ಇಂಗ್ಲೀಷ್ ವ್ಯಾಮೋಹ ಸೃಜನಶೀಲತೆಗೆ ಅಡ್ಡಿ: ಎಸ್.ಜಿ.ಸಿದ್ಧರಾಮಯ್ಯ

Update: 2018-02-17 14:51 GMT

ಬೆಂಗಳೂರು, ಫೆ.17: ಪೋಷಕರಲ್ಲಿನ ಇಂಗ್ಲೀಷ್ ವ್ಯಾಮೋಹದಿಂದ ಮಕ್ಕಳ ಸೃಜನಶೀಲತೆಗೆ ಪೆಟ್ಟು ಬೀಳುತ್ತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ಧರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.

ಶನಿವಾರ ನಗರದ ಜಿಕೆವಿಕೆ ಆವರಣದ ಡಾ.ಬಾಬು ರಾಜೇಂದ್ರ ಪ್ರಸಾದ್ ಸಭಾಂಗಣದಲ್ಲಿ ಆಯೋಜಿಸಿದ್ದ ಕನ್ನಡ ಭಾಷಾ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಮಕ್ಕಳು ಸಹಜವಾಗಿ ಬೆಳೆಯುವುದಕ್ಕೆ ಪೋಷಕರು ಅಡ್ಡಿಪಡಿಸುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ವಿಷಾದಿಸಿದರು. ಮಕ್ಕಳಲ್ಲಿ ಸೃಜನಶೀಲತೆ ಸಹಜವಾಗಿರುತ್ತದೆ. ಅದು ಹಾಗೆಯೆ ಮುಂದುವರೆಯಬೇಕಾದರೆ ಮಾತೃ ಭಾಷೆಯ ಶಿಕ್ಷಣದಿಂದ ಮಾತ್ರ ಸಾಧ್ಯ. ಆದರೆ, ಪೋಷಕರು ತಮ್ಮ ಸ್ವಾರ್ಥಕ್ಕಾಗಿ ಮಕ್ಕಳ ಬದುಕಿನಲ್ಲಿ ಹಸ್ತಕ್ಷೇಪ ಮಾಡಲು ಹೊರಟಿದ್ದಾರೆ. ಈ ಕುರಿತು ಪೋಷಕರಿಗೆ ತಿಳಿ ಹೇಳುವಂತಹ ಕೆಲಸಗಳಾಗಬೇಕು ಎಂದು ಅವರು ಹೇಳಿದರು.

ಕನ್ನಡದಲ್ಲಿರುವ ಜನಪದ ನಾಣ್ಣುಡಿಗಳು ಇಂಗ್ಲಿಷ್ ಭಾಷೆಯಲ್ಲಿ ಸಿಗುವುದಿಲ್ಲ. ಮಕ್ಕಳು ಹಾಡಿನೊಂದಿಗೆ, ಅಕ್ಷರದೊಂದಿಗೆ ಪ್ರೀತಿ ಬೆಳೆಸಿಕೊಳ್ಳಬೇಕಾದರೆ ಭಾಷೆಯಿಂದ ಮಾತ್ರ ಸಾಧ್ಯ, ಮಾತೃ ಭಾಷೆಯಲ್ಲಿ ಪ್ರಾವಿಣ್ಯತೆ ಗಳಿಸುವ ವಿದ್ಯಾರ್ಥಿ, ಇಂಗ್ಲಿಷ್‌ನಲ್ಲೂ ಸಹಜವಾಗಿಯೆ ಪ್ರಾವೀಣ್ಯತೆಯನ್ನು ಪಡೆಯಬಹುದು. ಈ ಬಗ್ಗೆ ಪೋಷಕರು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಎಸೆಸೆಲ್ಸಿ, ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿದ 585 ವಿದ್ಯಾರ್ಥಿಗಳಿಗೆ ನಗದು ಬಹುಮನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಸದಾನಂದಗೌಡ, ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ, ಹಿರಿಯ ಸಾಹಿತಿಗಳಾದ ಡಾ.ಚಂದ್ರಶೇಖರ ಪಾಟೀಲ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News