ಸಂಜೆ ವಿವಾಹವಾಗಬೇಕಿದ್ದ ಯುವಕನಿಗೆ ಬೆಳಗ್ಗೆ ಮೃತ್ಯುವಾಗಿ ಕಾಡಿದ ಮೊಬೈಲ್ ಫೋನ್

Update: 2018-02-19 04:31 GMT

ಬರೇಲಿ, ಫೆ.19: ಸಂಜೆ ದಾಂಪತ್ಯ ಜೀವನಕ್ಕೆ ಕಾಲಿಡಬೇಕು. ಇನ್ನೇನು ದಿಬ್ಬಣ ಹೊರಡಲು ತಯಾರಿ ನಡೆದಿದೆ. ಅಷ್ಟರಲ್ಲಿ ಜವರಾಯನಿಂದ ಮೊಬೈಲ್ ಕರೆ ಬಂದಿತ್ತು! ಸಂಜೆಯಷ್ಟೇ ವಿವಾಹವಾಗಲಿದ್ದ ಖಾಸಗಿ ಕಂಪನಿಯ ಎಂಜಿನಿಯರ್ ಒಬ್ಬರು ಮೊಬೈಲ್‌ನಲ್ಲಿ ಮಾತನಾಡುತ್ತಾ ರೈಲು ಹಳಿ ದಾಟುತ್ತಿದ್ದಾಗ ಎಕ್ಸ್‌ಪ್ರೆಸ್ ರೈಲು ಡಿಕ್ಕಿಯಾಗಿ ಮೃತಪಟ್ಟ ಧಾರುಣ ಘಟನೆ ಇದು.

ನರೇಶ್ ಪಾಲ್ ಗಂಗ್ವಾರ್ (30) ವಿವಾಹ ರವಿವಾರ ಸಂಜೆ ನಡೆಯಬೇಕಿತ್ತು. ಬೆಳಿಗ್ಗೆ ಒಂದು ಮೊಬೈಲ್‌ನಲ್ಲಿ ಮಾತನಾಡುತ್ತಾ ಮತ್ತೊಂದು ಮೊಬೈಲ್‌ನಲ್ಲಿ ಎಸ್‌ಎಂಎಸ್ ಸಂದೇಶ ಕಳುಹಿಸುತ್ತಾ ರೈಲು ಹಳಿ ದಾಟುತ್ತಿದ್ದ. ಹಳಿಯಲ್ಲಿ ರಾಜ್ಯ ರಾಣಿ ಎಕ್ಸ್‌ಪ್ರೆಸ್ ಸಮೀಪಿಸುತ್ತಿದ್ದುದು ಗಮನಕ್ಕೇ ಬರಲಿಲ್ಲ. ನೋಡನೋಡುತ್ತಿದ್ದಂತೆ ಆತನ ದೇಹ ರೈಲಿನಡಿ ಸಿಕ್ಕಿ ಛಿದ್ರವಾಯಿತು ಎಂದು ಪ್ರತ್ಯಕ್ಷದರ್ಶಿಗಳು ಘಟನೆ ವಿವರಿಸಿದ್ದಾರೆ.
ಬರೇಲಿ ಸಮೀಪದ ನಂದೋಸಿ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ನೋಯ್ಡಾದ ನಿರ್ಮಾಣ ಕಂಪನಿಯಲ್ಲಿ ಸಿವಿಲ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ನರೇಶ್, ತನ್ನದೇ ವಿವಾಹಕ್ಕೆ ಹುಟ್ಟೂರಿಗೆ ಬಂದಿದ್ದ. ಸಂಜೆ ಶಹಜಹಾನ್‌ಪುರದಲ್ಲಿ ಉಮಾ ಗಂಗ್ವಾರ್ ಎಂಬಾಕೆಯ ಕೈಹಿಡಿಯಬೇಕಿತ್ತು. ಕೊನೆಕ್ಷಣದ ಸಿದ್ಧತೆಯಲ್ಲಿ ಮನೆಯವರು ನಿರತರಾಗಿದ್ದಾಗ ಈ ಸಾವಿನ ಸುದ್ದಿ ಕುಟುಂಬಕ್ಕೆ ಬರಸಿಡಿಲಿನಂತೆ ಬಂದೆರಗಿದೆ.
"ನಮ್ಮ ಮನೆಯಿಂದ ಕೇವಲ 50 ಮೀಟರ್ ಅಂತರದಲ್ಲಿ ರೈಲು ಹಳಿ ಇದೆ. ನರೇಶ್ ವಾಕಿಂಗ್ ಹೋಗುತ್ತಿದ್ದಾಗ ಸಹೋದ್ಯೋಗಿಯ ಕರೆ ಬಂದಿತ್ತು. ಇನ್ನೊಂದು ಮೊಬೈಲ್‌ನಲ್ಲಿ ಎಸ್‌ಎಂಎಸ್ ಸಂದೇಶ ಕಳುಹಿಸುತ್ತಿದ್ದ. ಎರಡೂ ಮೊಬೈಲ್‌ಗಳ ಕಡೆಗೆ ಆತನ ಗಮನ ಇತ್ತು. ಬಹುಶಃ ರೈಲು ಸಮೀಪಿಸುತ್ತಿದ್ದರೂ ಆತನ ಗಮನಕ್ಕೆ ಬರಲಿಲ್ಲ" ಎಂದು ಭಾವ ವೀರೇಶ್ ಗಂಗ್ವಾರ್ ಹೇಳಿದ್ದಾರೆ.
ಜೀವನದ ಸ್ಮರಣೀಯ ದಿನವಾಗಬೇಕಿದ್ದ ವಿವಾಹದ ದಿನ ಸಾವು ಈ ರೀತಿ ಬರುತ್ತದೆ ಎಂದು ಎಣಿಸಿರಲಿಲ್ಲ ಎಂದು ಅವರು ದಿಗ್ಭ್ರಮೆ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News