ಕೋಮುವಾದಿಗಳಿಂದಾಗಿ ಕಲಬುರ್ಗಿ, ಗೌರಿ ಲಂಕೇಶ್‌ರನ್ನು ಕಳೆದುಕೊಂಡಿದ್ದೇವೆ: ಪ್ರಕಾಶ್ ರೈ

Update: 2018-02-17 13:01 GMT

ಬೆಂಗಳೂರು, ಫೆ.17: ದೇಶದಲ್ಲಿ ಕೋಮುವಾದ ಮಿತಿಮೀರಿ ಬೆಳೆಯುತ್ತಿದೆ. ಕೋಮುವಾದಿಗಳಿಂದ ಮಾನವೀಯತೆಗಾಗಿ ಹೋರಾಡುತ್ತಿದ್ದ ಸಂಶೋಧಕ ಎಂ.ಎಂ.ಕಲಬುರ್ಗಿ, ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ರನ್ನು ಕಳೆದುಕೊಂಡಿದ್ದೇವೆ. ಇನ್ನು ಮುಂದೆ ನಾವು ಯಾರನ್ನೂ ಕಳೆದುಕೊಳ್ಳಬಾರದು. ಈ ನಿಟ್ಟಿನಲ್ಲಿ ಯುವ ಜನತೆ ಕೋಮುವಾದಿಗಳ ವಿರುದ್ಧ ಒಗ್ಗಟ್ಟಾಗಿ ಹೋರಾಟ ಮಾಡಬೇಕಾಗಿದೆ ಎಂದು ಪ್ರಕಾಶ್ ರೈ ಹೇಳಿದರು.

ಶನಿವಾರ ಭಾರತ ವಿದ್ಯಾರ್ಥಿ ಫೆಡರೇಷನ್ ನಗರದ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಆವರಣದಲ್ಲಿ ಕೋಮುವಾದದ ವಿರುದ್ಧ ರಾಷ್ಟ್ರವ್ಯಾಪಿ ಪ್ರಚಾರಾಂದೋಲನದ ಭಾಗವಾಗಿ ಆಯೋಜಿಸಿದ್ದ ಶಾಂತಿಯ ಧ್ವನಿ ರಾಷ್ಟ್ರೀಯ ಸಮಾವೇಶದಲ್ಲಿ ಅವರು ಮಾತನಾಡಿದರು. ಪ್ರಶ್ನೆ ಮಾಡುವುದು, ಪ್ರಜಾಪ್ರಭುತ್ವವನ್ನು ಉಳಿಸುವುದು ನಮ್ಮ ಸಂವಿಧಾನ ನೀಡಿರುವ ಮೂಲಭೂತ ಹಕ್ಕಾಗಿದೆ. ಇದಕ್ಕಾಗಿ ಯಾರಿಗೂ ತಲೆ ಬಾಗುವ ಅಗತ್ಯವಿಲ್ಲ. ಪಟ್ಟಭದ್ರರ ಜನವಿರೋಧಿ ನೀತಿಗಳನ್ನು ಪ್ರಶ್ನೆ ಮಾಡುವ ಮೂಲಕ ದೇಶವನ್ನು ಸುಭದ್ರವಾಗಿ ಕಟ್ಟಬೇಕಾಗಿದೆ ಎಂದು ಹೇಳಿದರು. 

ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾ.ಗೋಪಾಲಗೌಡ, ಭಾರತಕ್ಕೆ 5 ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ಇಲ್ಲಿ ನೂರಾರು ಜಾತಿ, ಹತ್ತಾರು ಧರ್ಮಗಳಿದ್ದರೂ ಸೌಹಾರ್ದತೆಯಿಂದ ಜೀವನ ಸಾಗಿಸುತ್ತಾ ಬರಲಾಗಿದೆ. ಇಂತಹ ಅಪರೂಪವಾದ ಬಹುಸಂಸ್ಕೃತಿಯ ಘನತೆಯನ್ನು ಸಂವಿಧಾನದ ಆಶಯಗಳು ಎತ್ತಿ ಹಿಡಿದಿವೆ. ಆದರೆ, ಕೆಲವು ಕೋಮುವಾದಿಗಳು ಸಂವಿಧಾನದ ಮೂಲ ಆಶಯಗಳನ್ನು ಬದಲಾಯಿಸುವ ನಿಟ್ಟಿನಲ್ಲಿ ಮಾತನಾಡುತ್ತಿದ್ದಾರೆ. ಇದು ಯಾವ ಕಾರಣಕ್ಕೂ ಸಾಧ್ಯವಿಲ್ಲ. ಸಂವಿಧಾನದ ಮೂಲ ಆಶಯಗಳನ್ನು ತಿದ್ದುಪಡಿ ಮಾಡುವಂತಹ ಅಧಿಕಾರ ಸಂಸತ್‌ಗೂ ಇಲ್ಲವೆಂದು ಹೇಳಿದರು.

ಶಿಕ್ಷಣವೆಂದರೆ ಪಠ್ಯವಲ್ಲ: ಶಿಕ್ಷಣವೆಂದರೆ ಪಠ್ಯವನ್ನು ಓದುವುದು, ಪರೀಕ್ಷೆಯಲ್ಲಿ ರ್ಯಾಂಕ್ ಪಡೆಯುವುದು ಮಾತ್ರವಲ್ಲ. ನಮ್ಮ ಬದುಕಿಗೆ ಬೇಕಾದ ಮೌಲ್ಯಗಳನ್ನು ರೂಢಿಸಿಕೊಳ್ಳುವುದು. ನಮ್ಮ ಸುತ್ತಮುತ್ತಲಿನಲ್ಲಿ ನಡೆಯುತ್ತಿರುವ ಆಗುಹೋಗುಗಳ ಕುರಿತು ಸೂಕ್ಷ್ಮವಾಗಿ ಅವಲೋಕಿಸುವುದು ಹಾಗೂ ರಾಜಕೀಯ ವಿದ್ಯಾಮಾನಗಳ ಕುರಿತು ಚಿಂತಿಸಿ, ಅಗತ್ಯ ಸಮಯದಲ್ಲಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುವುದೇ ಆಗಿದೆ ಎಂದು ಅವರು ಹೇಳಿದರು.

ಎಸ್‌ಎಫ್‌ಐ ರಾಷ್ಟ್ರಾಧ್ಯಕ್ಷ ವಿ.ಪಿ.ಸಾನು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಚುನಾವಣೆಗೂ ಮುನ್ನ ಒಂದು ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇವೆಂದು ಭರವಸೆ ನೀಡಿ ಅಧಿಕಾರಕ್ಕೆ ಬಂತು. ಆದರೆ, ಅವರ ಅಧಿಕಾರದ ಅವಧಿಯಲ್ಲಿ ಇರುವ ಕೆಲಸಗಳು ಕಡಿತಗೊಳ್ಳುತ್ತಿವೆ ಎಂದು ಕಿಡಿಕಾರಿದರು.

ಕಾರ್ಯಕ್ರಮದಲ್ಲಿ ಎಸ್‌ಎಫ್‌ಐ ರಾಷ್ಟ್ರೀಯ ಕಾರ್ಯದರ್ಶಿ ವಿಕ್ರಂ ಸಿಂಗ್, ಜೆಎನ್‌ಯು ವಿದ್ಯಾರ್ಥಿ ನಿತೀಶ್ ನಾರಾಯಣ್, ಎಸ್‌ಎಫ್‌ಐ ರಾಜ್ಯಾಧ್ಯಕ್ಷ ಅಂಬರೀಶ್, ಪ್ರಧಾನ ಕಾರ್ಯದರ್ಶಿ ಗುರುರಾಜ್ ದೇಸಾಯಿ ಮತ್ತಿತರರಿದ್ದರು.

ನಾನು ಬಾಲ್ಯದಲ್ಲಿರುವಾಗ, ಸಿನಿಮಾ ಕ್ಷೇತ್ರದಲ್ಲಿರುವಾಗ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳಿಸಿದಾಗ ನನ್ನ ಜಾತಿ ಯಾವುದೆಂದು ಕೇಳಲಿಲ್ಲ. ಆದರೆ, ದೇಶದಲ್ಲಿ ನಡೆಯುತ್ತಿರುವ ಕೋಮುವಾದ, ಗೋಹತ್ಯೆ ಹಾಗೂ ಭ್ರಷ್ಟಾಚಾರದ ವಿರುದ್ಧ ಮಾತನಾಡಿದಾಗ ನನ್ನ ತಾಯಿ, ಅಪ್ಪನ ಜಾತಿ, ಧರ್ಮದ ಕುರಿತು ಮಾತನಾಡಲು ಶುರು ಮಾಡಿದರು. ಇದು ನನಗೆ ಅತೀವ ನೋವು ತರಿಸಿದೆ. ಅಲ್ಲಿಂದ ಕೋಮುವಾದದ ವಿರುದ್ಧ ನನ್ನ ಹೋರಾಟ ನಿರಂತರವಾಗಿದೆ.
-ಪ್ರಕಾಶ್ ರೈ ನಟ, ಹೋರಾಟಗಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News