ಶಿವಾಜಿ ಮುಸ್ಲಿಮ್ ವಿರೋಧಿ ಅಲ್ಲ: ಪಿ.ಜಿ.ಆರ್.ಸಿಂಧ್ಯಾ

Update: 2018-02-19 13:14 GMT

ಬೆಂಗಳೂರು, ಫೆ.19: ಶಿವಾಜಿ ಮಹಾರಾಜರು ಮುಸ್ಲಿಮ್ ವಿರೋಧಿ ಎನ್ನುವ ತಪ್ಪುಕಲ್ಪನೆಯನ್ನು ಕೆಲವರು ಹೊಂದಿದ್ದಾರೆ. ಆದರೆ, ಅವರು ತಮ್ಮ ಸೈನ್ಯದಲ್ಲಿ ಎಲ್ಲ ಧರ್ಮೀಯರನ್ನು, ಜಾತಿಯವರನ್ನು ಇಟ್ಟುಕೊಂಡು ನಾಡದ್ರೋಹಿಗಳ ವಿರುದ್ಧ ಹೋರಾಡಿದ್ದಾರೆ ಎಂದು ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಹೇಳಿದರು.

ಸೋಮವಾರ ನಗರದ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ಸಂಸ ಬಯಲು ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ, ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಛತ್ರಪತಿ ಶಿವಾಜಿ ಮಹಾರಾಜರ ಆದರ್ಶಗಳು ಕೇವಲ ಕಾರ್ಯಕ್ರಮಕ್ಕೆ ಸೀಮಿತಗೊಳಿಸಬಾರದು. ದೇಶ ಪ್ರಗತಿ ಕಾಣಲು ಯುವ ಸಮೂಹ ಅವರ ತತ್ವಾದರ್ಶ ಮೈಗೂಡಿಸಿಕೊಳ್ಳಬೇಕು ಎಂದ ಅವರು, ಭಾರತೀಯ ಸಂಸ್ಕೃತಿ, ನಾಡು, ನುಡಿ, ಶಿವಾಜಿ ಮಹಾರಾಜರ ಕೊಡುಗೆ ಅವಿಸ್ಮರಣೀಯ ಎಂದರು.
ತನ್ನ 14ನೇ ವಯಸ್ಸಿನಲ್ಲಿಯೇ ಕೋಟೆಯನ್ನು ಗೆದ್ದ ಮಹಾಪುರುಷ ಶಿವಾಜಿ ಯಾರಿಗೂ ತಲೆತಗ್ಗಿಸಲಿಲ್ಲ. ಹಿಂದವೀ ಸ್ವರಾಜ್ಯಕ್ಕಾಗಿ ಹೋರಾಟ ಸಂಘಟಿಸಿದಾಗ ಅವರ ಜೊತೆ ಯಾರೂ ಬರಲಿಲ್ಲ. ಆದರೆ, ಕಾಡಿಗೆ ಹೋದ ಅವರು ಅಲ್ಲಿನ ಜನರಿಗೆ ಶಿಕ್ಷಣ ತರಬೇತಿ ನೀಡಿ ಸಂಘಟನೆ ಮಾಡಿದರು ಎಂದು ಅವರು ಹೇಳಿದರು.

ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ತು ಅಧ್ಯಕ್ಷ ಎಸ್. ಸುರೇಶ್ ರಾವ್ ಸಾಠೆ ಮಾತನಾಡಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದ ಮರಾಠಿಗರೆಲ್ಲ ಮೀಸಲಾತಿ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಸಮಾಜ ಬಾಂಧವರು ಒಟ್ಟಾಗಿ ಹೋರಾಟ ನಡೆಸಿ ಸರಕಾರದ ಮೇಲೆ ಒತ್ತಡ ತರಬೇಕು ಎಂದರು.

ಸಂಭ್ರಮ: ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಅಂಗವಾಗಿ ಸಂಸ ಬಯಲು ರಂಗ ಮಂದಿರ ಆವರಣದಲ್ಲಿ ಸೋಮನಕುಣಿತ, ಲಿಂಗದೇವರ ಕುಣಿತ ಮುಂತಾದ ಜನಪದ ತಂಡಗಳು ಭಾಗವಹಿಸಿದ್ದವು. ಮಕ್ಕಳು ಶಿವಾಜಿ ಮಹಾರಾಜರ ವೇಷ ಧರಿಸಿ ಸಂಭ್ರಮಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎನ್.ಆರ್.ವಿಶುಕುಮಾರ್, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ತಿನ ಎ.ಬೈನೋಜಿರಾವ್ ಮೋರೆ, ವಿ.ಎ.ರಾಣೋಜಿರಾವ್ ಸಾಠೆ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News