ಬೆಂಗಳೂರು: ಲಿಂಗ ಸಮಾನತೆಗಾಗಿ ಪ್ರತಿಭಟನೆ

Update: 2018-02-17 15:33 GMT

ಬೆಂಗಳೂರು, ಫೆ.17: ಲಿಂಗತಾರತಮ್ಯ ನಿವಾರಣೆಯಾಗಿ ಸಮಾನತೆ ಬರಲಿ ಎಂಬ ಘೋಷವಾಕ್ಯದೊಂದಿಗೆ ಬಿಷಪ್ ಕಾಟನ್ ಮಹಿಳಾ ಕ್ರಿಶ್ಚಿಯನ್ ಕಾಲೇಜು ಸಮಾಜಶಾಸ್ತ್ರ ಹಾಗೂ ರಾಜಕೀಯ ಶಾಸ್ತ್ರ ವಿಭಾಗದ ವಿದ್ಯಾರ್ಥಿನಿಯರು ಪ್ರತಿಭಟನಾ ಮೆರವಣಿಗೆ ನಡೆಸಿ ಜಾಗೃತಿ ಮೂಡಿಸಿದರು.

ಶನಿವಾರ ನಗರದ ಪುರಭವನದ ಎದುರು ಜಮಾಯಿಸಿದ್ದ ನೂರಾರು ವಿದ್ಯಾರ್ಥಿನಿಯರು ಲಿಂಗ ಸಮಾನತೆಗಾಗಿ ಮೆರವಣಿಗೆ ನಡೆಸಿದರು.

ಪ್ರತಿಭಟನೆ ನೇತೃತ್ವವಹಿಸಿದ್ದ ಸಹಾಯಕ ಪ್ರಾಧ್ಯಾಪಕಿ ಇ.ರಾಜಕುಮಾರ್, ದೇಶದಲ್ಲಿ ಮಹಿಳೆಯರ ಸಂಖ್ಯೆ ಪುರುಷರಿಗೆ ಸರಿಸಮಾನವಾಗಿ ಶೇ. 50ರಷ್ಟಿದ್ದು, ಸಮಾಜದಲ್ಲಿ ಮತ್ತು ಶೈಕ್ಷಣಿಕ ಕ್ಯಾಂಪಸ್‌ನಲ್ಲಿ ಲಿಂಗ ಸಮಾನತೆಯನ್ನು ಕಾಯ್ದುಕೊಂಡು ಬರುವ ವ್ಯವಸ್ಥೆ ಆಗಬೇಕು ಎಂದು ಆಗ್ರಹಿಸಿದರು.

ಗ್ರಾಮಾಂತರ ಭಾಗಗಳಲ್ಲಿ ಬಾಲ್ಯ ವಿವಾಹ ಪದ್ಧತಿ ಈಗಲೂ ಮುಂದುವರಿದಿದೆ. ಈ ಪಿಡುಗಿನಿಂದಾಗಿ ಬಹಳಷ್ಟು ಮಂದಿ ಹೆಣ್ಣುಮಕ್ಕಳು ಅತಿ ಶೀಘ್ರದಲ್ಲಿ ವಿಧವೆಯರಾಗುವ ಪ್ರಕರಣಗಳು ಹೆಚ್ಚುತ್ತಿವೆ. ಹೆಣ್ಣು ಭ್ರೂಣ ಹತ್ಯೆ ಮುಂದುವರಿದಿದ್ದು, ಶಿಕ್ಷಣ, ವೈದ್ಯಕೀಯ ನೆರವು, ಆಸ್ತಿ ಹಕ್ಕು, ಕೆಲಸದ ಸ್ಥಳ ಮತ್ತು ವೇತನ ಇತ್ಯಾದಿ ವಿವಿಧ ಕ್ಷೇತ್ರಗಳಲ್ಲಿ ಹೆಣ್ಣುಮಕ್ಕಳ ಬಗೆಗೆ ತಾರತಮ್ಯ ನೀತಿ ಮುಂದುವರಿದಿದೆ. ಹೀಗಾಗಿ, ತಾರತಮ್ಯ ದೂರವಾಗಬೇಕೆಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News