ಚೆಕ್ ಮೂಲಕ ಲಂಚ ಪಡೆದವರು ಯಾರೆಂದು ಇಡೀ ಜಗತ್ತಿಗೆ ಗೊತ್ತಿದೆ: ಪ್ರಧಾನಿಗೆ ಗುಂಡೂರಾವ್ ತಿರುಗೇಟು

Update: 2018-02-19 15:21 GMT

ಬೆಂಗಳೂರು, ಫೆ.19: ಪ್ರಧಾನಿ ನರೇಂದ್ರ ಮೋದಿ ಕಳೆದ ಬಾರಿ ಬೆಂಗಳೂರಿಗೆ ಬಂದಿದ್ದಾಗಲೂ ರಾಜ್ಯ ಸರಕಾರವನ್ನು ‘10 ಪರ್ಸೆಂಟ್ ಸರಕಾರ’ ಎಂದಿದ್ದರು. ಈ ಬಾರಿಯೂ ಮೈಸೂರಿನಲ್ಲಿ ಅದನ್ನೆ ಪುನರಾವರ್ತಿಸಿದ್ದಾರೆ. ಚೆಕ್ ಮೂಲಕ ಲಂಚ ಪಡೆದವರು ಯಾರು ಅನ್ನೋದು ಇಡೀ ಜಗತ್ತಿಗೆ ಗೊತ್ತಿದೆ. ಆದರೂ, ನಮ್ಮ ಸರಕಾರವನ್ನು 10 ಪರ್ಸೆಂಟ್ ಸರಕಾರ ಎಂದು ಟೀಕಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷದಿನೇಶ್ ಗುಂಡೂರಾವ್ ದೂರಿದರು.

ಸೋಮವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ್ನು ಲೂಟಿ ಹೊಡೆದ ಉದ್ಯಮಿ ನೀರವ್ ಮೋದಿ, ಪ್ರಧಾನಿಗೆ ಹತ್ತಿರದವರು ಎಂದು ಆರೋಪಿಸಿದರು. ಪ್ರಧಾನಿ ಮೂಗಿನ ಕೆಳಗೆ ಲೂಟಿ ನಡೆಯುತ್ತಿದೆ. ವಿಜಯ್ ಮಲ್ಯ, ಲಲಿತ್ ಮೋದಿ, ನೀರವ್ ಮೋದಿ ಎಲ್ಲರೂ ದೇಶ ಬಿಟ್ಟು ಹೋಗಿದ್ದಾರೆ. ಅವರನ್ನು ತಡೆಯಲು ಪ್ರಧಾನಿಗೆ ಆಗಿಲ್ಲ. ಇದರ ಬಗ್ಗೆ ಪ್ರಧಾನಿ ಎಲ್ಲಿಯೂ ಚಕಾರವೆತ್ತುವುದಿಲ್ಲ ಎಂದು ದಿನೇಶ್‌ಗುಂಡೂರಾವ್ ಆರೋಪಿಸಿದರು. ವಿದೇಶಗಳಲ್ಲಿ ದೊಡ್ಡ ದೊಡ್ಡ ಭಾಷಣಗಳನ್ನು ಮಾಡುವ ಪ್ರಧಾನಿ ನರೇಂದ್ರಮೋದಿ, ಯಾವುದೇ ರಾಜ್ಯಗಳಿಗೆ ಹೋದರೂ ಅಲ್ಲಿನ ಸಮಸ್ಯೆಗಳ ಬಗ್ಗೆ ಮಾತ್ರ ಮಾತನಾಡುವುದಿಲ್ಲ ಎಂದು ಟೀಕಿಸಿದರು.

ರಫೆಲ್ ಯುದ್ಧ ನೌಕೆಗಳ ನಿರ್ಮಾಣದ ಒಪ್ಪಂದವನ್ನು ನಮ್ಮ ರಾಜ್ಯದ ಎಚ್‌ಎಎಲ್ ಸಂಸ್ಥೆಯಿಂದ ಹಿಂಪಡೆಯಲು ಕಾರಣವೇನು ಎನ್ನುವುದರ ಬಗ್ಗೆ ಈವರೆಗೆ ಸ್ಪಷ್ಟಣೆ ನೀಡಿಲ್ಲ. ಕೇಂದ್ರ ಸರಕಾರದ ಬಜೆಟ್‌ನಲ್ಲಿ ದೇಶದ ರೈತರಿಗೆ ಯಾವ ಅನುಕೂಲ ಕಲ್ಪಿಸಲಾಗಿದೆ ಎಂಬುದರ ಬಗ್ಗೆ ಮಾತನಾಡುವುದಿಲ್ಲ. ಆದರೆ, ರಾಜ್ಯ ಸರಕಾರದ ವಿರುದ್ಧ ಮಾತ್ರ ಆರೋಪಗಳನ್ನು ಮಾಡುತ್ತಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಮುಖಂಡರು ಮೋದಿ ಭಾಷಣವನ್ನು ‘ಕ್ರಾಂತಿಕಾರಿ ಭಾಷಣ’ ಅಂತ ಹೇಳಿದ್ದಾರೆ. ಜನರ ಮುಂದೆ ಹೇಳೋಕೆ ಅವರಿಗೆ ವಿಷಯಗಳೇ ಇಲ್ಲ. ಮೈಸೂರು-ಉದಯಪುರ ರೈಲ್ವೆ ಯೋಜನೆಯು ಕ್ರಾಂತಿಕಾರಿಯಂತೆ, ಅದು ಹೇಗೆ ಕ್ರಾಂತಿಕಾರಿ ಅನ್ನೋದನ್ನು ಅವರೇ ಹೇಳಬೇಕು ಎಂದು ದಿನೇಶ್‌ಗುಂಡೂರಾವ್ ವ್ಯಂಗ್ಯವಾಡಿದರು.

ಮೈಸೂರಿನಿಂದ ಬೆಂಗಳೂರಿಗೆ ಬಂದು ಮುಖ್ಯಮಂತ್ರಿ ಕೆಟ್ಟು ಹೋಗಿದ್ದಾರಂತೆ. ಹಾಗಾದರೆ, ಬೆಂಗಳೂರಿಗೆ ಬಂದವರೆಲ್ಲ ಕೆಟ್ಟು ಹೋಗಿದ್ದಾರಾ? ಈ ರೀತಿ ಪ್ರಧಾನಿ ಮೋದಿ ಹೇಳಿದ್ದು ಸರಿಯಲ್ಲ ಎಂದು ದಿನೇಶ್‌ಗುಂಡೂರಾವ್ ಅಸಮಾಧಾನ ವ್ಯಕ್ತಪಡಿಸಿದರು.

ಅನ್ನಭಾಗ್ಯ ಯೋಜನೆ ನಮ್ಮದು ಎಂದು ಯಡಿಯೂರಪ್ಪ ಹೇಳಿಕೊಂಡು ತಿರುಗುತ್ತಿದ್ದಾರೆ. ದೇಶದಲ್ಲಿ 3 ರೂ.ಗಳಂತೆ ಅಕ್ಕಿಯನ್ನು ಎಲ್ಲೂ ಕೊಟ್ಟಿಲ್ಲ. ಯುಪಿಎ ಸರಕಾರದ ಅವಧಿಯಲ್ಲಿ ಜಾರಿಗೆ ತಂದ ಆಹಾರ ಭದ್ರತಾ ಕಾಯ್ದೆಯ ಶ್ರೇಯಸ್ಸನ್ನು ಈಗಿರುವ ಕೇಂದ್ರ ಸರಕಾರಕ್ಕೆ ಕೊಡಬೇಕಂತೆ ಎಂದು ಅವರು ಲೇವಡಿ ಮಾಡಿದರು.

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೇಲೆ ಎಷ್ಟು ಕ್ರಿಮಿನಲ್ ಕೇಸ್‌ಗಳಿವೆ. ನಮ್ಮ ರಾಜ್ಯದ ಮುಖ್ಯಮಂತ್ರಿ ಮೇಲೆ ಎಷ್ಟು ಪ್ರಕರಣಗಳಿವೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಮಾಹಿತಿ ತರಿಸಿಕೊಂಡು ನೋಡಲಿ ಎಂದು ದಿನೇಶ್‌ ಗುಂಡೂರಾವ್ ಹೇಳಿದರು.

ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ವಿಚಾರದಲ್ಲೂ ಬಿಜೆಪಿಯವರು ಲಾಭಪಡೆಯಲು ಪ್ರಯತ್ನಿಸಿದರು. ಒಂದು ವೇಳೆ ವ್ಯತಿರಿಕ್ತವಾಗಿ ತೀರ್ಪು ಬಂದಿದ್ದರೆ ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದರು. ಈ ವಿಚಾರದಲ್ಲಿ ಯಡವಟ್ಟಾಗಬಹುದೆಂದು ಪ್ರತಿಪಕ್ಷಗಳು ಬಯಸಿದ್ದವು. ಆದರೆ, ಅದು ಆಗಲಿಲ್ಲ ಎಂದು ದಿನೇಶ್‌ಗುಂಡೂರಾವ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News