ಸರಕಾರಿ ಜಾಗ ಅತಿಕ್ರಮಣ ವಿಚಾರ: ವಿಸ್ತೃತ ವರದಿ ಸಲ್ಲಿಸಲು ಸರಕಾರಿ ಪರ ವಕೀಲರಿಗೆ ಹೈಕೋರ್ಟ್ ನಿರ್ದೇಶನ

Update: 2018-02-19 15:34 GMT

ಬೆಂಗಳೂರು, ಫೆ.19: ಚಾಮರಾಜನಗರದಲ್ಲಿ ಸರಕಾರಿ ಜಾಗವನ್ನು ಅತಿಕ್ರಮಣ ಮಾಡಿಕೊಂಡು ಬಾಪೂಜಿ ಸಾರ್ವಜನಿಕ ವಿದ್ಯಾರ್ಥಿ ನಿಲಯ ನಡೆಸುತ್ತಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಸ್ತೃತ ವರದಿ ಸಲ್ಲಿಸಲು ಸರಕಾರಿ ಪರ ವಕೀಲರಿಗೆ ಹೈಕೋರ್ಟ್ ನಿರ್ದೇಶಿಸಿದೆ.

ನಾಗರಾಜು, ಮಹದೇವಯ್ಯ ಸೇರಿ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಮತ್ತು ನ್ಯಾಯಮೂರ್ತಿ ಬಿ.ಎಂ.ಶ್ಯಾಮ್ ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿತು.

ಅರ್ಜಿದಾರರ ಪರ ವಾದಿಸಿದ ವಕೀಲ ಜಿ.ಆರ್.ಮೋಹನ್ ಅವರು, ರಾಜ್ಯ ಸರಕಾರವು 1980ರಲ್ಲಿ ಬಾಪೂಜಿ ಹರಿಜನ ವಿದ್ಯಾರ್ಥಿ ನಿಲಯದ ನಿರ್ಮಾಣಕ್ಕಾಗಿ ಚಾಮರಾಜನಗರದಲ್ಲಿ 2 ಎಕರೆ 10 ಗುಂಟೆ ಜಮೀನನ್ನು ವಶಕ್ಕೆ ಪಡೆದಿತ್ತು. ಆದರೆ, ಆರ್.ಎಂ.ಕಾಂತ್‌ರಾಜು ಎಂಬುವವರು ಈ ಜಾಗವನ್ನು ಅತಿಕ್ರಮವಾಗಿ ವಶಪಡಿಸಿಕೊಂಡು ಬಾಪೂಜಿ ಸಾರ್ವಜನಿಕ ವಿದ್ಯಾರ್ಥಿನಿಲಯವನ್ನು ನಿರ್ಮಿಸಿಕೊಂಡು ಸರಕಾರಕ್ಕೆ ಮೋಸ ಎಸಗಿದ್ದಾರೆ. ಹೀಗಾಗಿ, ಸರಕಾರಕ್ಕೆ 2 ಎಕರೆ 10 ಗುಂಟೆ ಜಾಗವನ್ನು ವಾಪಸ್ ಪಡೆಯಲು ಆದೇಶಿಸಬೇಕೆಂದು ಪೀಠಕ್ಕೆ ಮನವಿ ಮಾಡಿದರು.

ಸಮಾಜ ಕಲ್ಯಾಣ ಇಲಾಖೆಯು 2013-14ರಲ್ಲಿ 2 ಎಕರೆ 10 ಗುಂಟೆ ಜಾಗದಲ್ಲಿ ಬಾಪೂಜಿ ಹರಿಜನ ವಿದ್ಯಾರ್ಥಿ ನಿಲಯವನ್ನು ನಿರ್ಮಿಸಲು ಚಾಮರಾಜನಗರದ ಮುನ್ಸಿಪಾಲಿಟಿಗೆ ಆದೇಶಿಸಿತ್ತು. ಆದರೆ, ಮುನ್ಸಿಪಾಲಿಟಿ ಅವರು ಇಲ್ಲಿಯವರೆಗೆ ಆ ಜಾಗದಲ್ಲಿ ಯಾವುದೆ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಪೀಠಕ್ಕೆ ತಿಳಿಸಿದರು.

ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠವು ಸರಕಾರಿ ಪರ ವಕೀಲರಿಗೆ ಚಾಮರಾಜನಗರದ ಜಮೀನಿಗೆ ಸಂಬಂಧಪಟ್ಟಂತೆ ವಿಸ್ತೃತ ವರದಿಯನ್ನು ಸಲ್ಲಿಸಲು ನಿರ್ದೇಶಿಸಿ, ವಿಚಾರಣೆಯನ್ನು ಫೆ.22ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News