ಬೆಂಗಳೂರು ನಗರ ಸುತ್ತಲು ಸೈಕಲ್: 13 ಸ್ಥಳಗಳಲ್ಲಿ ಬೈಸಿಕಲ್ ಸೇವೆ ಆರಂಭ

Update: 2018-02-17 14:36 GMT

ಬೆಂಗಳೂರು, ಫೆ.17: ಸೈಕಲ್ ಮೂಲಕ ಬೆಂಗಳೂರು ನಗರ ಸುತ್ತುವ ಯೋಜನೆ ಹಾಗೂ ಬೈಸಿಕಲ್ ನಿಲ್ದಾಣಗಳಿಗೆ ಸಂಜಯನಗರದಲ್ಲಿ ಸೈಕಲ್ ಚಾಲನೆ ಮಾಡುವ ಮೂಲಕ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಚಾಲನೆ ನೀಡಿದರು.

ಬಳಿಕ ಅವರು ಮಾತನಾಡಿ, ಈ ಮೊದಲು ಮೈಸೂರಿನಲ್ಲಿ ಈ ರೀತಿ ಯೋಜನೆ ಜಾರಿಗೊಳಿಸಲಾಗಿತ್ತು. ಇದೀಗ ಬೆಂಗಳೂರಿನ ಎಲ್ಲ ಕಡೆಗಳಲ್ಲೂ ಮಾಡಲಾಗುತ್ತಿದೆ. ಇದೊಂದು ಒಳ್ಳೆಯ ಯೋಜನೆಯಾಗಿದ್ದು, 40 ಕಡೆಗಳಲ್ಲಿ ಆರಂಭ ಮಾಡಲಾಗುವುದು. ಇದಕ್ಕೆ ಬಿಬಿಎಂಪಿ ಹಣ ನೀಡಲ್ಲ, ಕೇವಲ ಜಾಗ ಮಾತ್ರ ನೀಡಲಿದೆ. ಸ್ಥಳೀಯರು ಹಾಗೂ ಕೆಲ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಯೋಜನೆ ಜಾರಿಯಾಗಿದ್ದು, ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.

ಮೊದಲ ಹಂತವಾಗಿ ಬಿಬಿಎಂಪಿ ಸಂಜಯನಗರದ 13 ಸ್ಥಳಗಳಲ್ಲಿ ಬೈಸಿಕಲ್ ಸೇವೆ ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ನಗರದ ಹಲವೆಡೆ ಈ ಯೋಜನೆ ವಿಸ್ತರಣೆಯಾಗಲಿದೆ. ಬಿಬಿಎಂಪಿ ಸಹಯೋಗದೊಂದಿಗೆ ಪೆಡಲ್ ಸಂಸ್ಥೆ ಈ ಯೋಜನೆ ಆರಂಭಿಸಿದೆ. ಸಾರ್ವಜನಿಕರು ಆ್ಯಪ್ ಇನ್ಸ್ಟಾಲ್ ಮಾಡಿಕೊಂಡು ಈ ಬೈಸಿಕಲ್ ಬಳಸಬಹುದಾಗಿದೆ. ಇದರಿಂದ ಸೈಕಲ್ ಮೂಲಕ ಸಿಟಿ ಸುತ್ತಲು ಹಾಗೂ ಮಾಲಿನ್ಯ ಕಡಿಮೆ ಮಾಡಲು ನೆರವಾಗಲಿದೆ. ಒಂದು ಗಂಟೆಗೆ 2 ರೂ. ಬಾಡಿಗೆ ನಿಗದಿ ಪಡಿಸಲಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News