ಮುಖ್ಯ ಪ್ರಕಟನೆಯನ್ನು ಹೊರತಂದಿತು. ಅಲ್ಲದೆ ಇದನ್ನು ಅನೇಕ ಭಾಷೆಗಳಿಗೆ ಭಾಷಾಂತರಿಸಿ ಪ್ರಕಟನೆಗೊಳಿಸಿದರು.

ಸ್ವೆಟಾಸ್ಲಾವ್ ಅವರ ಪ್ರತಿಭೆ ನಾನಾ ರೀತಿಯಲ್ಲಿದ್ದು ಅವರು ಆಗಾಗ್ಗೆ ಅದ್ವಿತೀಯವಾದ ತಾತ್ವಿಕ ಅಂಶಗಳನ್ನು ಕೃತಿಗಳಲ್ಲಿ ಅಳವಡಿಸಿದ್ದಾರೆ. ಅವರ ಕಥನ ಕತೆಗೆ Nearer to You ಮತ್ತು Mother Earth ಉತ್ತಮ ಚಿತ್ರಗಳಾಗಿವೆ ಹಾಗೂ ಅವರ ಕೆಲವು ಚಿತ್ರಗಳಲ್ಲಿ ನೈಜತೆ ಮತ್ತು ಶೃಂಗಾರಭರಿತವಾಗಿರುವುದನ್ನು ಕಾಣಬಹುದು. ಶಕ್ತಿಯುತ ಚಿಂತನ ಶೀಲತೆ ಸ್ಪಷ್ಟವಾಗಿದ್ದು, ನೈಜಸ್ವರೂಪವನ್ನು Patter’s House My Red San ಮತ್ತು Daughter of the Sea ಚಿತ್ರಗಳಲ್ಲಿ ಕಾಣಬಹುದು. ಹಿಮಾಲಯದ ಪ್ರಕೃತಿ ಚಿತ್ರಗಳಲ್ಲಿ ಹೊಳಪು ಬಣ್ಣಗಳು ಪ್ರಮುಖವಾಗಿದ್ದು, ವೈವಿಧ್ಯಮಯವಾಗಿ ನಿಲ್ಲುತ್ತವೆ.

1960 ರಿಂದ 71 ರವರೆಗೆ ರೋರಿಕ್ ದಂಪತಿ ಅನೇಕ ಬಾರಿ ರಶ್ಯಾ ಹಾಗೂ ಯೂರೋಪ್ ರಾಷ್ಟ್ರಗಳಲ್ಲಿ ಸಂಚರಿಸಿ ಅನೇಕ ಕಲಾ ಸಂಸ್ಥೆಗಳಲ್ಲಿ ತಮ್ಮ ಕಲಾ ಅಧ್ಯಯನದ ಬಗ್ಗೆ ಉಪನ್ಯಾಸಗಳನ್ನು ನೀಡಿ ಜನಪ್ರಿಯತೆಯನ್ನು ಗಳಿಸಿಕೊಂಡರು.

1974 ರಿಂದ 75ರವರೆಗೆ ರೋರಿಕ್‌ರವರ ಹಾಗೂ ಅವರ ತಂದೆಯವರ ಕಲಾಕೃತಿಗಳನ್ನು ಸೋವಿಯತ್ ದೇಶದ ಪ್ರಮುಖ ನಗರಗಳ ಕಲಾ ಭವನಗಳಲ್ಲಿ ಪ್ರದರ್ಶನಕ್ಕೆ ಏರ್ಪಾಟು ಮಾಡಿದ್ದರು. ಪ್ರದರ್ಶನಗಳನ್ನು ಸೋವಿಯತ್ ಜನತೆಯು ಸಾಲು ಸಾಲಾಗಿ ನಿಂತು ವೀಕ್ಷಿಸಿ ರೋರಿಕ್‌ರವರಿಗೆ ತಮ್ಮ ಗೌರವವನ್ನು ಅರ್ಪಿಸಿದರು. ಸ್ವೆಟಾಸ್ಲಾವ್‌ರವರಿಗೆ ರಾಷ್ಟ್ರದ ಪ್ರಮುಖ ಪ್ರಶಸ್ತಿಗಳನ್ನು ಕೊಟ್ಟು ಗೌರವಿಸಿ ವಿಜೃಂಭಣೆಯಿಂದ ದಂಪತಿಯನ್ನು ಸನ್ಮಾನಿಸಿದರು.

ಅನಾರೋಗ್ಯದಿಂದ ನರಳುತ್ತಿದ್ದ ರೋರಿಕ್‌ರವರ ಆರೋಗ್ಯ ಕ್ಷೀಣಿಸುತ್ತಾ ಬರುತ್ತಿತ್ತು. ಅವರ ದೇಹ ಚಿಕಿತ್ಸೆಗಳಿಗೆ ಅಷ್ಟಾಗಿ ಪ್ರತಿಕ್ರಿಯಿಸುತ್ತಿರಲಿಲ್ಲ. ಈ ಕಾರಣದಿಂದಾಗಿ ಡಾ. ಸ್ವೆಟಾಸ್ಲಾವ್ ರೋರಿಕ್ 1993ನೇ ಜನವರಿ 30 ರಂದು ನಿಧನರಾದರು. ವಿಶ್ವ ಕಲಾ ರಂಗದ ಮಹಾ ಶಕ್ತಿ ಅಸ್ತಂಗತವಾಯಿತು. ಫೆಬ್ರವರಿ ಎರಡರಂದು ಚಿತ್ರಕಲಾ ಪರಿಷತ್ತಿನ ಪ್ರಾಂಗಣದಲ್ಲಿ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ಇಡಲಾಗಿತ್ತು. ರಶ್ಯಾ ಹಾಗೂ ಭಾರತದ ಪ್ರತಿಷ್ಠಿತ ವ್ಯಕ್ತಿಗಳು ಅಪಾರ ನಾಗರಿಕರು ಅಭಿಮಾನಿಗಳು ರೋರಿಕ್‌ರವರಿಗೆ ತಮ್ಮ ಅಂತಿಮ ಗೌರವವನ್ನು ಅರ್ಪಿಸಿದರು. ತಾಟಗುಣಿ ಎಸ್ಟೇಟ್‌ನಲ್ಲಿ ಸಕಲ ಸರಕಾರಿ ಮರ್ಯಾದೆಯೊಡನೆ ಅವರ ಭೌತಿಕ ಶರೀರವನ್ನು ಸಮಾಧಿ ಮಾಡಲಾಯಿತು. ನಾಡಿನ ಬಹುತೇಕ ಪತ್ರಿಕೆಗಳು ಎಲ್ಲಾ ಪ್ರಚಾರ ಮಾಧ್ಯಮಗಳು ರೋರಿಕ್‌ರವರ ನಿಧನದ ವಾರ್ತೆಯನ್ನು ಸೂಕ್ತ ರೀತಿಯಲ್ಲಿ ಬಿತ್ತರಿಸಿದವು.

ಚಿತ್ರಕಲಾ ಪರಿಷತ್ತು ಸ್ಥಾಪಿಸಿದ ಕಲಾ ಶಾಲೆ ಕ್ರಮೇಣ ಕಲಾ ಕಾಲೇಜಾಗಿ ಬೆಂಗಳೂರು ವಿಶ್ವವಿದ್ಯಾನಿಲಯದ ಅಂಗೀಕಾರದೊಂದಿಗೆ ಬೆಳವಣಿಗೆ ಹೊಂದಿದೆ. ಈ ಕಾಲೇಜಿನ ಕಲಾ ಪಠ್ಯ ಕ್ರಮವನ್ನು ತಯಾರಿಸಲು ಪ್ರಥಮವಾಗಿ ಅಧ್ಯಯನ ಮಂಡಲಿಯ ಅಧ್ಯಕ್ಷರಾಗಿ ರೋರಿಕ್‌ರವರನ್ನು ವಿಶ್ವವಿದ್ಯಾನಿಲಯ ನೇಮಿಸಿತ್ತು. ಇದರ ಪರಿಣಾಮವಾಗಿ ಅವರ ಅಪಾರ ಅನುಭವದಿಂದ ಭಾರತದ ಪ್ರತಿಷ್ಠಿತ ಕಲಾ ಶಿಕ್ಷಣ ಕೇಂದ್ರವಾಗಿ ಚಿತ್ರಕಲಾ ಪರಿಷತ್ತಿನ ಕಾಲೇಜು ಮಾರ್ಪಟ್ಟಿತು.

ಹಿಂದೆ ಮೈಸೂರು ಶ್ರೀ ಚಾಮರಾಜೇಂದ್ರ ಟೆಕ್ನಿಕಲ್ ಇನ್‌ಸ್ಟಿಟ್ಯೂಟ್‌ನ ಕಲಾ ಶಿಕ್ಷಣ ಕ್ರಮವನ್ನು ಕಾಲೇಜಿನ ಮಟ್ಟಕ್ಕೇರಿಸಲು ಕರ್ನಾಟಕ ಸರಕಾರ ನೇಮಿಸಿದ್ದ ಸಮಿತಿಯ ಅಧ್ಯಕ್ಷರಾದ ಡಾ. ರೋರಿಕ್‌ರವರು ಉತ್ತಮ ವರದಿಯನ್ನು ಸಲ್ಲಿಸಿ ಅದನ್ನು ಇಂದಿನ ಕಾವಾ ಸಂಸ್ಥೆಯಾಗಿ ಮಾರ್ಪಾಟು ಆಗಲು ಕಾರಣರಾದರು.

ಡಾ. ರೋರಿಕ್‌ರವರ ಹಾಗೂ ಅವರ ತಂದೆಯವರ ಕಲಾಕೃತಿಗಳು ವಿಶ್ವದ ಅನೇಕ ಕಲಾ ಸಂಗ್ರಹಾಲಯಗಳಲ್ಲಿ ರಾರಾಜಿಸುತ್ತಿವೆ. ಇವರ ತಂದೆ ಪ್ರೊ. ನಿಕೋಲಾಸ್ ರೋರಿಕ್‌ರವರು ತಮ್ಮ ಜೀವಿತ ಕಾಲದಲ್ಲಿ ರಶ್ಯಾ ಭೂವಲಯದಿಂದ ಮಂಗೋಲಿಯಾ, ಟಿಬೆಟ್, ಚೀನಾ, ನೇಪಾಳ ಆಲ್ಟಾಯ್ ಹಿಮಾಲಯ ಪ್ರಾಂತ, ಇರಾನ್, ಅಫ್ಘಾನಿಸ್ತಾನ ಮತ್ತಿತರ ಏಶ್ಯಾದ ರಾಷ್ಟ್ರಗಳಲ್ಲಿ ದೀರ್ಘ ಸಂಚಾರ ಮಾಡಿ ಅಲ್ಲಿನ ಕಲೆ, ಸಂಸ್ಕೃತಿ ಇತಿಹಾಸ ಹಾಗೂ ನಿಸರ್ಗ ಸಂಪತ್ತಿನ ಬಗ್ಗೆ ಅಧ್ಯಯನ ಮಾಡಿದ್ದರು. ಮಂಗೋಲಿಯದ ನಿಗೂಢ ಶಂಬಾಲ ಕಣಿವೆಯನ್ನು ಹೊಕ್ಕು ಅಲ್ಲಿನ ಆಧ್ಯಾತ್ಮಿಕ ಮತ್ತು ಅತಿಮಾನವ ಸ್ಥಿತಿಯನ್ನು ಅಧ್ಯಯನ ಮಾಡಿ ವಾಪಸ್ ಬಂದು ವಿಶ್ವಕ್ಕೆ ಶಂಬಾಲದ ಕಣಿವೆಯ ಬಗ್ಗೆ ಪ್ರಥಮವಾಗಿ ಸಂದೇಶವನ್ನು ಕೊಟ್ಟರು. ಭಾರತಕ್ಕೆ ಬಂದ ನಂತರ 1930-35ರ ಅವಧಿಯಲ್ಲಿ ಅಗ್ನಿಯೋಗದ ಬಗ್ಗೆ ಗ್ರಂಥವನ್ನು ರಚಿಸಿ ವಿಶ್ವದ ಆಧ್ಯಾತ್ಮಿಕ ಕ್ಷೇತ್ರಕ್ಕೆ ಅದ್ವಿತೀಯ ಕೊಡುಗೆ ನೀಡಿದ ಮಹನೀಯರು. ಭಾರತದ ಹಿಮಾಲಯ ಪರ್ವತಗಳ ಶ್ರೀಮಂತಿಕೆಯನ್ನು ಮನನ ಮಾಡಿಕೊಂಡು ಪೂರ್ವ ಹಿಮಾಲಯದಿಂದ ಪಶ್ಚಿಮದ ಕಾಶ್ಮೀರಿ ಕಣಿವೆಯವರೆಗೆ ದೀರ್ಘ ಸಂಚಾರ ಮಾಡಿ ಸುಮಾರು ಎರಡು ಸಾವಿರ ಕಲಾಕೃತಿಗಳನ್ನು ರಚಿಸಿ ವಿಶ್ವದಾಖಲೆ ನಿರ್ಮಿಸಿದ ಮಹಾನ್ ಕಲಾವಿದರು. ನಿಕೋಲಾಸ್ ರೋರಿಕ್‌ರವರು ತಮ್ಮ ಜೀವಿತ ಕಾಲದಲ್ಲಿ ಸುಮಾರು 7,500 ಕಲಾ ಕೃತಿಗಳನ್ನು ರಚಿಸಿ ವಿಶ್ವದ ಕಲಾ ಪ್ರಪಂಚಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇಂತಹ ಮಹಾನ್ ವ್ಯಕ್ತಿಯ ಸುಪುತ್ರರಾಗಿ ಜನಿಸಿ ಡಾ. ಸ್ವೆಟಾಸ್ಲಾವ್ ರೋರಿಕ್‌ರವರು ವಿಶ್ವದ ಕಲಾಕ್ಷೇತ್ರದಲ್ಲಿ ಮೆರೆದಿದ್ದಾರೆ. ರಶ್ಯಾ ಹಾಗೂ ಕರ್ನಾಟಕದ ಸಾಂಸ್ಕೃತಿಕ ಕ್ಷೇತ್ರದಲ್ಲಿ ತಮ್ಮ ಶಾಶ್ವತ ಅಚ್ಚನ್ನು ಒತ್ತಿದ್ದಾರೆ.

ನಿಕೋಲಾಸ್ ರೋರಿಕ್‌ರವರು ತಮ್ಮ ಜೀವಿತ ಕಾಲದಲ್ಲಿ ಸುಮಾರು 7,500 ಕಲಾ ಕೃತಿಗಳನ್ನು ರಚಿಸಿ ವಿಶ್ವದ ಕಲಾ ಪ್ರಪಂಚಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇಂತಹ ಮಹಾನ್ ವ್ಯಕ್ತಿಯ ಸುಪುತ್ರರಾಗಿ ಜನಿಸಿ ಡಾ. ಸ್ವೆಟಾಸ್ಲಾವ್ ರೋರಿಕ್‌ರವರು ವಿಶ್ವದ ಕಲಾಕ್ಷೇತ್ರದಲ್ಲಿ ಮೆರೆದಿದ್ದಾರೆ. ರಶ್ಯಾ ಹಾಗೂ ಕರ್ನಾಟಕದ ಸಾಂಸ್ಕೃತಿಕ ಕ್ಷೇತ್ರದಲ್ಲಿ ತಮ್ಮ ಶಾಶ್ವತ ಅಚ್ಚನ್ನು ಒತ್ತಿದ್ದಾರೆ.

Writer - ಎಂ.ಎಸ್. ನಂಜುಂಡರಾವ್

contributor

Editor - ಎಂ.ಎಸ್. ನಂಜುಂಡರಾವ್

contributor

Similar News