ಜಾಣ ಮೌನದಲ್ಲಿ ಸರಕಾರಿ ಶಾಲೆಗಳು

Update: 2018-02-17 18:43 GMT

ಇಂದಿನ ಸರಕಾರಿ ಶಾಲೆಗಳು ಹಿಂದೆಂದಿಗಿಂತಲೂ ಉತ್ತಮವಾಗಿವೆ. ಸಮಸ್ಯೆಗಳಿಲ್ಲವೆಂದಲ್ಲ. ಮೂಲಭೂತ ಸೌಕರ್ಯಗಳ ಕೊರತೆ, ಒಂದಷ್ಟು ಶಿಕ್ಷಕರ ನಿರ್ಲಕ್ಷ, ಫಲಿತಾಂಶದ ಸಮಸ್ಯೆ ಎಲ್ಲ ಇದೆ. ಇದೆಲ್ಲವೂ ಸರಿಹೋಗಬೇಕು. ಆದರೆ ಒಂದು ಸಮಾಜದ ಉತ್ತಮೀಕರಣವೆಂದರೆ ಹಿಡಿಯಷ್ಟು ಜನರನ್ನು ಆಕಾಶದೆತ್ತರಕ್ಕೆ ಎತ್ತಿ ಉಳಿದವರನ್ನು ಪ್ರಪಾತದಲ್ಲಿಡುವುದಲ್ಲ. ಇಡೀ ಸಮಾಜವನ್ನೇ ಅರ್ಧ ಇಂಚು ಮೇಲಕ್ಕೆ ಎತ್ತುವುದು ಸಮಾಜದ ಉತ್ತಮೀಕರಣದಲ್ಲಿ ಒಂದು ದೇಶದ ದೈತ್ಯ ಧುಮುಕೇ ಆಗಿರುತ್ತದೆ.

ಬಾಯಿ ತೆರೆದು ಹೇಳದೆ ಇದ್ದರೂ ಬಹಳ ಮಂದಿಯ ಮನಸಿನಲ್ಲಿ ಸರಕಾರಿ ಶಾಲೆಗಳು ಚೆನ್ನಾಗಿಲ್ಲವೆಂಬ ಅಭಿಪ್ರಾಯವಿರುವುದನ್ನು ಬಹುಶಃ ನೀವೂ ಗಮನಿಸಿರುತ್ತೀರಿ. ‘‘ಚೆನ್ನಾಗಿ’’ ಎಂಬ ಪರಿಕಲ್ಪನೆಯು ಸಾಪೇಕ್ಷವಾದದ್ದು. ಅವರವರ ತಿಳಿವಳಿಕೆ ಮತ್ತು ಜೀವನಾನುಭವ ಹಾಗೂ ಗ್ರಹಿಕೆಯ ಆಧಾರದಲ್ಲಿ ಅದು ಬೇರೆ ಬೇರೆ ಅರ್ಥಗಳನ್ನು ಕೊಡುತ್ತದೆ. ಆದರೆ ಇಲ್ಲಿ ‘‘ಚೆನ್ನಾಗಿ’’ ಎನ್ನುವುದರ ಹಿಂದೆ ಪರೋಕ್ಷವಾಗಿ ವ್ಯಕ್ತವಾಗುವ ಒಂದು ಮಾನಸಿಕತೆಯು ಚೆನ್ನಾಗಿರುವಿಕೆಯ ಕುರಿತ ಸಾಪೇಕ್ಷ ಅರ್ಥಗಳ ವ್ಯಾಪ್ತಿಯನ್ನು ಮೀರಿ ಬೇರೇನನ್ನೊ ಹೇಳುತ್ತದೆ. ಹಿಂದೆಲ್ಲ ಸರಕಾರಿ ಶಾಲೆಗಳು ಚೆನ್ನಾಗಿದ್ದವು, ಎಲ್ಲರೂ ಅಲ್ಲಿಗೇ ಹೋಗುತ್ತಿದ್ದರು, ಅಧ್ಯಾಪಕರು ಯೋಗ್ಯರಾಗಿದ್ದರು, ಆದರೆ ಈಗೀಗ ಹಾಳಾಗಿದೆ ಎನ್ನುವುದು ವಾದ. ಈ ವಾದ ಹೆಚ್ಚು ಬೆಳೆಯುತ್ತಾ ಬಂದದ್ದು 2000ದ ಸುಮಾರಿನ ನಂತರ ಎಂಬುದನ್ನು ಗಮನಿಸಬೇಕು.

ಯಾವಾಗ ಶಿಕ್ಷಣವು ಮೂಲಭೂತ ಹಕ್ಕಾಗಿ ಜಾರಿಗೊಂಡು, ಭಾರತ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಸರ್ವಶಿಕ್ಷಾ ಅಭಿಯಾನವು ಜಾರಿಗೆ ಬಂದಿತೊ ಆಮೇಲೆ ಸರಕಾರಿ ಶಾಲೆಗಳು ಚೆನ್ನಾಗಿಲ್ಲ ಎಂಬ ಸಿದ್ಧಾಂತವು ಪ್ರಬಲವಾಗಿ ಪ್ರತಿಪಾದಿಸಲ್ಪಟ್ಟದ್ದು. ಅದಕ್ಕಿಂತ ಮೊದಲು ಸರಕಾರಿ ಶಾಲೆಗಳು ಚೆನ್ನಾಗಿದ್ದ ಕಾಲದಲ್ಲಿ ಯಾಕೆ ಚೆನ್ನಾಗಿದ್ದವು? ತಾನು ಕಲಿಯಲೇ ಬೇಕೆಂಬ ಆಸಕ್ತಿ ಇದ್ದ ವಿದ್ಯಾರ್ಥಿಗಳು ಶಾಲೆಗಳಿಗೆ ಹೋಗುತ್ತಿದ್ದರು. ಸ್ವಯಂಪ್ರೇರಣೆ ಇರುವ ವಿದ್ಯಾರ್ಥಿಗಳಿಗೆ ಕಲಿಸುವುದು ಸುಲಭ. ಆದ್ದರಿಂದ ಗುಣಮಟ್ಟ ಚೆನ್ನಾಗಿದೆ ಎಂದು ಮೇಲ್ನೋಟಕ್ಕೆ ಅನಿಸುತ್ತಿತ್ತು. ಆದರೆ ಆಗ ಸ್ವಯಂ ಆಸಕ್ತಿ ಇಲ್ಲದವರು ಶಾಲೆಗೇ ಹೋಗುತ್ತಿರಲಿಲ್ಲ ಮತ್ತು ಶಾಲೆಗೆ ಹೋಗದವರ ಸಂಖ್ಯೆಯೇ ಹೋಗುವವರಿಗಿಂತ ಹೆಚ್ಚಿನದ್ದಾಗಿತ್ತು. ಶಾಲೆಗೆ ಹೋಗದವರಿಗೆ ಫಲಿತಾಂಶ ಬಿಡಿ; ಅ, ಆ, ಇ, ಈ ಯೂ ಬರುತ್ತಿರಲಿಲ್ಲ. ಆದರೆ ಸರ್ವ ಶಿಕ್ಷಣ ಅಭಿಯಾನವು ಆಸಕ್ತಿ ಇರುವವರನ್ನು- ಇಲ್ಲದವರನ್ನು ಎಲ್ಲರನ್ನೂ ಶಾಲೆಗೆ ತಂದಿತು.

ಭಾರತದಲ್ಲಿ ಎಲ್ಲರನ್ನೂ ಅಕ್ಷರವಂತರನ್ನಾಗಿ ಮಾಡುವ ಮೊತ್ತಮೊದಲ ದಿಟ್ಟ ಹೆಜ್ಜೆಯನ್ನು ಇಟ್ಟ ಮೇಲೆ ಹಂತ ಹಂತವಾಗಿ ಸರಕಾರಿ ಶಾಲೆಗಳು ಚೆನ್ನಾಗಿಲ್ಲ ಮತ್ತು ಅಧ್ಯಾಪಕರು ಅಯೋಗ್ಯರು ಎಂಬ ವಾದ ಬೆಳೆಯುತ್ತಾ ಬಂದಿದೆ. ಆದರೆ ಈ ವಾದ ಮಹತ್ವದ ಒಂದು ಸಂಗತಿಯನ್ನು ಗಮನಿಸುವುದಿಲ್ಲ. 2001ರಲ್ಲಿ ಚೆನ್ನಾಗಿದ್ದ ಅಧ್ಯಾಪಕ 2002 ಬಂದಾಗ ಹಠಾತ್ತಾಗಿ ಹೇಗೆ ಕೆಟ್ಟು ಹೋಗುತ್ತಾನೆ ಎನ್ನುವ ಪ್ರಶ್ನೆಗೆ ಉತ್ತರಿಸಲು ಹೋಗುವುದಿಲ್ಲ. ಆದರೆ ವಾಸ್ತವದಲ್ಲಿ ಹಾಗಾಗಲು ಸಾಧ್ಯವಿಲ್ಲ. ಒಂದು ವೃತ್ತಿನಿರತ ಸಮುದಾಯ ತನ್ನೆಲ್ಲ ಬದ್ಧತೆಗಳನ್ನು ಕಳೆದುಕೊಂಡಿದೆ ಎಂದು ವಾದಿಸಬೇಕಾದರೆ ಕನಿಷ್ಠ ಪಕ್ಷ ಆ ವೃತ್ತಿ ಸಮುದಾಯದ ಒಂದು ತಲೆಮಾರಾದರೂ ಕಳೆಯಬೇಕು. ಸಾಮಾನ್ಯವಾಗಿ ಒಮ್ಮೆ ನೇಮಕಾತಿಯಾದವರು ಸರಾಸರಿ ಮೂವತ್ತು ವರ್ಷವಂತೂ ಸೇವೆಯಲ್ಲಿರುತ್ತಾರೆ. ಅಂದರೆ 1999ರಲ್ಲಿ ನೇಮಕಗೊಂಡ ಅಧ್ಯಾಪಕರು ಸರಿಸುಮಾರು 2029ರ ವರೆಗೆ ಸೇವೆಯಲ್ಲಿರುತ್ತಾರೆ. 1999ರಲ್ಲಿ ಅವರಿಗೆ ವೃತ್ತಿ ಬದ್ಧತೆ ಇತ್ತು ಎನ್ನುವುದನ್ನು ಒಪ್ಪಿಕೊಳ್ಳುವುದಾದರೆ 2005 ಬಂದಾಗ ಏಕಾಏಕಿ ವೃತ್ತಿ ಬದ್ಧತೆಯನ್ನು ಕಳೆದುಕೊಂಡರು ಎನ್ನುವ ವಾದದಲ್ಲಿ ಸತ್ಯದ ಶಕ್ತಿಯಂತೂ ಇರಲು ಸಾಧ್ಯವಿಲ್ಲ.

ಸರ್ವಶಿಕ್ಷಣ ಅಭಿಯಾನವು ಯಾವಾಗ ಕಾಳ, ಕರಿಯ, ಇಮಾಂಸಾಬಿ, ಮೋಂಟ ಎಲ್ಲರ ಮಕ್ಕಳನ್ನೂ ಏಕಾಏಕಿ ಶಾಲೆಗಳಿಗೆ ಕರೆತಂದಿತೊ ಆಗ ಒಂದು ಬಿಗ್ ಶಿಫ್ಟ್ ನಡೆದಿದೆ. ಇದನ್ನು ಜಾತಿಯ ಆಧಾರಕ್ಕಿಂತ ಸಾಂಸ್ಕೃತಿಕ ವರ್ಗೀಕರಣದ ನೆಲೆಯಲ್ಲಿ ಗ್ರಹಿಸಬೇಕು. ಕಾಳಪ್ಪ ಐ.ಪಿ.ಎಸ್.ನ ಮಕ್ಕಳು ಬರುವ ಶಾಲೆಯಲ್ಲಿ ತನ್ನ ಮಕ್ಕಳನ್ನು ಓದಿಸಲು ಕೃಷ್ಣಚಾರ್ಯರರಿಗೆ ಕಷ್ಟವೆನಿಸಲಿಲ್ಲ. ಆದರೆ ಗಾರೆ ಕೆಲಸದ ಕಾಳ, ಬೀಡಿ ಕಟ್ಟುವ ಶಬಾನಳ ಮಕ್ಕಳು ಅದೇ ಶಾಲೆಗೆ ಬಂದಾಗ ಕೃಷ್ಣಾಚಾರ್ಯರಿಗೆ ಮಾತ್ರವಲ್ಲ; ಕಾಳಪ್ಪ ಐ.ಪಿ.ಎಸ್.ಗೂ ಸ್ವೀಕರಿಸಲು ಸಾಧ್ಯವಾಗದೆ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಶಿಫ್ಟ್ ಮಾಡಿದರು. ಈ ಬಿಗ್ ಶಿಫ್ಟ್ ಎನ್ನುವಂತಾದ್ದು ಯಾವ ಕುಟುಂಬಗಳಲ್ಲಿ ಓದಿನ ಹವ್ಯಾಸವಿದ್ದು, ಮನೆಯಲ್ಲೊಂದು ಗ್ರಂಥಾಲಯದ ಅಗತ್ಯವಿದೆ ಎಂಬ ಅರಿವು ಇದೆಯೋ ಆ ಕುಟುಂಬಗಳ ಮಕ್ಕಳನ್ನು ಸರಕಾರಿ ಶಾಲೆಗಳಿಂದ ಹೊರಕ್ಕೆ ತಂದಿತು. ಕೆಲವು ಅಪವಾದಗಳಿರಬಹುದು ಅಷ್ಟೆ. ನನ್ನ ಮಗಳು ಸರಕಾರಿ ಶಾಲೆಯಲ್ಲಿ ಓದುತ್ತಿದ್ದಾಳೆ.

ಹಿರಿಯ ಕವಿ ಸುಬ್ರಾಯ ಚೊಕ್ಕಾಡಿಯವರ ಮೊಮ್ಮಕ್ಕಳೂ ಸರಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ. ಇಂಥವು ಪ್ರಜ್ಞಾಪೂರ್ವಕವಾಗಿ ಸರಕಾರಿ ಶಾಲೆಯನ್ನು ಆಯ್ಕೆ ಮಾಡಿಕೊಂಡ ಪ್ರಕರಣಗಳು. ಇಂಥ ಅಪವಾದಗಳನ್ನು ಬಿಟ್ಟರೆ ಸರಕಾರಿ ಶಾಲೆಯು ಓದಿನ ದೊಡ್ಡ ಹಿನ್ನೆಲೆ ಇಲ್ಲದ ಕುಟುಂಬಗಳ ಮಕ್ಕಳಿಗೆ ಸೀಮಿತವಾಯಿತು. ಈ ಬಿಗ್ ಶಿಫ್ಟ್ ಆದಾಗ ಪಠ್ಯಕ್ರಮದ ಮೂಲ ತಳಹದಿಯಲ್ಲಿ ಯಾವ ಬದಲಾವಣೆಯೂ ಆಗಿಲ್ಲ ಎಂಬುದನ್ನು ಗಮನಿಸಬೇಕು. ಓದಿನ ಹಿನ್ನೆಲೆ ಇಲ್ಲದ ಕುಟುಂಬಗಳಿಂದ ಬಂದ ಮಕ್ಕಳಿಗೆ ಸಾಮಾನ್ಯವಾಗಿ ಹೆಚ್ಚು ಆಸಕ್ತಿ ಇರುವ ಜೇನು ತೆಗೆಯುವುದು, ಮರ ಹತ್ತುವುದು, ಮೀನು ಹಿಡಿಯುವುದು ಇಂಥ ಯಾವ ಕಲಿಕೆಗಳನ್ನೂ ಪಠ್ಯಕ್ರಮವು ಒಳಗೊಳಿಸಿಕೊಳ್ಳಲಿಲ್ಲ. ನಿಜ, ಈ ರೀತಿಯ ಬಹುಮುಖಿ ಕಲಿಕಾಂಶಗಳ ಪಠ್ಯವನ್ನು ಅಳವಡಿಸಬೇಕಾದರೆ ಪಠ್ಯವು ಹೆಚ್ಚೆಂದರೆ ಜಿಲ್ಲಾ ಮಟ್ಟದಲ್ಲಿ ರಚನೆಯಾಗುವಷ್ಟಾದರೂ ಸ್ಥಳೀಕರಣಗೊಳ್ಳಬೇಕಾಗುತ್ತದೆ. ಈ ಪ್ರಕ್ರಿಯೆಗೆ ಬೃಹತ್ ಪ್ರಮಾಣದಲ್ಲಿ ಶೈಕ್ಷಣಿಕ ಸಿದ್ಧತೆಗಳಷ್ಟೇ ಅಲ್ಲದೆ ಸಮಾಜದ ಆರ್ಥಿಕ ರಚನೆಗಳಲ್ಲೂ ಸಿದ್ಧತೆಗಳಾಗಬೇಕಾಗುತ್ತದೆ. ಅದಕ್ಕೆ ಕಾಲವಿನ್ನೂ ಪಕ್ವಗೊಂಡಿಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಆದರೆ ಇರುವ ಪಠ್ಯವನ್ನೇ ಓದಿನ ಹಿನ್ನೆಲೆ ಇಲ್ಲದ ಕುಟುಂಬಗಳಿಂದ ಬಂದ ಮಕ್ಕಳ ಸ್ನೇಹಿಯಾಗುವಂತೆ ಮಾಡಲು ಸಾಧ್ಯವಿದೆ. ಒಂದು ಉದಾಹರಣೆಯನ್ನು ಕೊಡುತ್ತೇನೆ. ಇತಿಹಾಸದಲ್ಲಿ ವೇದಕಾಲೀನ ನಾಗರಿಕತೆ ಎಂಬ ಪಾಠವಿದೆ. ಯಜ್ಞ ಯಾಗಗಳು, ಸಾಮಾಜಿಕ ರಚನೆ, ರಾಜ-ಈ ವಿವರಗಳನ್ನೇ ಅದು ಹೊಂದಿದೆ. ಆದರೆ ಅಥರ್ವವೇದ ಮತ್ತು ವೃಕ್ಷಾಯುರ್ವೇದದಲ್ಲಿ ಯಾವ ಕಾಯಿಲೆಗೆ ಯಾವ ಗಿಡಮೂಲಿಕೆಗಳು ಎಂಬ ವಿವರಗಳಿವೆ. ಆ ವಿವರಗಳನ್ನು ಪಠ್ಯದಲ್ಲಿ ಕೊಟ್ಟರೆ ಗಿಡಮೂಲಿಕೆಗಳ ಎಲೆಗಳನ್ನು ಗುರುತಿಸಲು ಓದಿನ ಹಿನ್ನೆಲೆ ಇಲ್ಲದ ಕುಟುಂಬದಿಂದ ಬಂದ ಮಕ್ಕಳಿಗೆ ಸುಲಭವಾಗುತ್ತದೆ. ಅದರ ಮೇಲೆ ಪ್ರಶ್ನೆಗಳು ಬಂದಾಗ ಅವರಿಗೂ ಒಳ್ಳೆಯ ಅಂಕಗಳು ಬರುತ್ತವೆ. ಅವರೂ ಬುದ್ಧಿವಂತರೆನಿಸಿಕೊಳ್ಳುತ್ತಾರೆ.

ಆದರೆ ಇವತ್ತು ಸರಕಾರಿ ಶಾಲೆಗಳಿಗೆ ಬರುವ ಬಹುತೇಕ ಮಕ್ಕಳ ಜೀವನಕ್ರಮಕ್ಕೆ ವಿರೋಧಿಯಾಗಿರುವ ಪಠ್ಯಕ್ರಮವನ್ನಿಟ್ಟುಕೊಂಡು ಅದರಲ್ಲಿ ಅವರು ಒಳ್ಳೆಯ ಅಂಕಗಳನ್ನು ಪಡೀತಾ ಇಲ್ಲ. ಆದ್ದರಿಂದ ಸರಕಾರಿ ಶಾಲೆಗಳು ಚೆನ್ನಾಗಿಲ್ಲ ಎಂದು ಸಿದ್ಧಾಂತವನ್ನು ಮುಂದಿಡುವುದಿದೆಯಲ್ಲ, ಇದು ದ್ರೋಹ ಮತ್ತು ಆತ್ಮವಂಚನೆಯಲ್ಲದೆ ಬೇರೇನಲ್ಲ. ದುರದೃಷ್ಟವಶಾತ್ ಭಾರತದಲ್ಲಿ ತಳವರ್ಗದ ಪರವಾಗಿರುವ ಹೋರಾಟದ ನೆಲೆಗಳು ಶೈಕ್ಷಣಿಕವಾಗಿ ಮೇಲ್ಚಲನೆಗೆ ನಿಷ್ಠವಾಗಿದ್ದು ಇಂಗ್ಲಿಷ್ ಮಾಧ್ಯಮಕ್ಕೆ ಒತ್ತಾಯಿಸುತ್ತದೆಯೇ ಹೊರತು ಪಠ್ಯಕ್ರಮವನ್ನು ತನ್ನ ಮಕ್ಕಳ ಪರವಾಗಿ ಮಾಡಿಸಬೇಕಾದ ಅಗತ್ಯದ ಅರಿವನ್ನು ತಂದುಕೊಂಡಿಲ್ಲ. ಇದು ಏನಾಗುತ್ತದೆ ಎಂದರೆ ಕನ್ನಡ ಮಾಧ್ಯಮದಲ್ಲಿ ಒಂದು ಗಂಟೆಯಲ್ಲಿ ಕಲಿಯಬಹುದಾದುದನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯಲು ನಾಲ್ಕು ಗಂಟೆ ಬೇಕಾಗುತ್ತದೆ. ಅಂದರೆ ಮಕ್ಕಳಿಗೆ ಜ್ಞಾನ ಪೂರೈಕೆಯನ್ನು ಕಡಿಮೆ ಮಾಡುತ್ತದೆ. ಅಷ್ಟಾಗಿಯೂ ಇಂಗ್ಲಿಷ್ ಬರುವುದಿಲ್ಲ. ಏಕೆಂದರೆ ಇಂಗ್ಲಿಷ್ ಬಾರದಿರುವುದು ಇಂಗ್ಲಿಷ್ ಮಾಧ್ಯಮವಿಲ್ಲದಿರುವುದರಿಂದಾಗಿ ಅಲ್ಲ. ಇಂಗ್ಲಿಷನ್ನು ಕಲಿಸಬೇಕಾದ ವಿಧಾನದಲ್ಲಿ ಕಲಿಸದಿರುವುದರಿಂದ. ಯಾವುದೇ ಒಂದು ಭಾಷೆಯನ್ನು ಕಲಿಯಬೇಕಾದರೆ ಮಗು ಆ ಭಾಷೆಯ ಪದಗಳನ್ನು ಮೊದಲು ಕೇಳಬೇಕು. ನಂತರ ಪುನರುಚ್ಚರಿಸಬೇಕು. ಆಮೇಲೆ ಆ ಪದದ ಅರ್ಥವನ್ನು ಗ್ರಹಿಸಬೇಕು. ನಂತರ ಅಕ್ಷರವನ್ನು ಗುರುತಿಸಬೇಕು. ಆಮೇಲೆ ಬರೆಯಲು ಕಲಿಯಬೇಕು.ಕನ್ನಡದಲ್ಲಿ ಬೇಕಾದರೂ ಗಮನಿಸಿ, ಮಗುವಿಗೆ ಎಲ್ಲರೂ ‘‘ಇದು ಅಮ್ಮ’’ ಎನ್ನುವುದನ್ನು ಕೇಳಿ ಕೇಳಿ ಮಗು, ‘‘ಮ.. ಮ.. ಮ್ಮ.. ಅಮ್ಮ’’ ಎಂದು ಉಚ್ಚರಿಸಲು ಕಲಿಯುತ್ತದೆ. ‘‘ಅಮ್ಮ’’ ಎಂದ ಕೂಡಲೆ ಅಮ್ಮ ಎನ್ನುವುದರ ಅರ್ಥ ಗೊತ್ತಾಗಿರುವುದಿಲ್ಲ. ಅರ್ಥ ಆಮೇಲೆ ಗೊತ್ತಾಗುವುದು. ಕನ್ನಡದ ಕಲಿಕೆ ಈ ಎಲ್ಲ ಪ್ರಕ್ರಿಯೆಯನ್ನು ಹಾದು ಆಮೇಲೆ ನಡೆಯುತ್ತದೆ. ಆದರೆ ಇಂಗ್ಲಿಷನ್ನು ಮಾತ್ರ ಎ, ಬಿ, ಸಿ, ಡಿ ಬರೆಸುವಲ್ಲಿಂದಲೇ ಪ್ರಾರಂಭಿಸಲಾಗುತ್ತದೆ! ಅಂದ ಮೇಲೆ ಇಂಗ್ಲಿಷ್ ಬರುವುದು ಹೇಗೆ! ಈ ಅಂಶವನ್ನು ತಳಸಮುದಾಯದ ಹೋರಾಟಗಳು ಗಣನೆಗೇ ತೆಗೆದುಕೊಳ್ಳುವುದಿಲ್ಲ.

ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ತಳ ಸಮುದಾಯದ ಹೋರಾಟದ ನೆಲೆಗಳು ಐ. ಕ್ಯೂ ಟೆಸ್ಟ್ ತಮ್ಮ ಸಮುದಾಯದ ಸಹಜ ಅನುಭವಗಳಿಗೆ ವಿರುದ್ಧವಾಗಿದೆ ಎಂದು ಸುಪ್ರೀಂ ಕೋರ್ಟಿಗೆ ಹೋಗಿ ಶಿಕ್ಷಣವನ್ನು ತನ್ನ ಸಮುದಾಯದ ಪರವಾಗಿ ಮಾಡಿಸಿಕೊಂಡ ಘಟನೆ ನಡೆದಿದೆ. ಭಾರತದಲ್ಲಿ ಅದರ ಬಗ್ಗೆ ಇನ್ನೂ ಚಿಂತನೆಯೇ ಹುಟ್ಟಿಲ್ಲ. ಇಷ್ಟಾಗಿಯೂ ಇಂದಿನ ಸರಕಾರಿ ಶಾಲೆಗಳು ಹಿಂದೆಂದಿ ಗಿಂತಲೂ ಉತ್ತಮವಾಗಿವೆ. ಸಮಸ್ಯೆಗಳಿಲ್ಲವೆಂದಲ್ಲ. ಮೂಲಭೂತ ಸೌಕರ್ಯಗಳ ಕೊರತೆ, ಒಂದಷ್ಟು ಶಿಕ್ಷಕರ ನಿರ್ಲಕ್ಷ, ಫಲಿತಾಂಶದ ಸಮಸ್ಯೆ ಎಲ್ಲ ಇದೆ. ಇದೆಲ್ಲವೂ ಸರಿಹೋಗಬೇಕು. ಆದರೆ ಒಂದು ಸಮಾಜದ ಉತ್ತಮೀಕರಣ್ಙವೆಂದರೆ ಹಿಡಿಯಷ್ಟು ಜನರನ್ನು ಆಕಾಶದೆತ್ತರಕ್ಕೆ ಎತ್ತಿ ಉಳಿದವರನ್ನು ಪ್ರಪಾತದಲ್ಲಿಡುವುದಲ್ಲ. ಇಡೀ ಸಮಾಜವನ್ನೇ ಅರ್ಧ ಇಂಚು ಮೇಲಕ್ಕೆ ಎತ್ತುವುದು ಸಮಾಜದ ಉತ್ತಮೀಕರಣದಲ್ಲಿ ಒಂದು ದೇಶದ ದೈತ್ಯ ಧುಮುಕೇ ಆಗಿರುತ್ತದೆ. ಏನಲ್ಲದಿದ್ದರೂ 2002ರ ನಂತರ ಸರಕಾರಿ ಶಾಲೆಗಳು, ಮೂರು ಸಾವಿರ ವರ್ಷಗಳಿಂದ ಪೂರ್ಣ ಶಿಕ್ಷಣ ಒದಗದ ಸಮಾಜಕ್ಕೆ ಪೂರ್ಣರೂಪದಲ್ಲಿ ಅ, ಆ, ಇ, ಈ ಜ್ಞಾನವನ್ನಾದರೂ ಕೊಡುತ್ತಿವೆ. ಅಲ್ಪ ಸ್ವಲ್ಪ ತಪ್ಪಿನೊಂದಿಗಾದರೂ ವಾಕ್ಯ ರಚಿಸಿ ಬರೆಯಲು, ಓದಲು ಕಲಿಸುತ್ತಿವೆ. ಯಾವುದೇ ಬೆಂಬಲವನ್ನು ಕೊಡದಿದ್ದರೂ, ಎಲ್ಲರಿಂದ ಬೈಸಿಕೊಳ್ಳುತ್ತಿರುವ ಶಿಕ್ಷಕರೇ ಈ ಸಾಧನೆಯನ್ನು ಮಾಡುತ್ತಿದ್ದಾರೆ. ಯಾರು ಬೇಕಾದರೂ ಉಗಿಯಬಹುದಾದ ಪೀಕುದಾನಿಯಂತಾಗಿರುವ ಸರಕಾರಿ ಶಾಲೆಗಳು ಕಲಿಸುವ ಸಾಮರ್ಥ್ಯವನ್ನು ಕಳೆದುಕೊಂಡಿಲ್ಲ. ಪರೀಕ್ಷಿಸಲೇ ಬೇಕು ಎಂದಿದ್ದರೆ ಯಾವುದೇ ಖಾಸಗಿ ಶಾಲೆಯ ಒಂದು ತರಗತಿಯ ಎಲ್ಲ ಮಕ್ಕಳನ್ನು ಸರಕಾರಿ ಶಾಲೆಗೂ, ಸರಕಾರಿ ಶಾಲೆಯ ಅದೇ ತರಗತಿಯ ಮಕ್ಕಳನ್ನು ಖಾಸಗಿ ಶಾಲೆಗೂ ಒಂದು ವರ್ಷದ ಮಟ್ಟಿಗೆ ವರ್ಗಾಯಿಸಿ ವರ್ಷಾಂತ್ಯದಲ್ಲಿ ವೌಲ್ಯಮಾಪನವನ್ನು ಮಾಡಿದರೆ ಕಲಿಸುವ ಸಾಮರ್ಥ್ಯ ಎಲ್ಲಿ ಜಾಸ್ತಿ ಇದೆ ಎಂದು ಗೊತ್ತಾಗುತ್ತದೆ.

Writer - ಅರವಿಂದ ಚೊಕ್ಕಾಡಿ

contributor

Editor - ಅರವಿಂದ ಚೊಕ್ಕಾಡಿ

contributor

Similar News