ಮನ ತಣಿಸುವ ಮಣಿಪಾಲದ ಮಣ್ಣಪಳ್ಳ ಪ್ರಾಕೃತಿಕ ನಿಸರ್ಗಧಾಮ

Update: 2018-02-17 18:50 GMT

ಮಣಿಪಾಲದ ಸನಿಹವೊಂದು ಪ್ರಾಕೃತಿಕವಾಗಿ ನಿರ್ಮಾಣಗೊಂಡ ದೊಡ್ಡದಾದ ಕೆರೆ ಇದೆ. ಇದು ‘ಮಣ್ಣಪಳ್ಳ ಕೆರೆ’ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಮಳೆಗಾಲದಲ್ಲಿ ಇದು ಜಲಾಶಯದಂತೆ ಕಾಣುತ್ತದೆ. ಕೆರೆಯಲ್ಲಿ ವರ್ಷ ಪೂರ್ತಿ ನೀರಿರುತ್ತದೆ ದೋಣಿ ವಿಹಾರ ನಡೆಸಲು ಬೋಟಿಂಗ್ ವ್ಯವಸ್ಥೆಯೂ ಇಲ್ಲಿದೆ.

ಒಂದು ಸಮಯದಲ್ಲಿ ಕಾಡು ಗುಡ್ಡೆಗಳ ಪ್ರದೇಶವಾಗಿದ್ದ ಮಣಿಪಾಲ, ಈಗ ಸಂಪೂರ್ಣ ಬದಲಾವಣೆಗೊಂಡು ಸುಂದರ ವಿಶ್ವ ವಿಖ್ಯಾತ ನಗರವಾಗಿ ಮಾರ್ಪಟ್ಟಿದೆ. ದೇಶ ವಿದೇಶದ ವಿದ್ಯಾರ್ಥಿಗಳು ಇಲ್ಲಿಯ ವಿದ್ಯಾ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುತ್ತಾರೆ. ಮಣಿಪಾಲ ಶಿಕ್ಷಣ ಕಾಶಿ ಎಂದು ಹೆಸರು ಪಡೆದು ಕೊಂಡಿದೆ. ನಗರದ ಹೊರವಲಯದ ಕೈಗಾರಿಕಾ ನಗರದಲ್ಲಿ ಉದ್ಯಮಗಳು ದಿನ ಬಳಕೆಯ ಪರಿಕರಗಳನ್ನು ಉತ್ಪಾದಿಸುತ್ತವೆ. ನವೀನ ಮಾದರಿಯ ಗಗನಚುಂಬಿ ಬಹುಮಹಡಿ ವಸತಿ ಸಂಕೀರ್ಣಗಳು ಮಣಿಪಾಲ ನಗರಕ್ಕೊಂದು ಶೋಭೆ ನೀಡಿವೆ.

ಮಣಿಪಾಲದ ಸನಿಹವೊಂದು ಪ್ರಾಕೃತಿಕವಾಗಿ ನಿರ್ಮಾಣಗೊಂಡ ದೊಡ್ಡದಾದ ಕೆರೆ ಇದೆ. ಇದು ‘ಮಣ್ಣಪಳ್ಳ ಕೆರೆ’ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಈಗ ಈ ಕೆರೆಯನ್ನು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿ ಪಡಿಸಿ ಪ್ರವಾಸಿ ತಾಣವಾಗಿ ಮಾರ್ಪಡಿಸಿದೆ. ಮಳೆಗಾಲದಲ್ಲಿ ಮಣ್ಣಪಳ್ಳ ಕೆರೆ ಜಲಾಶಯದಂತೆ ಕಾಣುತ್ತದೆ. ಕೆರೆಯಲ್ಲಿ ವರ್ಷ ಪೂರ್ತಿ ನೀರಿರುತ್ತದೆ ದೋಣಿ ವಿಹಾರ ನಡೆಸಲು ಬೋಟಿಂಗ್ ವ್ಯವಸ್ಥೆಯೂ ಇಲ್ಲಿದೆ. ನಿಗದಿತ ಶುಲ್ಕ ನೀಡಬೇಕಾಗಿದೆ. ಜಲ ವಿಹಾರಿಗಳಿಗೆ ಜೀವ ರಕ್ಷಕ ಕವಚಗಳನ್ನು ನೀಡುತ್ತಾರೆ.

ಕೆರೆ ದಂಡೆ ಸುತ್ತ, ವಾಯು ವಿಹಾರಿಗಳಿಗೆ ನಡೆದಾಡಲು ವಾಕಿಂಗ್ ಟ್ರಾಕ್ ಇದೆ. ಕೆರೆಗೆ ಒಂದು ಸುತ್ತು ಬಂದರೆ 3 ಕಿ.ಮೀ. ದೂರದ ನಡಿಗೆ ಆಗುತ್ತದೆ. ನಿತ್ಯವೂ ಸಾವಿರಾರು ಜನರು ಇಲ್ಲಿ ವ್ಯಾಯಾಮ ಮಾಡುತ್ತಿರುವ ದೃಶ್ಯ ಕಾಣಲು ಸಿಗುತ್ತದೆ. ಆಯಕಟ್ಟಿನ ಸ್ಥಳಗಳಲ್ಲಿ ವಿಶ್ರಾಂತಿ ಪಡೆಯಲು ಕಲ್ಲು ಬೆಂಚುಗಳನ್ನು ಇಡಲಾಗಿದೆ. ಮಕ್ಕಳ ಆಟದ ಮೈದಾನವು ಇಲ್ಲಿದೆ. ಜೋಕಾಲಿ ಜಾರು ಬಂಡಿ, ತಿರುಗು ಚಕ್ರ ಮೊದಲಾದ ಆಟಿಕೆ ಪರಿಕರಗಳು ಮೈದಾನದಲ್ಲಿವೆ. ನಗರ ಕೇಂದ್ರ ಶಾಖಾ ವಾಚನಾಲಯವು ಸನಿಹದಲ್ಲಿದೆ. ವಾಹನ ನಿಲುಗಡೆ ಮಾಡಲು ಅಚ್ಚು ಕಟ್ಟಿನ ಸ್ಥಳಾವಕಾಶವು ಇಲ್ಲಿ ಕಲ್ಪಿಸಲಾಗಿದೆ.

ಸುವ್ಯವಸ್ಥೆ ಹೊಂದಿರುವ ನಿಸರ್ಗಧಾಮ ಮಣ್ಣಪಳ್ಳದಲ್ಲಿ ನಿತ್ಯವು ಜನಜಂಗುಳಿ ಸೇರುತ್ತದೆ. ಇಲ್ಲಿ ಸ್ವಚ್ಛತೆಗೆ ಬಹಳ ಪ್ರಾಮುಖ್ಯತೆ ನೀಡಲಾಗಿದೆ. ಆಕಟ್ಟಿನ ಸ್ಥಳಗಳಲ್ಲಿ ಕಸದ ಡಬ್ಬಿಗಳನ್ನು ಇಡಲಾಗಿದೆ. ಕೆರೆಯ ಸುತ್ತಲು ಔಷಧಿ ಸಸ್ಯಗಳನ್ನು ನೆಡಲಾಗಿದೆ. ಬಲು ಅಪರೂಪದ ಸಸ್ಯ ವರ್ಗಗಳನ್ನು ಇಲ್ಲಿ ಕಾಣ ಬಹುದಾಗಿದೆ. ಸಿಮೆಂಟಿನಿಂದ ರಚಿತವಾದ ಸುಂದರವಾದ ಕಲಾಕೃತಿಗಳನ್ನು ಇಲ್ಲಿ ಇಡಲಾಗಿದೆ. ಪ್ರವಾಸಿಗರು, ವಾಯು ವಿಹಾರಿಗಳು, ನಿಸರ್ಗಪ್ರಿಯರು, ಹೃದಯ ಪ್ರೇಮಿಗಳು ಎತ್ತ ನೋಡಿದರಲ್ಲಿ ಸೆಲ್ಫೀ ಕ್ಲಿಕ್ಕಿಸುತ್ತಲೇ ಇರುತ್ತಾರೆ. ನಗರೀಕರಣಕ್ಕೆ ತುತ್ತಾದ ಮಣಿಪಾಲದಲ್ಲಿ ಪ್ರಾಕೃತಿಕ ಹಸಿರು ಸೌಂದರ್ಯ ಉಳಿದಿರುವುದು ಮಣ್ಣಪಳ್ಳ ನಿಸರ್ಗಧಾಮದಲ್ಲಿ ಮಾತ್ರ. ಬಹುವಿಧ ಪಕ್ಷಿಸಂಕುಲ ಇಲ್ಲಿ ನೆಲೆ ಕಂಡಿದೆೆ. ಚಿಲಿಪಿಲಿಗುಟ್ಟುತ್ತಾ ನಿಸರ್ಗಪ್ರಿಯರ ಮನ ತಣಿಸುತ್ತಲೇ ಇರುತ್ತವೆ. ರವಿವಾರ ಹಾಗೂ ಇತರ ಸರಕಾರಿ ರಜಾ ದಿನಗಳಲ್ಲಿ ಇಲ್ಲಿ ವಿಹಾರಿಗಳು ತುಂಬ ಜನ ಸೇರುತ್ತಾರೆ. ಮಣಿಪಾಲಕ್ಕೆ ಹೋದಾಗ, ಈ ನಿಸರ್ಗಧಾಮವನ್ನು ನೋಡದೆ ಹೋಗಲು ಸಾಧ್ಯವಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News