ರೈತ ಮುಖಂಡ ಪುಟ್ಟಣ್ಣಯ್ಯ ನೆನಪು ಚಿರಸ್ಥಾಯಿಯಾಗಿ ಉಳಿಸಲು ಶಾಸಕರ ಆಗ್ರಹ

Update: 2018-02-19 14:18 GMT

ಬೆಂಗಳೂರು, ಫೆ. 19: ಮಂಡ್ಯ ಜಿಲ್ಲೆಯ ಮೇಲುಕೋಟೆ ಕ್ಷೇತ್ರದ ಶಾಸಕ ಹಾಗೂ ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರ ನೆನಪು ಚಿರಸ್ಥಾಯಿಯಾಗಿ ಉಳಿಸಲು ರಾಜ್ಯ ಸರಕಾರ ಕ್ರಮ ವಹಿಸಬೇಕೆಂದು ಆಡಳಿತ ಮತ್ತು ವಿಪಕ್ಷ ಸದಸ್ಯರು ಪಕ್ಷಭೇದ ಮರೆತು ಆಗ್ರಹಿಸಿದರು.

ಸೋಮವಾರ ವಿಧಾನಸಭೆ ಕಲಾಪ ಸಮಾವೇಶಗೊಳ್ಳುತ್ತಿದ್ದಂತೆ ಸ್ಪೀಕರ್ ಕೆ.ಬಿ. ಕೋಳಿವಾಡ ಸಂತಾಪ ಸೂಚನೆ ನಿರ್ಣಯ ಮಂಡಿಸಿದರು. ನಿರ್ಣಯ ಬೆಂಬಲಿಸಿ ಮಾತನಾಡಿದ ಜೆಡಿಎಸ್ ಉಪನಾಯಕ ವೈ.ಎಸ್.ವಿ.ದತ್ತ, ‘ನನ್ನ ಮತ್ತು ಪುಟ್ಟಣ್ಣಯ್ಯ ಅವರ ಒಡನಾಟ ಸುಮಾರು 35 ವರ್ಷಗಳದ್ದು, 80ರ ದಶಕದಲ್ಲಿ ರೈತ ಚಳವಳಿ, ಗೋಕಾಕ್ ಚಳವಳಿಗಳು ಅತ್ಯಂತ ಸದೃಢವಾಗಿದ್ದವು. ಆಗಿನ ಕಾಲಕ್ಕೆ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಮತ್ತು ಎನ್.ಡಿ.ಸುಂದರೇಶ್ ಒಂದು ಕರೆ ನೀಡಿದರೆ ಲಕ್ಷಾಂತರ ರೈತರು ಚಳವಳಿಯಲ್ಲಿ ಭಾಗವಹಿಸುತ್ತಿದ್ದರು. ‘ರೈತರು ಬಂದರು ದಾರಿ ಬಿಡಿ. ರೈತರ ಕೈಗೆ ರಾಜ್ಯ ಕೊಡಿ’ ಎಂಬ ಘೋಷಣೆಗಳು ಮೊಳಗಿದ್ದವು.

ಒಂದು ಸರಕಾರವನ್ನು ಬದಲಿಸುವ ಶಕ್ತಿ ರೈತ ಚಳವಳಿಗಿತ್ತು. ಪುಟ್ಟಣ್ಣಯ್ಯ ಸಮಸ್ಯೆಗಳ ಆಳಕ್ಕಿಳಿದು ಪರಿಹಾರ ಕಂಡು ಹಿಡಿಯುತ್ತಿದ್ದರು. 1994ರಲ್ಲಿ ಪುಟ್ಟಣ್ಣಯ್ಯ ಮತ್ತು ನಂಜುಂಡಸ್ವಾಮಿ ಹಸಿರು ಶಾಲು ಹೊದ್ದು ಈ ಸದನದ ಕಲಾಪದಲ್ಲಿ ಭಾಗವಹಿಸಿದ್ದನ್ನು ನೋಡಿದ್ದೇನೆ. ಅವರ ಮಾತು ಕೇಳುವಾಗ ಇಡೀ ಸದನ ಗಂಭೀರವಾಗಿ ಆಲಿಸುತ್ತಿತ್ತು ಎಂದು ನೆನಪು ಮಾಡಿಕೊಂಡರು.

ಕಾವೇರಿ ವಿಷಯದಲ್ಲಿ ಪುಟ್ಟಣ್ಣಯ್ಯ ಅವರದುಭಾವನಾತ್ಮಕ ಸಂಬಂಧ. ಅದಕ್ಕಾಗಿ ಅವರು ಕೇರಳ, ಕರ್ನಾಟಕ, ತಮಿಳುನಾಡು ಸೇರಿ ‘ಕಾವೇರಿ ಕುಟುಂಬಂ’ ಎಂಬ ರೈತರ ಸಂಘಟನೆ ಸ್ಥಾಪಿಸಿದರು. ನದಿ ನೀರಿನ ಹಂಚಿಕೆ ವಿಷಯದಲ್ಲಿ ನಾಲ್ಕು ರಾಜ್ಯಗಳ ರೈತರೇ ಸಮಸ್ಯೆಯನ್ನು ಮಾತುಕತೆ ಮೂಲಕ ಇತ್ಯರ್ಥಗೊಳಿಸಿಕೊಳ್ಳಬೇಕೆಂಬ ಇಚ್ಛೆ ಹೊಂದಿದ್ದರು ಎಂದು ಸ್ಮರಿಸಿದರು.

ಪುಟ್ಟಣ್ಣಯ್ಯ ಹಳ್ಳಿಗಾಡಿನ ಕ್ರೀಡೆಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರು. ‘ಕಬಡ್ಡಿ’ ಎಂದರೆ ಅವರಿಗೆ ಅಚ್ಚುಮೆಚ್ಚು. ನಿನ್ನೆ ಕಬಡ್ಡಿ ಆಟ ನೋಡುತ್ತಿರುವಾಗಲೇ ಹೃದಯಾಘಾತವಾಗಿ ಪ್ರಾಣ ಬಿಟ್ಟಿದ್ದಾರೆಂದರು. ಚಳವಳಿಯನ್ನು ಹೆಸರಿಸುವುದಾದರೆ ಅದರಲ್ಲಿ ನಂಜುಂಡಸ್ವಾಮಿ, ಸುಂದರೇಶ್ ಮತ್ತು ಪುಟ್ಟಣ್ಣಯ್ಯ ಅವರ ಹೆಸರುಗಳು ಚಾರಿತ್ರಿಕ ಎಂದರು.

ಕೇವಲ ಸಂತಾಪ ಸೂಚನೆಗಷ್ಟೇ ಈ ಸದನ ಪುಟ್ಟಣ್ಣಯ್ಯ ಅವರನ್ನು ಸೀಮಿತ ಮಾಡದೆ, ಅವರು ನೆನಪು ರಾಜ್ಯದ ರೈತರಲ್ಲಿ ಶಾಶ್ವತವಾಗಿ ಉಳಿಸಲು ರೈತಪರ ಯೋಜನೆಯೊಂದನ್ನು ರೂಪಿಸಬೇಕು ಎಂದು ವೈಎಸ್‌ವಿ ದತ್ತ ಇದೇ ಸಂದರ್ಭದಲ್ಲಿ ಆಗ್ರಹಿಸಿದರು.

ಇದಕ್ಕೆ ಧ್ವನಿಗೂಡಿಸಿದ ಆಡಳಿತ ಪಕ್ಷದ ಸದಸ್ಯ ಶಿವಮೂರ್ತಿ, ವಿದೇಶಿ ಪ್ರವಾಸ ಮಾಡಿ ಅಲ್ಲಿ ಅಧ್ಯಯನ ನಡೆಸಿ ಅಲ್ಲಿನ ವೈಜ್ಞಾನಿಕ ಕೃಷಿ ಪದ್ಧತಿಯನ್ನು ರಾಜ್ಯದಲ್ಲಿಯೂ ಅಳವಡಿಸಿಕೊಳ್ಳಬೇಕೆಂದು ಸರಕಾರಕ್ಕೆ ಸಲಹೆ-ಸೂಚನೆಗಳನ್ನು ನೀಡುತ್ತಿದ್ದರು. ಹೀಗಾಗಿ ಸರಕಾರ ಅವರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸಬೇಕೆಂದು ಕೋರಿದರು.

ಇನ್ನೂ ಇರಬೇಕಿತ್ತು: ಕೃಷಿ-ರೈತರು ಬಿಕ್ಕಟ್ಟಿನಲ್ಲಿರುವ ಸಂದಿಗ್ಧ ಸಂದರ್ಭದಲ್ಲಿ, ಬಂಡವಾಳಶಾಹಿಗಳ ಅಕ್ರಮ ಮತ್ತು ದಲ್ಲಾಳಿಗಳ ಶೋಷಣೆ ಸಂಕಷ್ಟದ ಸ್ಥಿತಿಯಲ್ಲಿ ರೈತ ಧ್ವನಿಯೊಂದು ಇಲ್ಲದಿರುವುದು ರೈತರ ಸಂಕುಲಕ್ಕೆ ಅಪಾರ ನಷ್ಟವಾಗಿದೆ. ಪುಟ್ಟಣ್ಣಯ್ಯ ಸದಾ ರೈತರು ಮತ್ತು ಅಸಂಘಟಿತ ಕಾರ್ಮಿಕರ ಧ್ವನಿಯಾಗಿದ್ದರು ಎಂದು ಕೆಜೆಪಿ ಸದಸ್ಯ ಬಿ.ಆರ್.ಪಾಟೀಲ್ ಸ್ಮರಿಸಿದರು.

ಆಸನ ಖಾಲಿ ಇರಿಸಿ: ‘ನನ್ನ ಗುರುವಾಗಿದ್ದ ರೈತರ ನಾಯಕ ಪುಟ್ಟಣ್ಣಯ್ಯ ನನ್ನ ಮುಂದಿನ ಆಸನದಲ್ಲಿ ಕೂರುತ್ತಿದ್ದರು. ನನ್ನ ಪಕ್ಕದ ಆಸನದಲ್ಲಿ ಜೆಡಿಎಸ್ ಸದಸ್ಯ ಚಿಕ್ಕಮಾದು ಕೂರುತ್ತಿದ್ದರು. ಇಬ್ಬರು ನನ್ನೊಂದಿಗೆ ಇಲ್ಲ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ನಾನು ಆಯ್ಕೆಯಾದರೆ, ಈ ಎರಡು ಆಸನ ಖಾಲಿ ಇರಿಸಿ’ ಎಂದು ಕನ್ನಡ ಮಕ್ಕಳ ಪಕ್ಷದ ಸದಸ್ಯ ಅಶೋಕ್ ಖೇಣಿ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News