ಪಕ್ಷಗಳ ಮೈತ್ರಿಯಿಂದ ಕಾಂಗ್ರೆಸ್ ಮೇಲೆ ಪರಿಣಾಮವಿಲ್ಲ: ಕೆ.ಜೆ.ಜಾರ್ಜ್

Update: 2018-02-18 16:40 GMT

ಬೆಂಗಳೂರು, ಫೆ.18: ರಾಜ್ಯದಲ್ಲಿ ಯಾವುದೇ ಪಕ್ಷಗಳು ಮೈತ್ರಿಮಾಡಿಕೊಂಡರು, ಮುಂಬರುವ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.

ರವಿವಾರ ನಗರದ ಗಾಂಧಿನಗರ ವಾರ್ಡ್ ನಂ.94 ಲಕ್ಷ್ಮಣಪುರಿ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದ ಅವರು, ಬಡತನ ನಿರ್ಮೂಲನೆಗಾಗಿ ಇಂದಿರಾಗಾಂಧಿಯವರು ಅನುಷ್ಠಾನಕ್ಕೆ ತಂದ 20 ಅಂಶಗಳ ಕಾರ್ಯಕ್ರಮ ಜನರಿಗೆ ಹತ್ತಿರವಾಗಿದ್ದವು ಎಂದರು. ಅದೇ ರೀತಿ, ಕಳೆದ ನಾಲ್ಕೂವರೆ ವರ್ಷಗಳಲ್ಲಿ ನಮ್ಮ ಸರಕಾರ ಕೈಗೊಂಡ ಜನಪರ ಯೋಜನೆಗಳು ನಮ್ಮ ಕೈಹಿಡಿಯಲಿದ್ದು, ಚುನಾವಣೆಯಲ್ಲಿ ಯಾವುದೇ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡರು ಕಾಂಗ್ರೆಸ್ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಅಹಿಂದ ಮತ್ತು ಬಡಜನರ ಪರವಾದ ಬಜೆಟ್ ನೀಡಿದ್ದೇವೆ. ಶತಮಾನಗಳಿಂದ ಶೋಷಣೆಗೆ ಒಳಗಾದವರನ್ನು ಕಾಂಗ್ರೆಸ್ ಸರಕಾರ ಸಬಲೀಕರಣಗೊಳಿಸಿದೆ. ಅನ್ನಭಾಗ್ಯ ಯೋಜನೆಯನ್ನು ರಾಜ್ಯಾದ್ಯಂತ ಸಮರ್ಪಕವಾಗಿ ಜಾರಿಗೆ ತಂದು ರಾಜ್ಯವನ್ನು ಹಸಿವು ಮುಕ್ತಗೊಳಿಸಿದ್ದೇವೆ ಎಂದು ಜಾರ್ಜ್ ಹೇಳಿದರು.

ಕಾವೇರಿ ನದಿ ನೀರು ಹಂಚಿಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಿಂದ ಬೆಂಗಳೂರು ನಗರಕ್ಕೆ ಹೆಚ್ಚು ನೀರು ದೊರೆಯಲಿದ್ದು, ಭವಿಷ್ಯದಲ್ಲಿ ನೀರಿನ ಸಮಸ್ಯೆ ಉದ್ಭವಿಸದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಜಾರ್ಜ್ ತಿಳಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ರಾಜ್ಯ ಬಿಜೆಪಿಯಲ್ಲಿ ವರ್ಚಸ್ಸಿನ ನಾಯಕರಿಲ್ಲದಿರುವುದರಿಂದ ಪದೇ ಪದೇ ಅಮಿತ್ ಶಾ, ಪ್ರಧಾನಿ ಮೋದಿ ರಾಜ್ಯಕ್ಕೆ ಬರುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ದಕ್ಷಿಣ ಕನ್ನಡ, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯವರು ಬಿಟ್ಟರೆ, ಇನ್ನುಳಿದ ಜಿಲ್ಲೆಯವರಿಗೆ ಸರಿಯಾಗಿ ಕನ್ನಡ ಮಾತನಾಡಲು ಬರುವುದಿಲ್ಲ ಎಂಬ ಬೇಜವಾಬ್ದಾರಿ ಹೇಳಿಕೆ ನೀಡಿರುವ ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗಡೆ ರಾಜ್ಯದ ಜನತೆಯನ್ನು ಅವಮಾನಿಸಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕೊಳಚೆ ನಿರ್ಮೂಲನೆ ಮಂಡಳಿವತಿಯಿಂದ ಲಕ್ಷ್ಮಣಪುರಿಯ ಸುಮಾರು 500 ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಬಿಬಿಎಂಪಿ ಸದಸ್ಯ ಎಸ್.ನಟರಾಜ್, ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News