×
Ad

ಮಾರ್ಚ್ ಅಂತ್ಯಕ್ಕೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಬಿಡುಗಡೆ: ದಿನೇಶ್ ಗುಂಡೂರಾವ್

Update: 2018-02-18 20:49 IST

ಬೆಂಗಳೂರು, ಫೆ.18: ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯ ಸಿದ್ಧತಾ ಸಮಿತಿ ಸಭೆಯು ಫೆ.25 ರಂದು ನಡೆಯಲಿದ್ದು, ಆ ಸಭೆಯಲ್ಲಿ ಯುವಜನರ ಪ್ರಣಾಳಿಕೆಯಲ್ಲಿರುವ ಅಂಶಗಳನ್ನು ಚರ್ಚಿಸುತ್ತೇನೆ. ನಮ್ಮ ಪಕ್ಷದ ಪ್ರಣಾಳಿಕೆಯನ್ನು ಮಾರ್ಚ್ ಅಂತ್ಯಕ್ಕೆ ಬಿಡುಗಡೆ ಮಾಡಲಾಗುತ್ತದೆ ಎಂದು ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಇಂದಿಲ್ಲಿ ಹೇಳಿದ್ದಾರೆ.

ರವಿವಾರ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಉದ್ಯೋಗಕ್ಕಾಗಿ ಯುವ ಜನರು ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಯುವಜನರ ಅಧಿವೇಶನ ಹಾಗೂ ಉದ್ಯೋಗಾಂಕ್ಷಿಗಳ ಮತ್ತು ಗುತ್ತಿಗೆ ನೌಕರರ ಪ್ರತಿನಿಧಿಗಳ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ಗುತ್ತಿಗೆ ಕಾರ್ಮಿಕರಿಗೆ ಸೇವಾ ಭದ್ರತೆ ನೀಡಬೇಕು ಸೇರಿದಂತೆ ಹಲವು ಮುಖ್ಯವಾದ ಹಾಗೂ ನ್ಯಾಯಯುತವಾದ ವಿಷಯಗಳನ್ನು ಮಂಡಿಸಿದ್ದು, ಅದನ್ನು ನಮ್ಮ ಪ್ರಣಾಳಿಕಾ ಸಿದ್ಧತಾ ಸಮಿತಿಯೊಂದಿಗೆ ಚರ್ಚಿಸುತ್ತೇನೆ ಎಂದರು.

ರಾಜ್ಯದ ಬೆಳವಣಿಗೆಗೆ ಪೂರಕವಾಗಿ ರಾಜ್ಯ ಸರಕಾರ ಕೆಲಸ ನಿರ್ವಹಿಸಿದೆ ಎಂದ ಅವರು, ರಾಜ್ಯ ಸರಕಾರದ ಆರ್ಥಿಕ ಸ್ಥಿತಿಗತಿಯನ್ನು ಆಧರಿಸಿ ಉದ್ಯೋಗ ಸೃಷ್ಟಿ ಮಾಡಲಾಗುತ್ತದೆ. ಸರಕಾರವೇ ಎಲ್ಲಾ ಉದ್ಯೋಗಗಳನ್ನು ಸೃಷ್ಟಿ ಮಾಡಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಉದ್ಯೋಗ ಸೃಷ್ಟಿಯಾಗಬೇಕಾದರೆ ಸಮರ್ಪಕವಾದ ಉದ್ಯೋಗ ನೀತಿ ಬೇಕಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಈ ವಿಷಯವನ್ನು ಪ್ರಣಾಳಿಕೆಯಲ್ಲಿ ಮಂಡಿಸಲು ಮನವಿ ಮಾಡಲಾಗುತ್ತದೆ ಎಂದು ಅವರು ಹೇಳಿದರು.

ಕರ್ನಾಟಕ ಜನಶಕ್ತಿ ಮುಖಂಡ ಡಾ.ವಾಸು ಮಾತನಾಡಿ, ನಮ್ಮನ್ನು ಆಳುತ್ತಿರುವ ಸರಕಾರಗಳು ಗುತ್ತಿಗೆ ಕಾರ್ಮಿಕರನ್ನು ಜೀತದಾಳುವನ್ನಾಗಿ ಮಾಡಿಕೊಂಡು ನಕಲಿ ಪ್ರಜಾಪ್ರಭುತ್ವ ಸ್ಥಾಪಿಸಲು ಮುಂದಾಗಿದ್ದಾರೆ. ಆದರೆ, ನಾವಿಂದು ಇದನ್ನುನಿರ್ನಾಮ ಮಾಡುವ ಮೂಲಕ ನಿಜವಾದ ಪ್ರಜಾಪ್ರಭುತ್ವವನ್ನು ಕಟ್ಟಲಿಕ್ಕಾಗಿ ಈ ವೇದಿಕೆ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ರಾಜ್ಯ ಹಾಗೂ ಕೇಂದ್ರ ಸರಕಾರಗಳು ಉದ್ಯೋಗ ಸೃಷ್ಟಿ ಮಾಡುತ್ತೇವೆಂದು ಪೊಳ್ಳು ಭರವಸೆಗಳನ್ನು ನೀಡುತ್ತಾ ಬಂದಿದೆ. ಆದರೆ, ಈ ಬಾರಿಯ ಚುನಾವಣೆಯಲ್ಲಿ ಇಂ.ತಹ ಹುಸಿ ಭರವಸೆಗಳಿಗೆ ಮರುಳಾಗದೇ ನಿರಂತರ ಚಳವಳಿಯನ್ನು ರೂಪಿಸಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಬೃಹತ್ ಚಳವಳಿ ಕಟ್ಟಲಾಗುತ್ತಿದೆ ಎಂದರು.

ವೇದಿಕೆಯ ಸಂಚಾಲಕ ಮುತ್ತುರಾಜ್ ಮಾತನಾಡಿ, ಭಾರತ ಸಂಪನ್ಮೂಲ ಭರಿತ ದೇಶವಾಗಿದ್ದು, ಇಲ್ಲಿನ ಎಲ್ಲರೂ, ಸುಖ, ಶಾಂತಿ, ನೆಮ್ಮದಿಯಿಂದ ಜೀವನ ನಡೆಸಲು ಬೇಕಾದಷ್ಟು ನೈಸರ್ಗಿಕ ಸಂಪನ್ಮೂಲಗಳಿವೆ. ಆದರೆ, ನಮ್ಮನ್ನಾಳುತ್ತಿರುವವರು ಶ್ರೀಮಂತರನ್ನು ಶ್ರೀಮಂತರನ್ನಾಗಿಸುವ, ಬಡವರನ್ನು ಮತ್ತಷ್ಟು ಬಡವರನ್ನಾಗಿಸುವ ಕೆಲಸ ಮಾಡಲಾಗುತತಿದೆ. ದೇಶದಲ್ಲಿರುವ ಸಂಪನ್ಮೂಲ ಉಳ್ಳವರ ಪಾಲಾಗುತ್ತಿದೆ. ಸಂಪನ್ಮೂಲ ಸಮರ್ಪಕವಾಗಿ ಬಳಕೆಯಾದರೆ ನಿರುದ್ಯೋಗ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಹೇಳಿದರು.

ಕೃಷಿ ಹಾಗು ಅದಕ್ಕೆ ಪೂರಕವಾದ ಉದ್ಯೋಗ ಸೃಷ್ಟಿಸಲು ಸಾಧ್ಯವಿದೆ. ಎಲ್ಲರಿಗೂ ಸಮಾನ ವೇತನ ಹಾಗೂ ಸೇವಾ ಭದ್ರತೆ ನೀಡಬೇಕು. ಸರಕಾರಿ ಇಲಾಖೆಗಳಲ್ಲಿ ಖಾಲಿಯಿರುವ 1 ಲಕ್ಷಕ್ಕೂ ಅಧಿಕ ಹುದ್ದೆಗಳನ್ನು ಭರ್ತಿ ಮಾಡಬೇಕು. ಸ್ವ ಉದ್ಯೋಗ ಮಾಡುವವರಿಗೆ ಸಾಲ ಸೌಲಭ್ಯ ನೀಡಬೇಕು ಸೇರಿದಂತೆ ಇನ್ನಿತರೆ ಅಂಶಗಳು ಪ್ರಣಾಳಿಕೆಯಲ್ಲಿ ಒಳಗೊಂಡಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಪ್ರೊ.ಅಮಿತ್ ಬಾಸೋಲೆ, ರೈತ ಸಂಘದ ಮುಖಂಡರಾದ ಚುಕ್ಕಿನಂಜುಂಡಸ್ವಾಮಿ, ಬರಹಗಾರ ಕೆ.ಪಿ.ಸುರೇಶ್, ವೇದಿಕೆ ಸಂಚಾಲಕ ಸರೋವರ್ ಬೆಂಕಿಕೆರೆ, ಸಹ ಪ್ರಾಧ್ಯಾಪಕ ಪ್ರೊ.ನಾಗೇಗೌಡ ಕೀಲಾರ, ಜ.ಬೋ.ಮಂಜುನಾಥ, ಪುಟ್ಟಸ್ವಾಮಿ, ಡಾ.ಸ್ವಾಮಿ, ಮಹೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನಾಲ್ಕು ಮುಖ್ಯ ಆದ್ಯತೆಗಳಲ್ಲಿ ಉದ್ಯೋಗದ ಪ್ರಸ್ತಾಪ ಮಾಡಿದ್ದಾರೆ. ಪ್ರಧಾನಿ ಮೋದಿ ಟಿವಿ ಸಂದರ್ಶನವೊಂದರಲ್ಲಿ ನಿರುದ್ಯೋಗ ಸಮಸ್ಯೆ ಬಗ್ಗೆ ಮಾತನಾಡುತ್ತಾರೆ. ಎಚ್‌ಡಿಕೆ ಸೇರಿದಂತೆ ಹಲವು ನಾಯಕರು ಉದ್ಯೋಗದ ಸಮಸ್ಯೆ ಬಗ್ಗೆ ಮಾತನಾಡುತ್ತಾರೆ. ಆದರೆ, ಯಾವ ಪಕ್ಷವೂ ಈ ಸಮಸ್ಯೆ ನಿವಾರಣೆಗೆ ಬೇಕಾದ ಯೋಜನೆ ರೂಪಿಸಿಲ್ಲ. ಆದುದರಿಂದ ಮಾ.25 ರಂದು ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಯಾರಿಗೆ ಮತ ಹಾಕಬೇಕು ಎಂದು ತೀರ್ಮಾನ ಮಾಡುತ್ತೇವೆ
- ಡಾ.ಎಚ್.ವಿ.ವಾಸು, ಕರ್ನಾಟಕ ಜನಶಕ್ತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News