ಮೇ 31ರೊಳಗೆ ಮೀಸಲು ಕಲ್ಪಿಸಿ ಅಧಿಸೂಚನೆ ಹೊರಡಿಸಲಾಗುವುದು: ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಕೆ

Update: 2018-02-18 16:37 GMT

ಬೆಂಗಳೂರು, ಫೆ.18: ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ 2018ರ ಮೇ.31ರೊಳಗೆ ವಾರ್ಡ್ ಮರು ವಿಂಗಡಣೆ ಹಾಗೂ ಮೀಸಲು ಕಲ್ಪಿಸಿ ಅಧಿಸೂಚನೆ ಹೊರಡಿಸಲಾಗುವುದು ಎಂದು ರಾಜ್ಯ ಸರಕಾರ ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದೆ.

ರಾಜ್ಯದ 218 ಸ್ಥಳೀಯ ಸಂಸ್ಥೆಗಳ ಚುನಾವಣೆಗಾಗಿ ವಾರ್ಡ್ ಮರು ವಿಂಗಡಣೆ ಮಾಡದ ಹಾಗೂ ಮೀಸಲು ಪ್ರಕಟಿಸದ ರಾಜ್ಯ ಸರಕಾರದ ಕ್ರಮ ಪ್ರಶ್ನಿಸಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಬಿ.ಎಂ. ಶ್ಯಾಂ ಪ್ರಸಾದ್ ಅವರಿದ್ದ ಪೀಠದಲ್ಲಿ ನಡೆಯಿತು.

ಈ ವೇಳೆ, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಅಂಜುಮ್ ಪರ್ವೇಜ್ ಅವರ ಪ್ರಮಾಣ ಪತ್ರವನ್ನು ಸರಕಾರಿ ವಕೀಲರು ನ್ಯಾಯಪೀಠಕ್ಕೆ ಸಲ್ಲಿಸಿದರು. ಇದೇ ಮಾರ್ಚ್ 31ರೊಳಗೆ 18 ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್ ಮರು ವಿಂಗಡಣೆ ಮಾಡಿ ಅಧಿಸೂಚನೆ ಹೊರಡಿಸಲಾಗುವುದು. ಎಪ್ರಿಲ್ 30ರ ಒಳಗೆ 10 ಮಹಾನಗರ ಪಾಲಿಕೆ, 57 ನಗರ ಸಭೆ, 97 ಪುರಸಭೆ ಹಾಗೂ 51 ಪಟ್ಟಣ ಪಂಚಾಯಿತಿಗಳಿಗೆ ವಾರ್ಡ್‌ವಾರು ಮೀಸಲು ಕಲ್ಪಿಸಿ ಅಧಿಸೂಚನೆ ಹೊರಡಿಸಲಾಗುವುದು. ಮೇ.31ರೊಳಗೆ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಮೇಯರ್ ಸ್ಥಾನಗಳಿಗೆ ರೋಸ್ಟರ್ ಪ್ರಕಾರ ಮೀಸಲು ಕಲ್ಪಿಸಿ ಅಧಿಸೂಚನೆ ಹೊರಡಿಸಲಾಗುವುದು ಎಂದು ಪ್ರಮಾಣಪತ್ರದಲ್ಲಿ ವಿವರಿಸಲಾಗಿದೆ.

ಈ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳ ಪ್ರಮಾಣಪತ್ರವನ್ನು ದಾಖಲಿಸಿಕೊಂಡ ನ್ಯಾಯಪೀಠ, ಪ್ರಮಾಣಪತ್ರದಲ್ಲಿ ತಿಳಿಸಿರುವಂತೆ ಮಾರ್ಚ್ 31ರೊಳಗೆ ವಾರ್ಡ್ ಮರುವಿಂಗಡಣೆ ಮಾಡಿ. ಆ ನಂತರ ಅರ್ಜಿ ಇತ್ಯರ್ಥಪಡಿಸುವ ಕುರಿತು ನಿರ್ಧರಿಸೋಣವೆಂದು ಸರಕಾರಿ ವಕೀಲರಿಗೆ ಸೂಚಿಸಿ, ಅರ್ಜಿ ವಿಚಾರಣೆಯನ್ನು ಎ.2ಕ್ಕೆ ಮುಂದೂಡಿತು.

ಪ್ರಕರಣವೇನು: ರಾಜ್ಯದ ವಿವಿಧ ನಗರ ಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್ ಗಳ ಚುನಾವಣೆ ನಡೆಸಲು ಅನುಕೂಲವಾಗುವಂತೆ ರಾಜ್ಯ ಸರಕಾರ ವಾರ್ಡ್ ಮರು ವಿಂಗಡಣೆ ಮಾಡಿ ಮತ್ತು ಮೀಸಲು ಕಲ್ಪಿಸಲು ಅದರ ಪಟ್ಟಿಯನ್ನು ಆಯೋಗಕ್ಕೆ ನೀಡಬೇಕಿದೆ. ಮೊದಲ ಹಂತದಲ್ಲಿ 116 ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು 2018ರ ಜುಲೈ, ಎರಡನೇ ಹಂತದಲ್ಲಿ 98 ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು 2019ರ ಅಂತ್ಯದೊಳಗೆ ಮತ್ತು ಉಳಿದ ನಾಲ್ಕು ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು 2019ರ ಆಗಸ್ಟ್-ಸೆಪ್ಟೆಂಬರ್ ನಡುವೆ ನಡೆಸಲು ಚುನಾವಣಾ ಆಯೋಗ ಉದ್ದೇಶಿಸಿದೆ. ಚುನಾವಣೆಗಳನ್ನು ನಡೆಸಲು ವಾರ್ಡ್‌ಗಳ ಮರು ವಿಂಗಡಣೆ ಮತ್ತು ಮೀಸಲು ಪಟ್ಟಿಯನ್ನು ರಾಜ್ಯ ಸರಕಾರ ಸಕಾಲದಲ್ಲಿ ನೀಡಬೇಕಿದೆ. ಆದರೆ, ಚುನಾವಣಾ ಪಟ್ಟಿ ಒದಗಿಸುವಂತೆ ಕೋರಿ ಆಯೋಗವು 2017ರ ಜ.18ರಿಂದ ಸರಕಾರಕ್ಕೆ ಹಲವು ಬಾರಿ ಪತ್ರ ಬರೆದಿದೆ. ಆದರೆ, ಸರಕಾರ ಮಾತ್ರ ಈವರೆಗೆ ಮರು ವಿಂಗಡಣೆ ಹಾಗೂ ಮೀಸಲನ್ನು ಅಂತಿಮಗೊಳಿಸಿ ಆಯೋಗಕ್ಕೆ ಪಟ್ಟಿ ನೀಡುತ್ತಿಲ್ಲ ಎಂದು ಆರೋಪಿಸಿ ಚುನಾವಣಾ ಆಯೋಗ ಹೈಕೋರ್ಟ್ ಮೆಟ್ಟಿಲೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News