ಶಾಸಕ ಹಾರಿಸ್ ಪುತ್ರನ ಮೇಲೆ ಪ್ರಕರಣ ದಾಖಲು

Update: 2018-02-18 16:27 GMT

ಬೆಂಗಳೂರು, ಫೆ.18: ಶಾಂತಿನಗರ ಕ್ಷೇತ್ರದ ಶಾಸಕ ಎನ್.ಎ.ಹಾರೀಸ್ ಅವರ ಪುತ್ರ ಮುಹಮ್ಮದ್ ನಲಪಾಡ್ ಹಾಗೂ ಸ್ನೇಹಿತರು ಯುವಕನೊರ್ವನ ಮೇಲೆ ಗಂಭೀರ ಹಲ್ಲೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಕಬನ್‌ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ಡಾಲರ್ಸ್ ಕಾಲೋನಿಯ ಯುವಕ ವಿದ್ವತ್ ಹಲ್ಲೆಗೊಳಗಾಗಿದ್ದು, ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಶನಿವಾರ ರಾತ್ರಿ 11ರ ಸುಮಾರಿಗೆ ಯುಬಿ ಸಿಟಿಯಲ್ಲಿರುವ ರೆಸ್ಟೋರೆಂಟ್‌ನಲ್ಲಿ ಊಟ ಮಾಡುವ ವಿಷಯದಲ್ಲಿ ಪರಸ್ಪರ ಮಾತು ಬೆಳೆದಿದ್ದು, ಆರೋಪಿ ಮುಹಮ್ಮದ್ ನಲಪಾಡ್ ಹಾಗೂ ಸ್ನೇಹಿತರು ಯುವಕನ ಮೇಲೆ ಗಂಭೀರವಾಗಿ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಅಪಘಾತವೊಂದರಲ್ಲಿ ಈ ಮೊದಲೆ ಒಂದು ಕಾಲು ಮುರಿದುಕೊಂಡಿರುವ ಯುವಕನ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದು, ಕಣ್ಣು ಹಾಗೂ ಮುಖಕ್ಕೆ ಗಂಭೀರ ಗಾಯ ಮಾಡಿದ್ದಾರೆ. ಈ ಸಂಬಂಧ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಶೋಧಕಾರ್ಯ ನಡೆಸುತಿದ್ದಾರೆ.

ಶಾಸಕ ಹಾರೀಸ್ ಕ್ಷಮೆ: ಹಲ್ಲೆ ಪ್ರಕರಣ ತಿಳಿಯುತ್ತಿದ್ದಂತೆ ಶಾಸಕ ಎನ್.ಎ.ಹಾರೀಸ್ ಮಲ್ಯ ಆಸ್ಪತ್ರೆಗೆ ತೆರಳಿ ಹಲ್ಲೆಗೊಳಗಾದ ಯುವಕನನ್ನು ಭೇಟಿ ಸಾಂತ್ವಾನ ಹೇಳಿದರು. ಅಲ್ಲದೆ, ಘಟನೆಗೆ ಸಂಬಂಧಿಸಿದಂತೆ ಕ್ಷಮೆಯಾಚಿಸಿದ್ದಾರೆ. ಅಲ್ಲದೆ, ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಸಂಬಂಧ ಪೊಲೀಸರಿಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

ಗೃಹ ಸಚಿವ ರಾಮಲಿಂಗಾರೆಡ್ಡಿ, ಘಟನೆ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ತರಿಸಿಕೊಂಡಿದ್ದು, ಶೀಘ್ರದಲ್ಲೆ ಆರೋಪಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಅದರನ್ವಯ, ರವಿವಾರ ಸಂಜೆ ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವ ಸಂಬಂಧ ಚರ್ಚೆ ನಡೆಸಿದ್ದಾರೆ.

ಪ್ರಕರಣದ ಕುರಿತು ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ಪ್ರಮುಖ ಆರೋಪಿ ಮುಹಮ್ಮದ್ ನಲಪಾಡ್ ಬಂಧನ ಇನ್ನು ಸಾಧ್ಯವಾಗಿಲ್ಲ. ಈ ಪ್ರಕರಣವು ರಾಜಕೀಯ ತಿರುವು ಪಡೆದುಕೊಂಡಿದ್ದು ಪ್ರತಿಪಕ್ಷ ಬಿಜೆಪಿ, ಎಎಪಿ ಶಾಸಕ ಹಾರೀಸ್ ರಾಜೀನಾಮೆಗೆ ಒತ್ತಾಯಿಸಿ, ಅವರ ನಿವಾಸದ ಎದುರು ಪ್ರತಿಭಟನೆ ನಡೆಸಿವೆ.

ಇದೇ ಸಂದರ್ಭದಲ್ಲಿ ಕೆಲವು ಕಾಂಗ್ರೆಸ್ ಕಾರ್ಯಕರ್ತರು, ಪೊಲೀಸರ ಸಮ್ಮುಖದಲ್ಲೆ ಪ್ರತಿಭಟನಾ ನಿರತರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News