ಯೋಧರಿಗಿಂತ ಪೌರಕಾರ್ಮಿಕರ ಸಾವಿನ ಸಂಖ್ಯೆ ಹೆಚ್ಚಳ: ನಾಗೇಶ್ ಹೆಗಡೆ
ಬೆಂಗಳೂರು, ಫೆ.18: ಗಡಿಯಲ್ಲಿ ಯೋಧರು ಸಾಯುವುದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಪೌರಕಾರ್ಮಿಕರು ನಗರಗಳಲ್ಲಿರುವ ಚರಂಡಿಯಲ್ಲಿ ವಿಷ ಅನಿಲಕ್ಕೆ ಸಿಲುಕಿ ಸಾಯುತ್ತಿದ್ದಾರೆ. ಈ ಸಾವಿಗೆ ಕಾರಣವಾಗುವ ವಿಷ ಅನಿಲವನ್ನು ಪತ್ತೆ ಮಾಡುವಂತಹ ಸಣ್ಣ ಉಪಕರಣವನ್ನು ಪೌರಕಾರ್ಮಿಕರಿಗೆ ಒದಗಿಸಲು ಯಾರು ಮುಂದಾಗುತ್ತಿಲ್ಲವೆಂದು ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ ವಿಷಾಧಿಸಿದರು.
ರವಿವಾರ ದೇವಗೀತಂ ಚಾರಿಟಬಲ್ ಟ್ರಸ್ಟ್ ನಗರದ ವಾಡಿಯಾ ಸಭಾಂಗಣದಲ್ಲಿ ಆಯೋಜಿಸಿದ್ದ ಹಿರಿಯ ಪತ್ರಕರ್ತ ನಾರಾಯಣ ದತ್ತ ಸ್ಮಾರಕ ಉಪನ್ಯಾಸ ಪ್ರಯುಕ್ತ ‘ವಿಜ್ಞಾನ ದೀಪದರ್ಶನ ಯಾರಿಂದ ಎಷ್ಟೆಷ್ಟು’ ವಿಷಯದ ಕುರಿತು ಅವರು ಮಾತನಾಡಿದರು.
ಭಾರತ ವಿಜ್ಞಾನ- ತಂತ್ರಜ್ಞಾನದಲ್ಲಿ ಮುಂಚೂಣಿಯತ್ತ ದಾಪುಗಾಲಿಡುತ್ತಿದೆ. ವಿಶ್ವವೆ ಬೆರಗಾಗಿ ನೋಡುವಂತೆ ಅತ್ಯಂತ ಕಡಿಮೆ ದರದಲ್ಲಿ ಮಂಗಳಗ್ರಹಕ್ಕೆ ವ್ಯೋಮ ನೌಕೆಯನ್ನು ಹಾರಿಸಿದ್ದೇವೆ.ಆ ನೌಕೆಯಲ್ಲಿ ಅಳವಡಿಸಿರುವ ತಂತ್ರಜ್ಞಾವು ನೌಕೆಯಿಂದ 40ಸಾವಿರ ದೂರದಲ್ಲಿರುವ ಮಂಗಳ ಗ್ರಹದಲ್ಲಿ ಏನೆಲ್ಲ ಇದೆ ಎಂಬುದನ್ನು ಶೋಧಿಸಲಾಗುತ್ತದೆ. ಇಷ್ಟೆಲ್ಲ ತಂತ್ರಜ್ಞಾನ ನಮ್ಮಲ್ಲಿ ಇರುವಾಗ ಪೌರಕಾರ್ಮಿಕರ ಕೆಲಸಕ್ಕೆ ಅನುಕೂಲವಾಗುಂತಹ ತಂತ್ರಜ್ಞಾನ ತಯಾರಿಸಿ ಅವರ ಕೈಗೆ ಇಡುತ್ತಿಲ್ಲವೆಂದು ಅವರು ಬೇಸರ ವ್ಯಕ್ತಪಡಿಸಿದರು.
ಇವತ್ತಿನ ತಂತ್ರಜ್ಞಾನ ಕ್ಷೇತ್ರವನ್ನು ಬಂಡವಾಳಶಾಹಿಗಳು ಆವರಿಸಿಕೊಂಡಿದ್ದಾರೆ. ತಮ್ಮ ಉತ್ಪನ್ನಗಳ ಉತ್ಪಾದನೆ ಹಾಗೂ ಪ್ರಚಾರಕ್ಕೆ ಅನುಕೂಲವಾಗುವಷ್ಟಕ್ಕೆ ಮಾತ್ರ ವಿಜ್ಞಾನ-ತಂತ್ರಜ್ಞಾನ ಸೀಮಿತಗೊಳಿಸಲಾಗಿದೆ. ಇವತ್ತಿನ ಬಹುತೇಕ ಮಂದಿ ವಿಜ್ಞಾನಿಗಳು-ತಂತ್ರಜ್ಞರು ಬಂಡವಾಳಶಾಹಿಗಳ ಚಿಂತನೆಗಳ ಚೌಕಟ್ಟನ್ನು ಮೀರಿ ಚಿಂತಿಸುತ್ತಿಲ್ಲ. ಇಂತಹ ವ್ಯವಸ್ಥೆ ಬದಲಾಗಲೇಬೇಕಾಗಿದೆ ಎಂದು ಅವರು ಆಶಿಸಿದರು.
ಅಮೇರಿಕಾ, ರಶ್ಯಾ, ದಕ್ಷಿಣ ಕೋರಿಯಾ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳು ವಿಜ್ಞಾನ ಕ್ಷೇತ್ರಕ್ಕೆ ಶೇ.3ಕ್ಕಿಂತ ಹೆಚ್ಚು ಅನುದಾನ ನೀಡುತ್ತಿವೆ. ಆದರೆ, ಭಾರತದಲ್ಲಿ ಶೇ.0.8ರಷ್ಟು ಅನುದಾನ ನೀಡಲಾಗುತ್ತಿದೆ. ಈ ಅನುದಾನ ಹೆಚ್ಚಳ ಆಗುವ ನಿಟ್ಟಿನಲ್ಲಿ ಸಾರ್ವಜನಿಕರು ಸರಕಾರದ ಮೇಲೆ ಒತ್ತಡ ತರಬೇಕಾಗಿದೆ ಎಂದು ಅವರು ಹೇಳಿದರು.
ಇವತ್ತಿನ ದಿನನಿತ್ಯದ ಬದುಕಿಗೆ ಅಗತ್ಯವಾದ ಸಾಮಾಗ್ರಿಗಳಿಂದ ಹಿಡಿದು ದೇಶದ ಅಭಿವೃದ್ಧಿಗೆ ಉಪಯುಕ್ತವಾದ ಉಪಕರಣಗಳನ್ನು ತಯಾರಿಸಲು ವಿಜ್ಞಾನದ ಅವಿಷ್ಕಾರಗಳು ಅಗತ್ಯವಾಗಿದೆ. ಆದರೆ, ಅದಕ್ಕೆ ಬೇಕಾದ ಮಾನವ ಸಂಪನ್ಮೂಲ ಕೊರತೆಯಿದೆ. ಹೀಗಾಗಿ ವಿದ್ಯಾರ್ಥಿಗಳು ವಿಜ್ಞಾನ ಕ್ಷೇತ್ರದತ್ತ ಹೆಚ್ಚು ಗಮನ ವಹಿಸಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಲೇಖಕ ಡಾ.ಜೆ.ಭಾಸ್ಕರ ಮಯ್ಯ ಅನುವಾದಿಸಿರುವ ‘ಮಾರ್ಗದರ್ಶಕ ಆಚಾರ್ಯ ಸಂಪಾದಕ ಶ್ರೀ ನಾರಾಯಣ ದತ್ತ’ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಈ ವೇಳೆ ಪ್ರೊ.ಪಿ.ಶ್ರೀಪತಿ ತಂತ್ರಿ, ಅಭಿನವ ಪ್ರಕಾಶನದ ರವಿಕುಮಾರ್ ಮತ್ತಿತರರಿದ್ದರು.
ಇವತ್ತು ಮಹಾದಾಯಿ ನೀರಿಗಾಗಿ ಅಲ್ಲಿನ ಜನತೆ ವರ್ಷಾನುಗಟ್ಟಲೆ ಹೋರಾಟ ಮಾಡುತ್ತಿದ್ದಾರೆ. ಅಂತಹ ಹೋರಾಟಗಳನ್ನು ನಾನು ಬೆಂಬಲಿಸುತ್ತಲೆ ಹೇಳುವುದಾದರೆ, ಹುಬ್ಬಳಿ ಸಮೀಪವೆ ಪೆಪ್ಸಿ ಕಂಪೆನಿ ಇದ್ದು, ಇದು ಪ್ರತಿ ದಿನಕ್ಕೆ ಬಳಸುವ ನೀರು 16ಸಾವಿರ ಮನೆಗಳಿಗೆ ದಿನನಿತ್ಯ ಉಪಯುಕ್ತ ಬರುತ್ತದೆ. ಇದರತ್ತ ಯಾರು ಗಮನಿಸುವುದಿಲ್ಲ. ಹಾಗೆಯೆ ಅಲ್ಲಿನ ಸುತ್ತಮುತ್ತಲಿನ ಕೆರೆಗಳನ್ನು ಪುನರ್‌ಶ್ಚೇತನಗೊಳಿಸುವುದು ಹಾಗೂ ನಾವು ಬಳಸಿದ ನೀರನ್ನು ಪುನರ್ ಸಂಸ್ಕರಣೆ ಮಾಡಿ ಬಳಸುವಂತಹ ಕಾರ್ಯಕ್ಕೆ ಮುಂದಾಗಬೇಕಾಗಿದೆ.
ನಾಗೇಶ್ ಹೆಗಡೆ, ವಿಜ್ಞಾನ ಬರಹಗಾರರು