ಬಿಎಸ್ಪಿ ಜೊತೆಗಿನ ಮೈತ್ರಿಯಿಂದ ಆನೆಬಲ: ಎಚ್.ಡಿ.ದೇವೇಗೌಡ

Update: 2018-02-17 16:09 GMT

ಬೆಂಗಳೂರು, ಫೆ.17: ವಿಶೇಷ ಸಂದರ್ಭದಲ್ಲಿ ಜೆಡಿಎಸ್ ಹಾಗೂ ಬಿಎಸ್ಪಿ ನಡುವೆ ಮೈತ್ರಿಯಾಗಿದೆ. ಇದರಿಂದಾಗಿ, ನಮಗೆ ಆನೆ ಬಲ ಬಂದಂತಾಗಿದೆ. ಎಚ್.ಡಿ. ಕುಮಾರಸ್ವಾಮಿ ಯಾರ ಹಂಗಿಲ್ಲದೆ ಸರಕಾರ ರಚನೆ ಮಾಡುವಂತಾಗಬೇಕು ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಕರೆ ನೀಡಿದರು.

ಶನಿವಾರ ನಗರದ ಯಲಹಂಕದಲ್ಲಿರುವ ನಿಟ್ಟೆ ಮೀನಾಕ್ಷಿ ಕಾಲೇಜು ಮೈದಾನದಲ್ಲಿ ಜೆಡಿಎಸ್ ಆಯೋಜಿಸಿದ್ದ ‘ವಿಕಾಸ ಪರ್ವ’ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಪ್ರಭಾವ ಹೊಂದಿದ್ದಾರೆ. ಅವರಿಗೆ ನಮ್ಮ ಶಕ್ತಿಯನ್ನು ಧಾರೆ ಎರೆಯಬೇಕು. ನಾವು ನಿಗದಿ ಮಾಡಿರುವ ಕ್ಷೇತ್ರಗಳಲ್ಲಿ ಬಿಎಸ್ಪಿ ಅಭ್ಯರ್ಥಿಗಳಿಗೆ ಶಕ್ತಿ ತುಂಬಬೇಕಿದೆ ಎಂದರು.

ಕುಮಾರಸ್ವಾಮಿ ಅಧಿಕಾರಾವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ಮಂಡಿಸಿದ ಬಜೆಟ್‌ನಿಂದ ಬಡವರು, ರೈತರಿಗೆ ಏನು ಪ್ರಯೋಜನವಾಗುವುದಿಲ್ಲ. ಈ ಬಜೆಟ್ ಅಪ್ರಯೋಜಕ ಎಂದ ಅವರು, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕಾವೇರಿ ನ್ಯಾಯಾಧೀಕರಣದ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು. ಈಗ ಅದರ ಪರಿಣಾಮವಾಗಿ ರಾಜ್ಯದ ಪರವಾಗಿ ತೀರ್ಪು ಬಂದಿದೆ. 14 ಟಿಎಂಸಿ ಹೆಚ್ಚುವರಿ ನೀರು ನಮಗೆ ಸಿಕ್ಕಿದೆ ಎಂದು ಅವರು ಹೇಳಿದರು.

ನನ್ನ ಸೊಸೆ ಅನಿತಾ ಕುಮಾರಸ್ವಾಮಿ ಚುನಾವಣೆಯಲ್ಲಿ ಸೋತ ಕೂಡಲೆ ಜೆಡಿಎಸ್ ಕಥೆ ಮುಗಿಯಿತು ಎಂದು ಅಪಹಾಸ್ಯ ಮಾಡುತ್ತಿದ್ದರು. ನಮ್ಮ ಪಕ್ಷದ ಕಚೇರಿಯನ್ನು ಕಿತ್ತುಕೊಂಡರು. ಈಗ ಜೆಡಿಎಸ್ ಭವನವನ್ನು ನೋಡಿ ಕಾಂಗ್ರೆಸ್‌ನವರ ಕಣ್ಣು ಕುಕ್ಕುತ್ತಿದೆ. ಜೆಡಿಎಸ್ ಸರ್ವನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ದೇವೇಗೌಡ ಹೇಳಿದರು.

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ನಮ್ಮ ಹಲವಾರು ಮನವಿಗಳನ್ನು ಕೇಂದ್ರದಲ್ಲಿ ಅಧಿಕಾರ ನಡೆಸುವ ರಾಷ್ಟ್ರೀಯ ಪಕ್ಷಗಳು ಲಘುವಾಗಿ ಪರಿಗಣಿಸುತ್ತವೆ. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯಗಳನ್ನು ಸರಿಪಡಿಸಲು ಪ್ರಾದೇಶಿಕ ಪಕ್ಷದ ಅಗತ್ಯವಿದೆ ಎಂದರು. ಉತ್ತರಪ್ರದೇಶದಲ್ಲಿ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದ ದಲಿತ ಕುಟುಂಬದ ಸಹೋದರಿ, ಹಿರಿಯ ಅಕ್ಕ ಮಾಯಾವತಿ, ಒಬ್ಬ ಮಹಿಳೆ ಮನಸ್ಸು ಮಾಡಿದರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ಅವರ ರಾಜಕೀಯ ಜೀವನದಲ್ಲಿ ಸಾಧಿಸಿ ತೋರಿಸಿದ್ದಾರೆ ಎಂದು ಹೇಳಿದರು.

ಮೊದಲ ಬಾರಿಗೆ ನಮ್ಮ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿವೆ. ಜನತೆಯ ಆಶೀರ್ವಾದದಿಂದ ಎರಡನೆ ಜನ್ಮವೆತ್ತು ಇಲ್ಲಿ ನಿಮ್ಮ ಮುಂದೆ ನಿಂತಿದ್ದೇನೆ. ದೇವೇಗೌಡರು ಪ್ರಧಾನಿಯಾಗಿ ಕನ್ನಡಿಗರ ಬಾವುಟವನ್ನು ದಿಲ್ಲಿಯಲ್ಲಿ ಹಾರಿಸಿದ್ದನ್ನು ನೋಡಿದ್ದೇನೆ. ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಎಂದು ಕೇಳುತ್ತಿರುವುದು ನನಗಾಗಿ ಅಲ್ಲ, ಬಡವರು, ಅಸಹಾಯಕರಿಗಾಗಿ, ರೈತರ ಆತ್ಮಹತ್ಯೆಗಳನ್ನು ನಿಲ್ಲಿಸಲು ಎಂದು ಅವರು ಹೇಳಿದರು.

ಜೆಡಿಎಸ್ ಎಲ್ಲಿ ಅಧಿಕಾರಕ್ಕೆ ಬರುತ್ತದೆ. ಕುಮಾರಸ್ವಾಮಿ ಅವರಪ್ಪನಾಣೆ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಕೆಲವರು ಅಧಿಕಾರದ ಮದದಿಂದ ಹೇಳುತ್ತಿದ್ದಾರೆ. ಆಣೆ ಪ್ರಮಾಣ ಮಾಡಲು ದೇವೇಗೌಡರನ್ನು ಅವರು ಕೊಂಡುಕೊಂಡಿದ್ದಾರೆಯೆ? ಎಂದು ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದರು.

ಶ್ರವಣಬೆಳಗೊಳದಲ್ಲಿ ಶಾಂತಿಪ್ರಿಯ ಬಾಹುಬಲಿಗೆ ಮಹಾಮಜ್ಜನ ನಡೆಯುತ್ತಿದ್ದರೆ, ಇಲ್ಲಿ ಈ ಮಾನವನಿಗೆ ನಿಮ್ಮ ಪ್ರೀತಿಯ ಅಭಿಷೇಕವನ್ನು ಧಾರೆ ಎಳೆದಿದ್ದೀರಾ. ಜೆಡಿಎಸ್ ಅಧಿಕಾರಕ್ಕೆ ಬಂದರೆ ವಿಧಾನಸೌಧದ ಮೂರನೆ ಮಹಡಿಯಿಂದ ಅಧಿಕಾರ ನಡೆಯುವುದಿಲ್ಲ. ಜನರ ಮನೆಯಿಂದ ನಡೆಯುತ್ತದೆ ಎಂದು ಅವರು ಹೇಳಿದರು. ಕಾಂಗ್ರೆಸ್, ಬಿಜೆಪಿಗೆ ಅವಕಾಶ ನೀಡಿದ್ದೀರ. ನನಗೆ ಒಂದು ಅವಕಾಶ ನೀಡಿ, ನಮಗೆ ಗುಜರಾತ್ ಮಾದರಿ ಬೇಕಿಲ್ಲ. ಗೋಧ್ರಾದಲ್ಲಿ ನಡೆದ ಹತ್ಯಾಕಾಂಡ, ಗರ್ಭೀಣಿಯರು, ಅಮಾಯಕರ ಸಾವಿನ ಮಾದರಿ ಬೇಡ. ಕರಾವಳಿಯಿಂದ ಯಾದಗಿರಿವರೆಗೆ ಎಲ್ಲರೂ ಸಹೋದರರಂತೆ, ಒಂದು ತಾಯಿಯ ಮಕ್ಕಳಂತೆ ಬದುಕುವ ವಾತಾವರಣ ಬೇಕಿದೆ ಎಂದು ಕುಮಾರಸ್ವಾಮಿ ಹೇಳಿದರು.

ಕಾರ್ಯಕ್ರಮದಲ್ಲಿ ಜೆಡಿಎಸ್ ಮಹಾಪ್ರಧಾನ ಕಾರ್ಯದರ್ಶಿಗಳಾದ ಬಿ.ಎಂ.ಫಾರೂಕ್, ದಾನೀಶ್ ಅಲಿ, ಮಾಜಿ ಸಚಿವರಾದ ಬಸವರಾಜ ಹೊರಟ್ಟಿ, ಪಿಜಿಆರ್ ಸಿಂಧ್ಯಾ, ಮುಖಂಡರಾದ ಝಫ್ರುಲ್ಲಾಖಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ರಾಜ್ಯದ ರೈತರ ಮೇಲೆ 51 ಸಾವಿರ ಕೋಟಿ ರೂ.ಸಾಲದ ಹೊರೆಯಿದೆ. ನರೇಂದ್ರಮೋದಿ, ಯಡಿಯೂರಪ್ಪ, ಸಿದ್ದರಾಮಯ್ಯ ಯಾರೂ ಸಾಲ ತೀರಿಸುವ ಮಾತು ಹೇಳಿಲ್ಲ. ನಮ್ಮ ಪಕ್ಷ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ 51 ಸಾವಿರ ಕೋಟಿ ರೂ.ಗಳ ಸಾಲ ಮನ್ನಾದ ಆದೇಶ ಹೊರಡಿಸಲಾಗುವುದು. ಈಗಿನ ಸರಕಾರದ ರೀತಿಯಲ್ಲಿ 1.35 ಲಕ್ಷ ಕೋಟಿ ರೂ.ಸಾಲ ಪಡೆದು ರೈತರ ಸಾಲ ತೀರಿಸಲ್ಲ. 6.50 ಕೋಟಿ ಜನ ಕಟ್ಟುವ ತೆರಿಗೆ ಹಣದಿಂದ ಸಾಲ ಮನ್ನಾ ಮಾಡುವುದು ನನ್ನ ಸವಾಲು.
-ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News