ಕರ್ನಾಟಕದಲ್ಲಿ ಜೆಡಿಎಸ್-ಬಿಎಸ್ಪಿ ಮೈತ್ರಿ ಸರಕಾರ ಅಧಿಕಾರಕ್ಕೆ ತನ್ನಿ: ಮಾಯಾವತಿ

Update: 2018-02-17 16:10 GMT

ಬೆಂಗಳೂರು, ಫೆ.17: ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು, ಬಡವರು, ಕಾರ್ಮಿಕರು, ರೈತರು, ಸಣ್ಣ ವ್ಯಾಪಾರಿಗಳು ಸೇರಿದಂತೆ ಎಲ್ಲ ವರ್ಗಗಳ ಹಿತ ಕಾಪಾಡಲು ವಿಫಲವಾಗಿರುವ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಯಾವುದೇ ಕಾರಣಕ್ಕೂ ಅಧಿಕಾರ ಬರಬಾರದು ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಕರೆ ನೀಡಿದರು.

ಶನಿವಾರ ನಗರದ ಯಲಹಂಕದಲ್ಲಿರುವ ನಿಟ್ಟೆ ಮೀನಾಕ್ಷಿ ಕಾಲೇಜು ಮೈದಾನದಲ್ಲಿ ಜೆಡಿಎಸ್ ಆಯೋಜಿಸಿದ್ದ ‘ವಿಕಾಸ ಪರ್ವ’ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಜಾತಿವಾದಿ, ಕೋಮುವಾದಿ ಮನಸ್ಥಿತಿಯ ಸರಕಾರಗಳು ರಾಜ್ಯದ ಅಭಿವೃದ್ಧಿ ಮಾಡುವುದಿಲ್ಲ ಎಂದರು. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷದ ಸರಕಾರವು ದಲಿತರು, ಆದಿವಾಸಿಗಳ ಮತಗಳನ್ನು ಆಕರ್ಷಿಸಲು, ಉತ್ತರಪ್ರದೇಶದಲ್ಲಿ ಬಿಎಸ್ಪಿ ಸರಕಾರ ಇದ್ದ ಸಂದರ್ಭದಲ್ಲಿ ಜಾರಿಗೆ ತಂದಿದ್ದ ನೀತಿಗಳನ್ನೇ ನಕಲು ಮಾಡಿ, ಇಲ್ಲಿ ಅನುಷ್ಠಾನಕ್ಕೆ ತಂದಿದೆ ಎಂದು ಮಾಯಾವತಿ ಟೀಕಿಸಿದರು.

ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಗೆದ್ದ ನಂತರ ಜನರಿಗೆ ವಿಶ್ವಾಸದ್ರೋಹ ಮಾಡಿದೆ. ದಲಿತರನ್ನು ಮುಖ್ಯಮಂತ್ರಿ ಮಾಡಿಲ್ಲ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯು ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಉತ್ತರಪ್ರದೇಶ, ಗುಜರಾತ್ ಸೇರಿದಂತೆ ಇನ್ನಿತರ ರಾಜ್ಯಗಳಲ್ಲಿ ಮಾಡಿದಂತೆ, ಕರ್ನಾಟದಲ್ಲಿಯೂ ಜಾತಿವಾದಿ, ಕೋಮುವಾದಿ, ವಿಷದ ರಾಜಕೀಯವನ್ನು ಬಳಸಿ ಚುನಾವಣೆ ಗೆಲ್ಲಲು ಬಿಜೆಪಿ ಪ್ರಯತ್ನಿಸುತ್ತದೆ. ಕಾಂಗ್ರೆಸ್-ಬಿಜೆಪಿಗೆ ಪಾಠ ಕಲಿಸುವ ಸಮಯ ಬಂದಿದೆ ಎಂದು ಮಾಯಾವತಿ ಹೇಳಿದರು.

ಕರ್ನಾಟಕದಲ್ಲಿ ಹೊಸ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದರೆ ‘ಸರ್ವಜನ ಹಿತಾಯ, ಸರ್ವಜನ ಸುಖಾಯ’ ನೀತಿಯಡಿಯಲ್ಲಿ ಕೆಲಸ ಮಾಡುತ್ತದೆ. ಬೇರೆ ಪಕ್ಷಗಳು ಪ್ರಣಾಳಿಕೆಯಲ್ಲಿ ನೀಡುವ ಘೋಷಣೆಗಳನ್ನು ನೋಡಿ ದಾರಿ ತಪ್ಪಬೇಡಿ, ಎಚ್.ಡಿ.ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿ ಎಂದು ಮಾಯಾವತಿ ಕರೆ ನೀಡಿದರು.

ಕಾಂಗ್ರೆಸ್ ಪಕ್ಷದವರು ಅಂಬೇಡ್ಕರ್ ಬದುಕಿರುವಾಗ ಹಾಗೂ ಮೃತಪಟ್ಟ ನಂತರ ಅವರಿಗೆ ಗೌರವ ನೀಡಿಲ್ಲ. ದೇಶದ ಸಂವಿಧಾನ ರಚನೆಯಾದ ನಂತರ ನಡೆದ ಮೊದಲ ಲೋಕಸಭಾ ಚುನಾವಣೆಯಲ್ಲಿ ಅಂಬೇಡ್ಕರ್‌ರನ್ನು ಅವಿರೋಧವಾಗಿ ಸಂಸತ್ತಿಗೆ ಆಯ್ಕೆ ಮಾಡುವ ಬದಲು, ಎಲ್ಲ ವಾಮಮಾರ್ಗಗಳನ್ನು ಅನುಸರಿಸಿ ಅವರನ್ನು ಸೋಲಿಸಿತು ಎಂದು ಮಾಯಾವತಿ ವಾಗ್ದಾಳಿ ನಡೆಸಿದರು.

ದೀರ್ಘಕಾಲ ದೇಶದ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ, ‘ಸಂವಿಧಾನ ಶಿಲ್ಪಿ’ ಅಂಬೇಡ್ಕರ್‌ಗೆ ‘ಭಾರತ ರತ್ನ’ವನ್ನು ನೀಡಿಲ್ಲ. ಸಂವಿಧಾನದ ಕಲಂ 340ರಡಿಯಲ್ಲಿ ಅನ್ಯ ಹಿಂದುಳಿದ ವರ್ಗದವರಿಗೆ ಮಂಡಲ್ ಆಯೋಗದ ಶಿಫಾರಸ್ಸುಗಳ ಅನ್ವಯ ಮೀಸಲಾತಿಯನ್ನು ನೀಡಿಲ್ಲ ಎಂದು ದೂರಿದ ಅವರು, ವಿ.ಪಿ.ಸಿಂಗ್ ನೇತೃತ್ವದ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ ‘ಅಂಬೇಡ್ಕರ್‌ಗೆ ಭಾರತ ರತ್ನ ನೀಡಬೇಕು, ಮಂಡಲ್ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವ’ ಶರತ್ತುಗಳನ್ನು ಮುಂದಿಟ್ಟು ಬಿಎಸ್ಪಿ ಬಾಹ್ಯ ಬೆಂಬಲ ನೀಡಿತು. ನಮ್ಮ ಹೋರಾಟದ ಪರಿಣಾಮವಾಗಿ ಅಂಬೇಡ್ಕರ್‌ಗೆ ಭಾರತ ರತ್ನ ಹಾಗೂ ಮಂಡಲ್ ಆಯೋಗದ ಶಿಫಾರಸ್ಸುಗಳು ಜಾರಿಯಾದವು ಎಂದು ಮಾಯಾವತಿ ಹೇಳಿದರು.

ಬಿಎಸ್ಪಿ ಸಂಸ್ಥಾಪಕ ಕಾನ್ಷಿರಾಂ ನಿಧನರಾದಾಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷ ಒಂದು ದಿನವೂ ಶೋಕಾಚರಣೆ ಮಾಡಿಲ್ಲ. ಈ ನಿಲುವನ್ನು ಖಂಡಿಸದೆ ಬಿಜೆಪಿಯವರು ಮೌನವಹಿಸಿದ್ದರು. ಆದರೆ, ವಿವಿಧ ಪ್ರಯತ್ನಗಳನ್ನು ಮಾಡಿ ಕೇವಲ ಈ ವರ್ಗದ ಮತಗಳನ್ನು ಪಡೆಯಲು ಮಾತ್ರ ಎರಡು ಪಕ್ಷಗಳು ಪ್ರಯತ್ನಿಸುತ್ತಿವೆ ಎಂದು ಅವರು ವಾಗ್ದಾಳಿ ನಡೆಸಿದರು.

ಹೈದರಾಬಾದ್‌ನ ರೋಹಿತ್ ವೇಮುಲಾ ಸಾವು, ಗುಜರಾತ್‌ನ ಊನಾ, ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ಘಟನೆಗಳು ಯಾರಿಂದಲೂ ಮುಚ್ಚಲ್ಪಟ್ಟಿಲ್ಲ. ಬಿಜೆಪಿ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ದೇಶದೆಲ್ಲೆಡೆ ಹಿಂದುತ್ವದ ಅಜೆಂಡಾ ಅನುಷ್ಠಾನ ಮಾಡಲು ಮುಸ್ಲಿಮರು, ಕ್ರೈಸ್ತರು ಹಾಗೂ ಇನ್ನಿತರ ಅಲ್ಪಸಂಖ್ಯಾತರಲ್ಲಿ ಅಸುರಕ್ಷತೆಯ ವಾತಾವರಣ ಮೂಡಿಸಲಾಗುತ್ತಿದೆ ಎಂದು ಮಾಯಾವತಿ ಆರೋಪಿಸಿದರು.

ಯಾವುದೇ ಪೂರ್ವ ಸಿದ್ಧತೆಗಳಿಲ್ಲದೆ ನೋಟುಗಳ ಅಮಾನ್ಯೀಕರಣ, ಜಿಎಸ್‌ಟಿ ಜಾರಿಯಿಂದ ಬಡವರು, ಕಾರ್ಮಿಕರು, ರೈತರು ಬಾಧಿತರಾಗಿದ್ದಾರೆ. ಬಡತನ, ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಬಿಜೆಪಿ, ನರೇಂದ್ರಮೋದಿಗೆ ಉದ್ಯೋಗ ಕೇಳಿದರೆ ‘ಪಕೋಡ’ ಮಾರಿ ಎಂದು ಅಪಹಾಸ್ಯ ಮಾಡುತ್ತಾರೆ ಎಂದು ಅವರು ಕಿಡಿಗಾರಿದರು.

2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ 100 ದಿನಗಳಲ್ಲಿ ವಿದೇಶದಲ್ಲಿರುವ ಕಪ್ಪು ಹಣ ತಂದು ಎಲ್ಲ ಬಡ ಕುಟುಂಬಗಳಿಗೆ 15-20 ಲಕ್ಷ ರೂ.ನೀಡುವುದಾಗಿ ನರೇಂದ್ರಮೋದಿ ಹೇಳಿದ್ದರು. ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳಾದರೂ ಒಂದು ರೂಪಾಯಿಯೂ ಬಡವರ ಖಾತೆಗಳಿಗೆ ಬಂದಿಲ್ಲ ಎಂದು ಅವರು ದೂರಿದರು.

ದೇಶದ ಗಡಿಭಾಗವು ಸುರಕ್ಷಿತವಾಗಿಲ್ಲ. ಕೇಂದ್ರ ಹಾಗೂ ರಾಜ್ಯ ಸರಕಾರದ ತಪ್ಪು ನೀತಿಗಳು, ಕಾರ್ಯವೈಖರಿಯಿಂದ ಜನ ಸಮಸ್ಯೆಗಳಿಗೆ ಸಿಲುಕಿದ್ದಾರೆ.   ಕಾಂಗ್ರೆಸ್ ಹಾಗೂ ಬಿಜೆಪಿ ಚುನಾವಣೆ ಸಂದರ್ಭದಲ್ಲಿ ಹೆಣೆಯುವ ರಣತಂತ್ರದ ಕುರಿತು ಎಚ್ಚರಿಕೆಯಿಂದಿರಬೇಕು. ಕಾಂಗ್ರೆಸ್ ನೀಡುವ ಆಮಿಷಗಳಿಗೆ ಬಲಿಯಾಗಬೇಡಿ ಎಂದು ಅವರು ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News