×
Ad

'ಬೆಂಗಳೂರನ್ನು ದೇಶದ ಎರಡನೆ ರಾಜಧಾನಿಯನ್ನಾಗಿ ಮಾಡಿ': ಪ್ರಧಾನಿಗೆ ಸಚಿವ ದೇಶಪಾಂಡೆ ಮನವಿ

Update: 2018-02-19 19:20 IST

ಬೆಂಗಳೂರು, ಫೆ. 19: ಅನೇಕ ವೈಶಿಷ್ಟ್ಯಗಳನ್ನು ಹೊಂದಿರುವ ಬೆಂಗಳೂರು ನಗರವನ್ನು ದೇಶದ ಎರಡನೇ ರಾಜಧಾನಿಯನ್ನಾಗಿ ಮಾಡಬೇಕೆಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ, ಪ್ರಧಾನಿ ನರೇಂದ್ರ ಮೋದಿಗೆ ಮನವಿ ಸಲ್ಲಿಸಿದ್ದಾರೆ.

ಸೋಮವಾರ ಮೈಸೂರಿನಲ್ಲಿ ನಡೆದ ಮೈಸೂರು-ಬೆಂಗಳೂರು ರೈಲು ಮಾರ್ಗದ ಜೋಡಿಹಳಿ ಹಾಗೂ ವಿದ್ಯುದೀಕೃತ ಮಾರ್ಗದ ಲೋಕಾರ್ಪಣೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಸಚಿವ ದೇಶಪಾಂಡೆ ಮನವಿ ಸಲ್ಲಿಸಿದರು. ಈ ಹಿಂದೆ ಇದೇ ವಿಷಯ ಕುರಿತು ಜ.5ರಂದು ತಮಗೆ ಬರೆದ ಪತ್ರಕ್ಕೆ ಇಡೀ ದಕ್ಷಿಣ ಭಾರತದಲ್ಲಿ ವ್ಯಾಪಕ ಜನಬೆಂಬಲ ವ್ಯಕ್ತವಾಗಿದೆ. ಇದಕ್ಕೆ ವೃತ್ತಿಪರರು, ಗಣ್ಯರು ಮತ್ತು ರಾಜ್ಯಗಳ ಉದ್ಯಮಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ದೇಶಪಾಂಡೆ ಉಲ್ಲೇಖಿಸಿದ್ದಾರೆ.

ತುಂಬಾ ವಿಶಾಲ ರಾಷ್ಟ್ರವಾದ ಭಾರತವು ಈಗ ಸುಗಮ ಆಡಳಿತ, ಆಡಳಿತ ಸುಧಾರಣೆಗಳು, ರಾಷ್ಟ್ರೀಯ ಪುನಾರಚನೆ ಮತ್ತು ಅಂತಾರಾಷ್ಟ್ರೀಯ ಸಹಭಾಗಿತ್ವಗಳಲ್ಲಿ ಸಂಪೂರ್ಣ ಪರಿವರ್ತನೆಯ ಹಾದಿಯಲ್ಲಿದೆ. ಹೀಗಿರುವಾಗ ಇಡೀ ದೇಶಕ್ಕೆ ಒಂದು ರಾಜಧಾನಿ ಸಾಲುವುದಿಲ್ಲ. ಬೆಂಗಳೂರು ದೇಶದ 2ನೆ ರಾಜಧಾನಿಯಾಗಲು ಅತ್ಯಂತ ಸೂಕ್ತ ಸ್ಥಳವಾಗಿದೆ ಎಂದು ದೇಶಪಾಂಡೆ ವಿವರಿಸಿದ್ದಾರೆ.

ಕಾಸ್ಮೊಪಾಲಿಟನ್ ನಗರವಾಗಿರುವ ಬೆಂಗಳೂರು ಪ್ರಾಕೃತಿಕ ವಿಕೋಪಗಳಿಂದ ದೂರವಾಗಿದ್ದು, ಹಿತಕರ ಹವಾಮಾನ ಹೊಂದಿದೆ. ಅಲ್ಲದೆ, ಬಾಹ್ಯಶತ್ರುಗಳ ಕಾಟದಿಂದಲೂ ಇದು ಮುಕ್ತವಾಗಿದೆ. ಬೆಂಗಳೂರನ್ನು ದೇಶದ ಎರಡನೆ ರಾಜಧಾನಿಯನ್ನಾಗಿ ಮಾಡಬೇಕೆಂಬುದು ಇಡೀ ದಕ್ಷಿಣ ಭಾರತೀಯರ ನ್ಯಾಯಬದ್ಧ ಭಾವನೆಯಾಗಿದೆ ಎಂದು ಅವರು ತಮ್ಮ ಮನವಿಪತ್ರದಲ್ಲಿ ಹೇಳಿದ್ದಾರೆ.

ಬಹುಭಾಷಿಕ ಜನರು, ಶಾಸ್ತ್ರೀಯ ಭಾಷಾ ವಿದ್ವಾಂಸರು, ವೈವಿಧ್ಯಮಯ ವಿದೇಶಿ ವಿದ್ಯಾರ್ಥಿಗಳು ಮತ್ತು ದಕ್ಷ ವೃತ್ತಿಪರರಿಗೆ ಬೆಂಗಳೂರು ನೆಲೆಬೀಡಾಗಿದೆ. ಅಲ್ಲದೆ, ಕೈಗಾರಿಕಾ ಅಭಿವೃದ್ಧಿ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ, ನವೋದ್ಯಮಗಳಿಗೂ ಬೆಂಗಳೂರು ಆಡುಂಬೊಲವಾಗಿದೆ. ಬೆಂಗಳೂರನ್ನು ಎರಡನೇ ರಾಜಧಾನಿಯನ್ನಾಗಿ ಮಾಡಿ ಇಲ್ಲಿ ಸುಪ್ರೀಂಕೋರ್ಟಿನ ಪೀಠ ಮತ್ತು ಯುಪಿಎಸ್‌ಸಿ ಕಚೇರಿ ತೆಗೆದು, ಇಲ್ಲಿ ಸಂಸತ್ ಅಧಿವೇಶನ ನಡೆಸುವುದರಿಂದ ದಕ್ಷಿಣ ಭಾರತ ಒಂದುಗೂಡಲು ಸಾಧ್ಯ ಎಂದು ಅವರು ನುಡಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News