×
Ad

ಸಾರಿಗೆ ಅಧಿಕಾರಿಗಳ ಕಿರುಕುಳಕ್ಕೆ ಆರೋಪ: ಮಾ.5 ರಂದು ಚೆಕ್‌ಪೋಸ್ಟ್ ಮುತ್ತಿಗೆ, ರಸ್ತೆ ತಡೆ

Update: 2018-02-19 19:42 IST

ಬೆಂಗಳೂರು, ಫೆ.19: ರಾಜ್ಯದಲ್ಲಿರುವ ಚೆಕ್ ಪೋಸ್ಟ್‌ಗಳಲ್ಲಿ ನಡೆಯುತ್ತಿರುವ ದಬ್ಬಾಳಿಕೆ, ಭ್ರಷ್ಟಾಚಾರ ಹಾಗೂ ಸಾರಿಗೆ ಅಧಿಕಾರಿಗಳ ಕಿರುಕುಳ ನಿಲ್ಲಿಸಬೇಕು. ಇಲ್ಲದಿದ್ದರೆ ಮಾ.5 ರಂದು ರಾಜ್ಯಾದ್ಯಂತ ಚೆಕ್‌ಪೋಸ್ಟ್, ಅಧಿಕಾರಿಗಳ ಕಚೇರಿ ಮುತ್ತಿಗೆ ಹಾಗೂ ರಸ್ತೆ ತಡೆ ಮಾಡಲಾಗುತ್ತದೆ ಎಂದು ಕರ್ನಾಟಕ ಸ್ಟೇಟ್ ಲಾರಿ ಓನರ್ಸ್‌ ಅಂಡ್ ಏಜೆಂಟ್ಸ್ ಅಸೋಸಿಯೇಷನ್ ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್‌ನ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ, ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಜಾರಿಯಾದ ನಂತರ ಎಲ್ಲ ಕಡೆಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ರದ್ದು ಮಾಡಲಾಗಿದೆ. ಆದರೆ, ಕರ್ನಾಟಕದಲ್ಲಿ ತಪಾಸಣೆ ನೆಪದಲ್ಲಿ ಇಂದಿಗೂ ಕಾರ್ಯನಿರ್ವಹಿಸುತ್ತಿದ್ದು, ಲಾರಿಗಳಿಂದ ಸಾವಿರಾರು ರೂ.ಗಳು ಅಕ್ರಮವಾಗಿ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸಬೇಕಾದ ಸಂದರ್ಭದಲ್ಲಿ ಕೆಲವೊಂದು ಸಾರಿಗೆ ಅಧಿಕಾರಿಗಳು ಹಾಗೂ ರೌಡಿಗಳು ಲಾರಿಗೆ ಕೈ ಅಡ್ಡ ಹಾಕಿ ನಿಲ್ಲಿಸುತ್ತಾರೆ. ಕೆಲವೊಂದು ಸಂದರ್ಭದಲ್ಲಿ ನಿಲ್ಲಿಸಲು ತಡವಾದರೆ ಕೆಟ್ಟ ಪದಗಳನ್ನು ಬಳಕೆ ಮಾಡಿ ನಿಂದಿಸುತ್ತಾರೆ ಹಾಗೂ ಬೂಟು ಕಾಲುಗಳಿಂದ ಒದ್ದು, ಹಲ್ಲೆ ಮಾಡುತ್ತಿದ್ದಾರೆ. ಅಲ್ಲದೆ, ಒಂದು ಬಾರಿ ಲಾರಿ ನಿಲ್ಲಿಸಿದರೆ 1 ಸಾವಿರದಿಂದ 3 ಸಾವಿರ ರೂ.ಗಳವರೆಗೂ ವಸೂಲಿ ಮಾಡುತ್ತಾರೆ. ಹಣ ನೀಡದಿದ್ದರೆ ಹಲ್ಲೆ ಮಾಡಿ ಬಲವಂತವಾಗಿ ಕಿತ್ತುಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.

ಗಣಕೀಕೃತ ವ್ಯವಸ್ಥೆ ಜಾರಿಗೆ ಆಗ್ರಹ: ದೇಶದಾದ್ಯಂತ ಸಂಚರಿಸಲು ಅನುಮತಿ ಪಡೆದಿರುವ ವಾಹನಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಈಗಿರುವ ಚೆಕ್‌ಪೋಸ್ಟ್‌ಗಳನ್ನು ರದ್ದು ಮಾಡಿ, ನೇರವಾಗಿ ಗಣಕೀಕರಣ ವ್ಯವಸ್ಥೆ ಜಾರಿಗೆ ತಂದರೆ ತೆರಿಗೆ ವಂಚನೆಯನ್ನು ತಡೆಯಬಹುದು ಹಾಗೂ ಸರಕಾರದ ಬೊಕ್ಕಸಕ್ಕೆ 5 ಸಾವಿರ ಕೋಟಿ ರೂ.ಗಳಷ್ಟು ಆದಾಯ ನೇರವಾಗಿ ಸಂದಾಯವಾಗುತ್ತದೆ ಎಂದು ಅವರು ತಿಳಿಸಿದರು.

ಸಾರಿಗೆ ಅಧಿಕಾರಿಗಳ ಕಿರುಕುಳ ಹಾಗೂ ಟೋಲ್‌ಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವಂತೆ ಹಲವು ಬಾರಿ ಸರಕಾರಕ್ಕೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ, ಮಾ.5 ರೊಳಗೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ರಾಜ್ಯಾದ್ಯಂತ ಸಾರಿಗೆ ಕಚೇರಿಗಳ ಮತ್ತು ಚೆಕ್‌ಪೋಸ್ಟ್‌ಗಳಿಗೆ ಮುತ್ತಿಗೆ ಹಾಕುವ ಮೂಲಕ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News