ಸಾರ್ವಜನಿಕ ಉದ್ಯಮದ ನಾಶಕ್ಕೆ ಮೋದಿ ಸರಕಾರ ಶ್ರಮಿಸುತ್ತಿದೆ: ಡಾ.ಸಂಜೀವ್‌ರೆಡ್ಡಿ
ಬೆಂಗಳೂರು, ಫೆ.18: ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕ ಉದ್ಯಮಗಳ ಬೆಳವಣಿಗೆಗೆ ಆದ್ಯತೆಯನ್ನು ನೀಡದೇ, ಖಾಸಗಿ ಉದ್ಯಮಗಳನ್ನು ಬೆಳೆಸಲು ಶ್ರಮಿಸುತ್ತಿದ್ದಾರೆ ಎಂದು ಐಎನ್‌ಟಿಯುಸಿ ರಾಷ್ಟ್ರೀಯ ಅಧ್ಯಕ್ಷ ಡಾ.ಸಂಜೀವ್‌ರೆಡ್ಡಿ ಆರೋಪಿಸಿದ್ದಾರೆ.
ರವಿವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಐಎನ್‌ಟಿಯುಸಿ ಆಯೋಜಿಸಿದ್ದ ರಾಜ್ಯ ಮಟ್ಟದ ಇಂಟಕ್ ಸಮಾವೇಶ ಮತ್ತು ಸಂಜೀವ್‌ರೆಡ್ಡಿ ಅವರ 88ನೆ ಹುಟ್ಟುಹಬ್ಬದ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕರ್ನಾಟಕದ ಹೆಮ್ಮೆಯಾಗಿರುವ ಬಿಇಎಲ್, ಬಿಇಎಂಎಲ್ ಹಾಗೂ ಭದ್ರಾವತಿ ಉಕ್ಕಿನ ಕಾರ್ಖಾನೆಗಳನ್ನು ಖಾಸಗಿ ಉದ್ಯಮಿಗಳಿಗೆ ಮಾರಲು ತಯಾರಾಗಿದ್ದು, ಇದರಿಂದ, ಕರ್ನಾಟಕ ಸೇರಿ ಇಡೀ ದೇಶದಲ್ಲಿಯೆ ನಿರುದ್ಯೋಗ ಹೆಚ್ಚುವಂತಾಗಿದೆ ಎಂದು ಹೇಳಿದರು.
ಕಳೆದ ಲೋಕಸಭಾ ಚುನಾವಣೆ ವೇಳೆ ಮೋದಿ ಅವರು ವಿದೇಶದಲ್ಲಿಯಿರುವ ಕಪ್ಪು ಹಣವನ್ನು ಭಾರತಕ್ಕೆ ತಂದು ಪ್ರತಿ ಅಕೌಂಟ್‌ಗೆ 15 ಲಕ್ಷ ರೂ.ಹಾಕುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ, ಮೋದಿ ಅಧಿಕಾರಕ್ಕೆ ಬಂದರೂ ನಮ್ಮ ಯಾವ ಅಕೌಂಟ್‌ಗೂ 15 ರೂಪಾಯಿಯಷ್ಟು ಹಣವೂ ಬರಲಿಲ್ಲ ಎಂದು ಕಿಡಿಕಾರಿದರು.
ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಠಿಸಲಾಗುವುದುಯೆಂದು ಭರವಸೆ ನೀಡಿದ್ದ ಮೋದಿ, ಯಾವ ಉದ್ಯೋಗವನ್ನು ಸೃಷ್ಠಿಸಲಿಲ್ಲ. ಬದಲಾಗಿ, ದೇಶದ ಮೊದಲ ಪ್ರಧಾನಿ ನೆಹರೂ ಆಧುನಿಕ ದೇವಾಲಯಗಳು ಎಂದು ಕರೆದಿದ್ದ ಸಾರ್ವಜನಿಕ ಉದ್ಯಮಗಳನ್ನು ನಾಶ ಮಾಡಲು ಹೊರಟಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಕಾರ್ಯಕರ್ತರಿಂದಲೇ ಬೆಳೆದಿದ್ದು, ಈ ಪಕ್ಷ ಎಲ್ಲ ವರ್ಗದವರಿಗೂ ಆಸರೆಯಾಗಿದೆ. ಅಲ್ಲದೆ, ಇಂದಿರಾಗಾಂಧಿ, ರಾಜೀವ್‌ಗಾಂಧಿ, ಮನಮೋಹನ್‌ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಬಡತನ, ನಿರುದ್ಯೋಗವನ್ನು ಹೋಗಲಾಡಿಸಿ ದೇಶವನ್ನು ಅಭಿವೃದ್ಧಿಪಥದತ್ತ ಸಾಗುವಂತೆ ಮಾಡಿದ್ದು ಎಂದು ಹೇಳಿದರು.
ಗೃಹ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಐಎನ್‌ಟಿಯುಸಿ ರಾಷ್ಟ್ರೀಯ ಅಧ್ಯಕ್ಷ ಡಾ.ಸಂಜೀವ್‌ರೆಡ್ಡಿ ಅವರ 88ನೆ ಹುಟ್ಟು ಹಬ್ಬವನ್ನು ಆಚರಿಸುತ್ತಿರುವುದು ಖುಷಿ ಬಹಳ ಖುಷಿ ತಂದಿದ್ದು, ಅವರು ನಮ್ಮಿಂದಿಗೆ 100 ವರ್ಷ ಕಾಲ ಇರಬೇಕೆಂದು ಹೇಳಿದರು.
ಐಎನ್‌ಟಿಯುಸಿ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ, ಯಂಗ್ ಇಂಟಕ್ ರಾಷ್ಟ್ರೀಯ ಅಧ್ಯಕ್ಷ ಸಂಜಯ್ ಗಾಬಾ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಐಎನ್‌ಟಿಯುಸಿ ಮಾಜಿ ರಾಜ್ಯಾಧ್ಯಕ್ಷ ಅಡ್ಯಂತಯ್ಯ ಉಪಸ್ಥಿತರಿದ್ದರು.