ಬೆಂಗಳೂರು: ನೂತನ ರಿಚಾರ್ಜ್ ಕೇಂದ್ರಕ್ಕೆ ಸಚಿವ ಶಿವಕುಮಾರ್ ಚಾಲನೆ

Update: 2018-02-19 14:07 GMT

ಬೆಂಗಳೂರು, ಫೆ.19: ನಗರದ ಕೆ.ಆರ್.ವೃತ್ತ ಸಮೀಪದ ಬೆಸ್ಕಾಂ ಕಚೇರಿಯಲ್ಲಿ ವಿದ್ಯುತ್ ಚಾಲಿತ ವಾಹನಗಳಿಗಾಗಿ ಅಳವಡಿಸಿರುವ ನೂತನ ಎರಡು ಚಾರ್ಜ್ ಯಂತ್ರಗಳಿರುವ ರಿಚಾರ್ಜ್ ಕೇಂದ್ರವನ್ನು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದರು. ಎಲೆಕ್ಟ್ರಿಕ್ ವಾಹನ ಸವಾರರು ಕಡಿಮೆ ದರದಲ್ಲಿ ಈ ಕೇಂದ್ರದಿಂದ ರಿಚಾರ್ಜ್ ಮಾಡಬಹುದಾಗಿದೆ.

ದರದ ವಿವರ: ಎಲೆಕ್ಟ್ರಿಕ್ ವಾಹನ ಮಾಲಕರು ಮನೆಯಲ್ಲಿ ಚಾರ್ಜ್ ಮಾಡಿದರೆ ಪ್ರತಿ ಯುನಿಟ್‌ಗೆ 6 ರಿಂದ 7 ರೂ. ಪಾವತಿಸಬೇಕು. ಈ ಕೇಂದ್ರದಲ್ಲಿ ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆವರೆಗೆ ಚಾರ್ಜ್ ಮಾಡಿದರೆ 4.85 ರೂ. ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆವರೆಗೆ ಚಾರ್ಜ್ ಮಾಡಿದರೆ 3.85 ರೂ. ಪಾವತಿಸಬೇಕು. ಇನ್ನು ಒಂದು ಎಲೆಕ್ಟ್ರಿಕ್ ಕಾರನ್ನು ಸತತ 1.20 ಗಂಟೆ ಚಾರ್ಜ್ ಮಾಡಿದರೆ ಸುಮಾರು 125 ಕಿ.ಮೀ. ದೂರ ಪ್ರಯಾಣಿಸಬಹುದು. ಇದೇ ರೀತಿ, ದಿನಕ್ಕೆ 20 ಕಾರುಗಳನ್ನು ಚಾರ್ಜ್ ಮಾಡಬಹುದು.

ಶೀಘ್ರದಲ್ಲಿಯೇ 10 ಕೇಂದ್ರ: ನಗರದಲ್ಲಿ ಇದೇ ಬಗೆಯ ಕೇಂದ್ರಗಳನ್ನು ಬೆಸ್ಕಾಂನ 10 ಕಚೇರಿಗಳಲ್ಲಿ ಆರಂಭಿಸಲು ನಿರ್ಧರಿಸಲಾಗಿದೆ. ಬಿಎಂಆರ್‌ಸಿಎಲ್ ಹಾಗೂ ಬಿಬಿಎಂಪಿಯ ಆಸ್ತಿಗಳಲ್ಲಿ ಸುಮಾರು 300 ಸ್ಥಳಗಳಲ್ಲಿ ಕೇಂದ್ರ ಆರಂಭಿಸಲು ಚರ್ಚೆಯಾಗಿದೆ. ಸದ್ಯಕ್ಕೆ 65 ಸ್ಥಳಗಳಲ್ಲಿ ಕಾರ್ಯ ಸಾಧ್ಯತಾ ಅಧ್ಯಯನ ನಡೆದಿದೆ.

ನೂತನವಾಗಿ ಪ್ರಾರಂಭಿಸಿರುವ ರಿಚಾರ್ಜ್ ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ ವಿದ್ಯುತ್ ದೊರೆಯಲಿದೆ. ಆದರೆ, ಇನ್ನೂ ಕಡಿಮೆ ರಿಯಾಯಿತಿ ನೀಡುವಂತೆ ಕರ್ನಾಟಕ ವಿದ್ಯುಚ್ಛಕ್ತಿ ದರ ನಿಯಂತ್ರಣ ಆಯೋಗಕ್ಕೆ ಮನವಿ ಮಾಡಲಾಗಿದೆ
-ಡಿ.ಕೆ.ಶಿವಕುಮಾರ್, ಇಂಧನ ಸಚಿವ
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News