ರಾಜ್ಯದಲ್ಲಿ 13.71 ಲಕ್ಷ ಮನೆಗಳ ನಿರ್ಮಾಣ: ಪ್ರಧಾನಿ ಮೋದಿಗೆ ಗುಂಡೂರಾವ್ ತಿರುಗೇಟು

Update: 2018-02-19 15:31 GMT

ಬೆಂಗಳೂರು, ಫೆ.19: ರಾಜ್ಯ ಸರಕಾರವು ವಸತಿ ಯೋಜನೆಗಳನ್ನು ಆದ್ಯತೆಮೇರೆಗೆ ಪರಿಗಣಿಸಿದ್ದು, 2013-18ರ ನಡುವೆ 15 ಲಕ್ಷ ಮನೆಗಳನ್ನು ಬಡವರಿಗೆ ನಿರ್ಮಿಸುವ ಭರವಸೆಯನ್ನು ನೀಡಿತ್ತು. ಅದರಂತೆ, ಈಗಾಗಲೆ 13.71 ಲಕ್ಷ ಮನೆಗಳು ಪೂರ್ಣಗೊಂಡಿವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್ ಹೇಳಿದರು.

ಸೋಮವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 13.71 ಲಕ್ಷ ಮನೆಗಳಿಗಾಗಿ 14,300 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಮಾರ್ಚ್ ಅಂತ್ಯಕ್ಕೆ ಇನ್ನುಳಿದ ಮನೆಗಳ ನಿರ್ಮಾಣವು ಪೂರ್ಣಗೊಳ್ಳಲಿದೆ ಎಂದರು.

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ರಾಜ್ಯದ ಬಡವರಿಗಾಗಿ 3.36 ಲಕ್ಷ ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ, ರಾಜ್ಯ ಸರಕಾರ ಕೇವಲ 38 ಸಾವಿರ ಮನೆಗಳನ್ನು ಮಾತ್ರ ನಿರ್ಮಿಸಿದೆ ಎಂದು ಪ್ರಧಾನಿ ನರೇಂದ್ರಮೋದಿ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ದಿನೇಶ್‌ಗುಂಡೂರಾವ್ ತಿರುಗೇಟು ನೀಡಿದರು.

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಕ್ಕೆ ಪ್ರತ್ಯೇಕವಾದ ವಿಧಗಳಿವೆ. ನಗರ ಪ್ರದೇಶದ ಒಂದು ಮನೆಗೆ ಕೇಂದ್ರ ಸರಕಾರದ ಪಾಲು 1.50 ಲಕ್ಷ ರೂ.ಗಳಾದರೆ, ರಾಜ್ಯ ಸರಕಾರದ ಪಾಲು 3.50 ಲಕ್ಷ ರೂ.ಇದೆ. ಗ್ರಾಮೀಣ ಪ್ರದೇಶದ ಒಂದ ಮನೆಗೆ ಕೇಂದ್ರ ಸರಕಾರ 72 ಸಾವಿರ ರೂ.ಗಳನ್ನು ಒದಗಿಸಿದರೆ, ರಾಜ್ಯ ಸರಕಾರವು 2.28 ಲಕ್ಷ ರೂ.ಗಳ ಪಾಲನ್ನು ನೀಡುತ್ತಿದೆ ಎಂದು ಅವರು ವಿವರಿಸಿದರು.

ಪ್ರಧಾನಮಂತ್ರಿ ಆವಾಸ್ ಯೋಜನೆ(ನಗರ)ಯಡಿಯಲ್ಲಿ 2,90,507 ಮನೆಗಳನ್ನು ನಿರ್ಮಿಸಲಾಗಿದೆ. ಇದಕ್ಕಾಗಿ 14,764.9 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಇದರಲ್ಲಿ ಕೇಂದ್ರದ ಪಾಲು 4,357.6 ಕೋಟಿ ರೂ.ಗಳಾದರೆ, ರಾಜ್ಯ ಸರಕಾರದ ಪಾಲು 9,157.3 ಕೋಟಿ ರೂ.ಗಳಷ್ಟಿದೆ ಎಂದು ದಿನೇಶ್‌ಗುಂಡೂರಾವ್ ಹೇಳಿದರು.

ಕೇಂದ್ರ ಸರಕಾರವು ತನ್ನ ಪಾಲಿನ 4,357.6 ಕೋಟಿ ರೂ.ಗಳಲ್ಲಿ ಬಿಡುಗಡೆ ಮಾಡಿರುವುದು ಕೇವಲ 345 ಕೋಟಿ ರೂ.ಗಳು ಮಾತ್ರ. ತನ್ನ ಪಾಲಿನ ಶೇ.10ರಷ್ಟು ಅನುದಾನವನ್ನು ಬಿಡುಗಡೆ ಮಾಡಿಲ್ಲ. ಆದರೂ, ರಾಜ್ಯ ಸರಕಾರವು ತನ್ನ ಹಣಕಾಸನ್ನು ಖರ್ಚು ಮಾಡಿ 21,905 ಮನೆಗಳನ್ನು ಪೂರ್ಣಗೊಳಿಸಿದೆ, 38 ಸಾವಿರ ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು.

ಅದೇ ರೀತಿ, ಪ್ರಧಾನಮಂತ್ರಿ ಆವಾಸ್ ಯೋಜನೆ(ಗ್ರಾಮೀಣ)ಯಡಿಯಲ್ಲಿ 2016-17 ಹಾಗೂ 2017-18ರಲ್ಲಿ 1,45,349 ಮನೆಗಳನ್ನು ಹಂಚಿಕೆ ಮಾಡಲಾಗಿತ್ತು. 1,37,968 ಮನೆಗಳನ್ನು ಪೂರ್ಣಗೊಳಿಸಲಾಗಿದೆ. ಇದರಲ್ಲಿ ಕೇಂದ್ರ ಸರಕಾರದ ಪಾಲು 1088.36 ಕೋಟಿ ರೂ.ಗಳು. ಆದರೆ, ಬಿಡುಗಡೆ ಮಾಡಿದ್ದು ಮಾತ್ರ 696.86 ಕೋಟಿ ರೂ.ಗಳು ಮಾತ್ರ ಎಂದು ದಿನೇಶ್‌ಗುಂಡೂರಾವ್ ಟೀಕಿಸಿದರು.

ಕೇಂದ್ರ ಸರಕಾರ ತನ್ನ ಪಾಲಿನ ಅನುದಾನವನ್ನು ಸಮರ್ಪಕವಾಗಿ ಬಿಡುಗಡೆ ಮಾಡದಿದ್ದರೂ ರಾಜ್ಯ ಸರಕಾರವು 1,37,968 ಮನೆಗಳನ್ನು ತನ್ನ ಅನುದಾನದಲ್ಲಿ ಪೂರ್ಣಗೊಳಿಸಿದೆ. 2017-18ನೆ ಸಾಲಿನಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ(ಗ್ರಾಮೀಣ)ಯಡಿಯಲ್ಲಿ ರಾಜ್ಯ ಸರಕಾರವು 63,843 ಮನೆಗಳನ್ನು ಪೂರ್ಣಗೊಳಿಸಿದೆ. ಇದಕ್ಕಾಗಿ ಕೇಂದ್ರ ಸರಕಾರ ನೀಡಿರುವುದು ಕೇವಲ 345 ಕೋಟಿ ರೂ.ಗಳು ಮಾತ್ರ ಎಂದು ಅವರು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಪ್ರೊ.ಕೆ.ಇ.ರಾಧಾಕೃಷ್ಣ, ಎಐಸಿಸಿ ಕಾರ್ಯದರ್ಶಿ ಹೆಗ್ಡೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News