ಶಹಜಹಾನ್-ಜಗನ್ನಾಥ ಪಂಡಿತರ ಸುತ್ತ ಒಂದು ನಾಟಕ “ರಸಗಂಗಾಧರ”

Update: 2018-02-18 10:52 GMT

ವಿಕ್ರಮ ವಿಸಾಜಿಯವರ ಮೊದಲ ನಾಟಕ ಇದು. ಕವಿ ವಿಮರ್ಶಕರಾಗಿ ಗುರುತಿಸಿಕೊಂಡಿರುವ ಇವರು ನಾಟಕ ಕ್ಷೇತ್ರಕ್ಕೂ ಕೈಹಾಕಿದ್ದಾರೆ. ರಸಗಂಗಾಧರ ನಾಟಕ ಮೊಗಲ್ ಕಾಲ ಘಟ್ಟದ್ದು . ಈಗ ಎಲ್ಲರನ್ನೂ ಒಂದಲ್ಲ ಒಂದು ಕಾರಣ ನೀಡಿ ದೇಶದ್ರೋಹದ ಹೆಸರಿನೊಳಗೆ ಕಟಕಟೆಯಲ್ಲಿ ನಿಲ್ಲಿಸುವ ಕಾಲ ಬಂದಿದೆ. - ಈ ನಾಟಕದ ಸಾಲಿದು. ವರ್ತಮಾನಕ್ಕೆ ಕನ್ನಡಿ ಹಿಡಿದಂತಿದೆ. ರಸಗಂಗಾಧರ ನಾಟಕದ ಕಾಲಘಟ್ಟ ಮೊಗಲ್ ಆಳ್ವಿಕೆಯ ಕಾಲದ್ದು. ಜಗನ್ನಾಥ ಪಂಡಿತ ಈ ನಾಟಕದ ಮುಖ್ಯ ಪಾತ್ರ. ಆತನ ಕೃತಿಯೊಂದರ ಹೆಸರನ್ನೇ ನಾಟಕಕಾರರು ಶೀರ್ಷಿಕೆಯಾಗಿ ತೆಗೆದು ಕೊಂಡಿದ್ದಾರೆ. ಈತನ ಕಾಲ 17ನೇ ಶತಮಾನ. ಆಂಧ್ರಪ್ರದೇಶದ ಗೋದಾವರಿ ನದಿ ತೀರದ ಮುನಿಖಂಡ ಅಗ್ರಹಾರದವನು. ಇವನ ವಿದ್ವತ್ತು, ಕಾವ್ಯವನ್ನು ಮೆಚ್ಚಿಕೊಂಡ ದಿಲ್ಲಿಯ ಮೊಗಲ್ ದೊರೆಗಳು ಈತನನ್ನು ಆಸ್ಥಾನದ ವಿದ್ವಾಂಸನ್ನಾಗಿ ನೇಮಕ ಮಾಡಿಕೊಂಡರು. ಆ ಸಮಯದಲ್ಲಿ ಷಹಹಜಾನ್ ಅಧಿಕಾರದಲ್ಲಿದ್ದ. ಕಾವ್ಯವೆಂದರೆ ಉತ್ಕಟವಾಗಿ ಪ್ರೀತಿಸುವ ವ್ಯಕ್ತಿ ಈತ. ಇತನಿಗೂ ಜಗನ್ನಾಥ ಪಂಡಿತನಿಗೂ ಒಳ್ಳೆಯ ಗೆಳೆತನ ಬೆಳೆಯಿತು. ಷಹಜಹಾನನ ಮಗ ದಾರಾಷಿಕೊ ಮತ್ತು ಲಾವಂಗಿ ವಿಶಿಷ್ಟ ವ್ಯಕ್ತಿತ್ವದವರು. ದಾರಾಷಿಕೊ ದಿಲ್ಲಿಯ ಬೀದಿ ಬೀದಿಗಳಲ್ಲಿ ಸೂಫಿ ಸಂತರ ಜೊತೆ ಹರಟೆ ಹೊಡೆಯುತ್ತ ಕೊಳಕು ಬಟ್ಟೆ ಉಟ್ಟು ತಿರುಗುತ್ತಿದ್ದ. ಲಾವಂಗಿ ದಾರಾಷಿಕೊ ಮತ್ತು ಜಗನ್ಮಾಥ ಪಂಡಿತರ ಚರ್ಚೆಗಳಿಂದ ಪ್ರಭಾವಿತಳಾಗಿ ಕಾವ್ಯದ ಹಿಂದೆ ಬಿದ್ದಳು. ಮುಂದೆ ಜಗನ್ನಾಥ ಪಂಡಿತ ಮತ್ತು ಲಾವಂಗಿ ಮಧ್ಯೆ ಪ್ರೇಮ ಚಿಗುರೊಡೆಯುತ್ತದೆ. ಷಹಜಹಾನ್ ತನ್ನ ಮಗ ದಾರಷಿಕೊನ ಚಿಂತೆಯಲ್ಲಿದ್ದಾನೆ. ಇಲ್ಲಿಂದ ನಾಟಕ ಶುರುವಾಗುತ್ತದೆ.

ಪ್ರೇಮವು ಕೂಡ ವ್ಯವಸ್ಥೆಯನ್ನು ಪ್ರಶ್ನಿಸುತ್ತದೆಯೆಂಬುದು ನಾಟಕದಲ್ಲಿ ನಿರೂಪಿಸಲಾಗಿದೆ. ಲಾವಂಗಿ ಮತ್ತು ಜಗನ್ನಾಥ ಪಂಡಿತರ ಪ್ರೇಮದ ವಾಸನೆ ಷಹಜಹಾನಗೆ ಬಡಿಯುತ್ತಿದಂತೆಯೆ ಆತ ಹೇಳುತ್ತಾನೆ. ಪ್ರೇಮದ ಬಳ್ಳಿ ಎಷ್ಟು ಅಪಾಯಕಾರಿ ಅನ್ನೋದು ನನಗೆ ಗೊತ್ತು. ಅದಕ್ಕೆ ಕಾವ್ಯದ ಒಡನಾಟವಿದ್ದರಂತೂ ಮುಗಿದೇ ಹೋಯಿತು. ಅಲ್ಲಿಯೆ ಷಹಜಹಾನನ ಜೊತೆ ಚರ್ಚಿಸುತ್ತಿದ್ದ ಅಬ್ದುಲ್ ಹಮೀದ್ ಲಾಹೋರಿ ಹೇಳುತ್ತಾನೆ : ಜೀವನದಲ್ಲಿ ಅತ್ಯಂತ ಮೂರ್ಖ ಕೆಲಸ ಅಂದ್ರೆ ಪ್ರೇಮಿಗಳಿಗೆ ಸಲಹೆ ನೀಡುವುದು. ಇವರಿಬ್ಬರ ನಿಲುವುಗಳು ಜಗನ್ನಾಥ ಪಂಡಿತನ ಪ್ರಾಮಾಣಿಕ ಪ್ರೀತಿಯನ್ನು ತಪ್ಪೆಂದು ಹೇಳುತ್ತವೆ. ಮುಂದೆ ವಿಚಾರಣೆ ನಡೆಯುವಾಗ ಲಾವಂಗಿಯನ್ನು ಪ್ರೀತಿಸಿದ್ದು ತಪ್ಪು ಎಂದಾದರೆ ಹೌದು ...ನಾನು ತಪ್ಪು ಮಾಡಿರುವೆಯೆಂದು ಪಂಡಿತ ಹೇಳುತ್ತಾನೆ. ಈ ಇಡೀ ಚಿತ್ರಣ ನೋಡಿದಾಗಲೆ ನಮಗೆ ನಾಟಕದ ಬಗ್ಗೆ ಸ್ಪಷ್ಟ ರೂಪ ಮೂಡಲು ಅನುಕೂಲ. ನೀವು ನೇಣುಗಂಬಕ್ಕೇರಿಸಿದರೂ ನನಗೆ ಬೇಸರವಿಲ್ಲ ಯಾರಿಗೆ ಗೊತ್ತು ಮುಂದೊಂದು ದಿನ ಈ ನೇಣುಗಂಭದಲ್ಲೂ ಹಸಿರೆಲೆ ಚಿಗುರಬಹುದು- ಜಗನ್ನಾಥ ಪಂಡಿತನೆದೆಯಲ್ಲಿರುವ ಉತ್ಕಟ ಪ್ರೀತಿಯ ಬೆಳಕಿನ ಮಾತುಗಳಿವು. ಪ್ರೀತಿ ಒಂದು ಬೆಳಕು ಮತ್ತು ಕ್ರಾಂತಿ. ದಾರಾಷಿಕೊ ಮಂಜು ಮತ್ತು ಬೆಂಕಿ ಕಲಸಿದಂತೆ ಎನ್ನುವ ಲಾವಂಗಿ. ಪ್ರಭುತ್ವ ಧಿಕ್ಕರಿಸಿ ಬೀದಿಗೆ ಬಂದಿರುವ ಅವನನ್ನು ಪ್ರೀತಿಸುತ್ತಾಳೆ. ಅವನೆಂದೂ ಅಧಿಕಾರಕ್ಕೆ ಆಸೆಪಟ್ಟವನಲ್ಲ. ದಿಲ್ಲಿಯ ಬೀದಿಗಳೇ ಅವನ ದರಬಾರುಗಳು. ಕುಡುಕರೇ ಅವನ ಶ್ರೋತೃಗಳು. ಸಮುದ್ರ ಮೊರೆತ, ಕತ್ತಲಿನ ನಿಗೂಢ ಚೆಲುವು, ದರವೇಶಿಗಳೇ ಅವನ ಸಂಗಾತಿಗಳು. ಅವನು ದಿಲ್ಲಿಯ ಪಕೀರರ ನಿಜವಾದ ಅರಸ. ಮೊಗಲ್ ಸಾಮ್ರಾಜ್ಯದ ಎಲ್ಲ ಹುಚ್ಚಾಟಗಳ ನಿಜ ವಾರಸುದಾರ. ಭವಿಷ್ಯದ ಕನಸು... ಔರಂಗಜೇಬನೆದುರು ದಾರಷಿಕೊನ ಬಗ್ಗೆ ಹೀಗೆ ಮಾತಾಡುವ ಲಾವಂಗಿಗೆ ಅವಳ ಪ್ರೀತಿಯೇ ಈ ಧೈರ್ಯ ಕೊಟ್ಟದ್ದು. ಒಂದು ಮಾತಿಗೆ ಒಂದೇ ಅರ್ಥವಿರಬೇಕೆನ್ನುವ ಮತ್ತು ವೈವಿಧ್ಯವನ್ನು ಒಪ್ಪದ ಔರಂಗಜೇಬನಂತಹ ಮನಸುಗಳು ಈಗಲೂ ಇವೆ. ದಾರಾಷಿಕೊನಂತಹವರು ಆಗಲೂ ಸತ್ತರೂ, ಈಗಲೂ ಸಾಯುತ್ತಿದ್ದಾರೆ..... ರೂಪ ಮಾತ್ರ ಬೇರೆ. ಎಚ್ ಎಸ್ ಶಿವಪ್ರಕಾಶರು ಈ ನಾಟಕದ ಕುರಿತು ಬರೆಯುತ್ತ ಸಾಹಿತ್ಯ ಮತ್ತು ಸಾಂಸ್ಕೃತಿಕ ಸನ್ನಿವೇಶಗಳನ್ನು ಅಚ್ಚರಿಯಾಗುವ ಹಾಗೆ ಅಪರೂಪದ ಕ್ರಮಗಳಿಂದ ಒಳಗಿಳಿಸಿಕೊಂಡಿದೆಯೆಂಬ ಮಾತು ನನ್ನೊಳಗೆ ಬೆರಗು ತುಂಬಿತ್ತು. ಈ ನಾಟಕದುದ್ದಕ್ಕೂ ವಿಸಾಜಿಯವರ ಕಾವ್ಯ ಕುಣಿದಾಡುತ್ತದೆ. ಈ ಸಾಂಸ್ಕೃತಿಕ ಸನ್ನಿವೇಶಗಳನ್ನು ಈ ಕಾಲಘಟ್ಟದೊಂದಿಗೆ ಸಂವಾದಕ್ಕಿಳಿಸುವ ಕೆಲಸ ಸವಾಲಿನದ್ದೇ ಸರಿ. ಈ ಕೆಲಸವನ್ನು ವಿಸಾಜಿ ಯಶಸ್ವಿಯಾಗಿ ಮಾಡಿದ್ದಾರೆ. ಆ ಕಾಲದ ಹೆಣ್ಣಿನ ಪರಿಸ್ಥಿತಿಗಳಿಗೂ ಈ ಕಾಲದ ಹೆಣ್ಣು ಮಕ್ಕಳ ಸ್ಥಿತಿಗೂ ಅಷ್ಟೇನೂ ವ್ಯತ್ಯಾಸವಿಲ್ಲ. ಮೊಂಬತ್ತಿಯ ಬೆಳಕಿನಲಿ ಸಾಕಾಗಿದೆ ಬದುಕು ಮೂಡಣದ ಮೊಗ್ಗಿನ ಕಿರಣಗಳು ಮೈಯ್ಗೆ ಹಾಯಿಸಿರೆ, ದೊರೆಯ ಮಾತನು ಆಲಿಸಿ ಕಿಲುಬುಗಟ್ಟಿದೆ ಹೃದಯ ಮೈಮುರಿದು ದುಡಿವ ಹೆಂಗಸರ ಕುರಿತು ಹೇಳಿರೆ- ಲಾವಂಗಿ ಕೈಯಲ್ಲಿ ಕಂದೀಲು ಹಿಡಿದು ಯಮುನೆ ನದಿಯೊಂದಿಗೆ ಮಾತಿಗಿಳಿದಿದ್ದಾಳೆ, ಉಕ್ಕುತ ಹರಿಯುವ ನದಿಯು ಅವಳ ಮಾತು ಕೇಳಿಸಿಕೊಳ್ಳಲಾರದು. ಈ ಸಾಲುಗಳಲ್ಲಿ ಅವಳು ಬಯಸುತ್ತಿರುವ ಬಿಡುಗಡೆಯಿದೆ. ಜಗನ್ನಾಥ ಪಂಡಿತ ಗಡಿಪಾರು ಆಗುತ್ತಾನೆ. ಕೆಲವು ದಿನಗಳ ನಂತರ ಅವನ ಹೆಣ ನದಿಯಲ್ಲಿ ತೇಲುತ್ತಿರುತ್ತದೆ. ಮುಂದೆ ಅವನ ಕೃತಿಯೊಂದನ್ನು ಲಾವಂಗಿ ಪೂರ್ಣಗೊಳಿಸಿದ್ದಕ್ಕಾಗಿ ಅವಳ ಕೋಣೆಯ ಎಲ್ಲಾ ಹೊತ್ತಿಗೆಗಳು ಪರೀಕ್ಷಿಸಲ್ಪಡುತ್ತವೆ. ಅಪೂರ್ಣಕೃತಿಯನ್ನು ಲಾವಂಗಿ ಪೂರ್ಣಗೊಳಿಸುವುದು ಮತೀಯವಾದಿಗಳ ಗುಂಡಿಗೆಯನ್ನು ಛಿದ್ರಗೊಳಿಸುವ ಪ್ರಳಯ ರೂಪವೇ ಆಗಿ ಕಾಣುವುದು ಎಂದು ವಿ. ಎಂ. ಮಂಜುನಾಥರು ಹೇಳುತ್ತಾರೆ.

ಒಟ್ಟು ಹತ್ತು ದೃಶ್ಯಗಳನ್ನು ಹೊಂದಿರುವ ಈ ನಾಟಕ ಕೇವಲ ಈ ರೀತಿಯ ಬಿಕ್ಕಟ್ಟುಗಳಿಗೆ ಸ್ಪಂದಿಸುವ ನಾಟಕ ಮಾತ್ರ ಆಗಿರದೆ. ಬದುಕಿನ ಬಗ್ಗೆಯೂ ಈ ಕೃತಿ ಮಾತಾಡುತ್ತದೆ. ಕಾವ್ಯ, ಇತಿಹಾಸ, ಪ್ರಭುತ್ವ, ಪ್ರೇಮ, ಸಾವು, ದಾರಾಷಿಕೊನಂತಹ ಸಂತ, ಹರಿಯುವ ನದಿ ಎಲ್ಲದರ ಬಗ್ಗೆಯೂ ಈ ಕೃತಿ ಮಾತಾಡುತ್ತದೆ. ಕೊನೆಗನಿಸುವುದಿಷ್ಟೆ. ಜಗನ್ನಾಥ ಪಂಡಿತನ ಆತ್ಮಹತ್ಯೆ ಇದೆಯಲ್ಲ ಇದು ಬಸವಣ್ಣನವರನ್ನೇ ನೆನಪಿಸಿ ಬಿಡುತ್ತದೆ. ಇವರದು ಕೊಲೆಯೋ? ಆತ್ಮಹತ್ಯೆಯೊ?.

ರಸಗಂಗಾಧರ ನಾಟಕ ಪ್ರತೀ ಪುಟದಲ್ಲಿಯು ಪ್ರೇಮದ ವಾಸನೆಯಿದೆ. ಪ್ರತೀ ಕಾಗದದಂಚಿಗೂ ಪ್ರೇಮಿಗಳಿಬ್ಬರ ಮಧ್ಯೆ ಏರಿಳಿಯುವ ಉಸಿರಿನ ಭಯದಲ್ಲಿ ಸರಿದಾಡುವ ಕತ್ತಿಯೊಂದಿದೆ, ಸಾವು ಗುಲಾಬಿ ಹೂವಿನ ಮಧ್ಯೆ ಸಾಯುವ ದುಂಬಿಯನ್ನು ನೋಡುತ್ತಿದೆ...

ವಿಕ್ರಮ ವಿಸಾಜಿ

Writer - ಕಪಿಲ ಪಿ. ಹುಮನಾಬಾದ್

contributor

Editor - ಕಪಿಲ ಪಿ. ಹುಮನಾಬಾದ್

contributor

Similar News