ಬೆಂಗಳೂರು: ಪ್ರತ್ಯೇಕ ಅಲೆಮಾರಿ ಅಭಿವೃದ್ಧಿ ಕೋಶ ರಚನೆಗೆ ಆಗ್ರಹ

Update: 2018-02-19 15:28 GMT

ಬೆಂಗಳೂರು, ಫೆ.19: ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಹಿಂದುಳಿದ ವರ್ಗಗಳಲ್ಲಿನ ಅಲೆಮಾರಿ, ಅರೆ ಅಲೆಮಾರಿ ಮತ್ತು ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಸಮುದಾಯಗಳ ಅಭಿವೃದ್ಧಿಗಾಗಿ ಮೂರು ಪ್ರತ್ಯೇಕ ಅಲೆಮಾರಿ ಅಭಿವೃದ್ಧಿ ಕೋಶಗಳನ್ನು ಸ್ಥಾಪಿಸಬೇಕು ಹಾಗೂ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ಅಲೆಮಾರಿ, ಅರೆ ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟುಗಳ ಒಕ್ಕೂಟ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಕೆ.ಭಾಸ್ಕರ್ ಪ್ರಸಾದ್ ಎಕ್ಕಾರು, ಪರಿಶಿಷ್ಟ ಜಾತಿ ಹಾಗೂ ಪಂಗಡ, ಅಲೆಮಾರಿ ಹಾಗೂ ಅರೆ ಅಲೆಮಾರಿ, ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸಮುದಾಯಗಳ ಅಭಿವೃದ್ಧಿಗಾಗಿ ಸರಕಾರ ರಚಿಸಿರುವ ಅಭಿವೃದ್ಧಿ ಕೋಶದ ನೋಡಲ್ ಅಧಿಕಾರಿಯು ಈ ಸಮುದಾಯಗಳಿಗೆ ಪೂರಕವಾಗಿ ಮತ್ತು ಪಾರದರ್ಶಕವಾಗಿ ಸ್ಪಂದಿಸದೇ ಸ್ವಜನ ಪಕ್ಷಪಾತ ಮಾಡುತ್ತಿದ್ದಾರೆ. ಹೀಗಾಗಿ, ಈ ಸಮುದಾಯ ಅಭಿವೃದ್ಧಿಗೆ ಪ್ರತ್ಯೇಕ ಅಭಿವೃದ್ಧಿ ಕೋಶ ಅಗತ್ಯವಿದೆ ಎಂದು ಹೇಳಿದರು.

ಅಲೆಮಾರಿ ಸಮುದಾಯ ಒಂದು ನಿರ್ದಿಷ್ಟ ಜಾತಿಯಿಂದ ಗುರುತಿಸಿಕೊಳ್ಳದೆ ಅವರು ಕೈಗೊಂಡಿರುವ ಹಲವು ವೃತ್ತಿಗಳ ಆಧಾರದ ಮೇಲೆಯೇ ಜಾತಿ ಗುರುತಿಸಿಕೊಳ್ಳುವ ಪರಿಸ್ಥಿತಿ ಇದೆ. ಒಂದೇ ಮನೆಯಲ್ಲಿ ಬೇರೆ ಬೇರೆ ಸಮುದಾಯಗಳಿಂದ ಗುರುತಿಸಿಕೊಂಡಿರುವ ಪ್ರಸಂಗಗಳಿವೆ. ಹೀಗಾಗಿ, ಐಡೆಂಟಿಟಿ ಸಮಸ್ಯೆಯನ್ನು ಹೊಂದಿರುವ ಎಸ್ಸಿ, ಎಸ್ಟಿ ಮತ್ತು ಹಿಂದುಳಿದ ವರ್ಗಗಳ ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ಕುಲಶಾಸ್ತ್ರೀಯ ಅಧ್ಯಯನ ಕೈಗೊಳ್ಳಬೇಕು. ಅಧ್ಯಯನ ಸಲಹಾ ಸಮಿತಿಯಲ್ಲಿ ಆಯಾ ಬುಡಕಟ್ಟು ಹಾಗೂ ಒಕ್ಕೂಟಗಳ ಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸಬೇಕು ಎಂದು ಅವರು ತಿಳಿಸಿದರು.

ಸರಕಾರ ರಾಜ್ಯದಲ್ಲಿ ಟೆಂಟ್ ಮುಕ್ತ ರಾಜ್ಯವನ್ನಾಗಿ ಮಾಡಲು ಮುಂದಾಗಬೇಕು. ಮುಂದಿನ 6 ತಿಂಗಳೊಳಗೆ ಜಿಲ್ಲಾಧಿಕಾರಿಗಳ ಮೂಲಕ ಟೆಂಟ್‌ಗಳಲ್ಲಿ ವಾಸಿಸುತ್ತಿರುವ ಜನರ ಸಮೀಕ್ಷೆ ನಡೆಸಿ, ಸೂಕ್ತ ವಸತಿ ಸೌಲಭ್ಯ ಒದಗಿಸಬೇಕು. ಎಸ್ಸಿ, ಎಸ್ಟಿ ಹಾಗೂ ಒಬಿಸಿ ಅಲೆಮಾರಿ ಪಟ್ಟಿ ಪರಿಷ್ಕರಿಸಬೇಕು. ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 30-40 ವರ್ಷಗಳಿಂದ ವಾಸಿಸುತ್ತಿರುವ ಹಕ್ಕಿ-ಪಿಕ್ಕಿ ಬುಡಕಟ್ಟಿನ ಜನರನ್ನು ಒಕ್ಕಲೆಬ್ಬಿಸುವುದನ್ನು ನಿಲ್ಲಿಸಬೇಕು ಹಾಗೂ ಅಲ್ಲೇ ಶಾಶ್ವತ ನೆಲೆ ಒದಗಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಮುಖಂಡರಾದ ಡಾ.ಮಲ್ಲಿಕಾರ್ಜುನ ಮಾನ್ಪಡೆ, ಕೆ.ಚಾವಡಿ ಲೋಕೇಶ್, ಸಿದ್ದಣ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News