ಅಡಿಗರು ನಾಡು ಕಂಡ ಶ್ರೇಷ್ಟಕವಿ: ಲಕ್ಷ್ಮಿನಾರಾಯಣ ಭಟ್ಟ

Update: 2018-02-18 17:10 GMT

ಬೆಂಗಳೂರು, ಫೆ.18: ಕಳೆದ ಶತಮಾನದ ಕನ್ನಡ ಕಾವ್ಯದಲ್ಲಿ ಕಾಣಿಸಿಕೊಂಡ ಶ್ರೇಷ್ಠಕವಿ ಗೋಪಾಲಕೃಷ್ಣ ಅಡಿಗರವರು ಕಾವ್ಯಕ್ಕೆ ಹೊಸತನವನ್ನು ತಂದು ಕೊಡುವ ಮೂಲಕ ಯುವಜನತೆಗೆ ಅಚ್ಚುಮೆಚ್ಚಿನ ಕವಿಯಾಗಿದ್ದರು ಎಂದು ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ ಹೇಳಿದರು.

ರವಿವಾರ ನಗರದ ದಯಾನಂದ ಸಾಗರ ಶಿಕ್ಷಣ ಸಂಸ್ಥೆಯ ಸಿಡಿ ಸಾಗರ ಸಭಾಂಗಣದಲ್ಲಿ ಆಯೋಜಿಸಿದ್ದ, ಗೋಪಾಲಕೃಷ್ಣ ಅಡಿಗರ ದಶಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಅಡಿಗರು ಯುವಜನತೆ ಮನಸ್ಥಿತಿಗೊಪ್ಪುವ ಪ್ರಾಕಾರಗಳಲ್ಲಿ ಕಾವ್ಯಗಳನ್ನು ರಚಿಸಿ, ಕಾವ್ಯಕ್ಕೆ ಹೊಸ ಆಯಾಮ ನೀಡಿದ್ದರು ಎಂದರು.

ಕಾಲದಲ್ಲಿ ಕನ್ನಡ ಸಾಹಿತ್ಯಕ್ಕೆ ಹೊಸತನ ತಂದ ಅವರ ಕಾವ್ಯ ಸತ್ವ ಬಹಳ ದೊಡ್ಡದ್ದು. ಒಂದು ಕವನದಲ್ಲಿ ಬಳಿಸಿದ ಪದಗಳನ್ನು ಮತ್ತೊಂದು ಕವನದಲ್ಲಿ ಬಳಕೆ ಮಾಡುತ್ತಿರಲಿಲ್ಲ. ಹೀಗಾಗಿ, ಕನ್ನಡ ಕಾವ್ಯ, ಸಾಹಿತ್ಯದ ಭೂಮಿಯನ್ನು ಲಯಪ್ರದವಾಗಿ ಮಾಡಿದ್ದರು ಎಂದು ನುಡಿದರು.

ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಮಾತನಾಡಿ, ಪ್ರಜಾಪ್ರಭುತ್ವ ಬಿಕ್ಕಟ್ಟಿನಲ್ಲಿರುವ ಈ ಸಂದರ್ಭದಲ್ಲಿ ರಾಜಕೀಯ ಪ್ರಜ್ಞೆ ಹೊಂದಿದ್ದ ಕವಿ ಗೋಪಾಲಕೃಷ್ಣ ಅಡಿಗರ ಚಿಂತನೆಗಳು ಬಹಳ ಮುಖ್ಯವೆನಿಸುತ್ತವೆ. ಯಾವ ಮೋಹನ ಮುರಳಿ ಕರೆಯಿತು ಕವನ ತಿಳಿಯದವರೇ ಇಲ್ಲ. ನವ್ಯ ಕಾಲಘಟ್ಟದಲ್ಲಿ ಹೊಸತಾದ ಕವನ ಬರೆದಿದ್ದರು.

ಅಡಿಗರ ಸಮಗ್ರ ಕಾವ್ಯವನ್ನು ಓದಿದಾಗ ಆಧುನಿಕ ಮಹಾಕಾವ್ಯವೊಂದನ್ನು ಓದಿದ ಅನುಭವವಾಗುತ್ತದೆ. ಇವರ ಕಾವ್ಯದ ನಾಯಕ ಸ್ವಾತಂತ್ರೋತ್ತರ ಭಾರತದ ಆಧುನಿಕ ಸಂವೇದನೆಯ ವ್ಯಕ್ತಿ. ಸ್ವತಂತ್ರ ಭಾರತದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ವಾಸ್ತವ ಇವರ ಕಾವ್ಯದಲ್ಲಿ ಆಕಾರ ಪಡೆದಂತೆ ಬಹುಶಃ ಕನ್ನಡದಲ್ಲಿ ಮತ್ತೆ ಯಾರ ಕಾವ್ಯದಲ್ಲೂಕಾಣಿಸಿಕೊಂಡಿಲ್ಲ ಎಂದ ಅವರು, ಅಡಿಗರು ತುಂಬಾ ಆತ್ಮೀಯ ಸ್ವಭಾವದವರು. ನನ್ನ ಕತಿಗಳನ್ನು ಓದಿ ಹಿನ್ನುಡಿ ಬರೆದುಕೊಟ್ಟಿದ್ದಾರೆ ಎಂದು ನೆನೆದರು.

ನೈತಿಕ ಮೌಲ್ಯಗಳನ್ನು ಒಂದು ತಲೆಮಾರಿಗೆ ಕಲಿಸಿಟ್ಟ ಅಡಿಗರು, ಸ್ವತಃ ಅದನ್ನು ಬದುಕಿನುದ್ದಕ್ಕೂ ಪಾಲಿಸಿದರು. ಅವರು ಸಾಕಷ್ಟು ಜನರನ್ನು ಬೆಳೆಸಿದರು. ಆದರೆ, ಬೆಳೆದ ನಂತರ ಅನೇಕರು ಅವರನ್ನು ಮರೆತುಬಿಟ್ಟರು ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ನಗರ ಶ್ರೀನಿವಾಸ ಉಡುಪ ತಂಡದವರು ಅಡಿಗರಿಗೆ ಗೀತನಮನ ಸಲ್ಲಿಸಿದರು. ರೋಹಿತ್ ಚಕ್ರವರ್ತಿ, ಅವಿನಾಶ್.ವಿ.ಜಿ., ನಾಗರಾಜ ಶೆಣೈ, ಮಾನಸ ಸೇರಿದಂತೆ ಇನ್ನಿತರರು ಅಡಿಗರ ಕವನವಾಚನ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News