ಅಬಕಾರಿ ಲೇಬಲ್ ಉತ್ಪಾದನೆ ವಿಚಾರ: ಟೆಂಡರ್ ಅಧಿಸೂಚನೆ ಪ್ರಶ್ನಿಸಿ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಕೆ

Update: 2018-02-19 15:40 GMT

ಬೆಂಗಳೂರು, ಫೆ.19: ರಾಜ್ಯದಲ್ಲಿ ಮದ್ಯದ ಬಾಟಲಿಗಳ ಮುಚ್ಚಳ ಮೇಲೆ ಅಂಟಿಸಲು ಪಾಲಿಯೆಸ್ಟರ್ ಆಧಾರಿತ ಹಾಲೋಗ್ರಾಫಿಕ್ಸ್ ಅಬಕಾರಿ ಲೇಬಲ್ (ಅಬಕಾರಿ ತೆರಿಗೆ ಬ್ಯಾಂಡ್) ಉತ್ಪಾದನೆಗೆ ಸರಕಾರ ಹೊರಡಿಸಿರುವ ಟೆಂಡರ್ ಅಧಿಸೂಚನೆ ಪ್ರಶ್ನಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.

ನಗರದ ಬಿಇಎಲ್ ಲೇಔಟ್ ನಿವಾಸಿ ಸಿ.ಆರ್.ವಿಶ್ವನಾಥನ್ ಮತ್ತು ಸ್ವಚ್ಛ ಎಂಬ ಸರಕಾರಿಯೇತರ ಸಂಸ್ಥೆ ಹೈಕೋರ್ಟ್‌ಗೆ ಈ ಅರ್ಜಿ ಸಲ್ಲಿಸಿದ್ದು, ಪಾಲಿಯೆಸ್ಟರ್ ಅಬಕಾರಿ ಲೇಬಲ್ ಉತ್ಪಾದನೆಗೆ ರಾಜ್ಯಸರಕಾರವು ಫೆ.3ರಂದು ಹೊರಡಿಸಿದ ಅಧಿಸೂಚನೆ ರದ್ದುಪಡಿಸುವಂತೆ ಕೋರಿದೆ. ಅರ್ಜಿಯು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಮತ್ತು ನ್ಯಾಯಮೂರ್ತಿ ಎಸ್.ಸುನೀಲ್ ದತ್ತ್ ಯಾದವ್ ಅವರಿರುವ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಿದೆ.

ಪ್ರಸ್ತುತ ರಾಜ್ಯದಲ್ಲಿ ಮದ್ಯ ಬಾಟಲಿ ಮುಚ್ಚಳ ಮೇಲೆ ಕಾಗದ ಆಧಾರಿತ ಹಾಲೊಗ್ರಾಮ್ ಹೊಂದಿದ ಲೇಬಲ್‌ಅಂಟಿಸಲಾಗುತ್ತಿದೆ. ಆದರೆ, ರಾಜ್ಯ ಅಬಕಾರಿ ಇಲಾಖೆಯು ಸಂಪೂರ್ಣ ಪಾಲಿಯೆಸ್ಟರ್ ಅಬಕಾರಿ ಲೇಬಲ್ ಉತ್ಪಾದನೆಗೆ ಫೆ.3ರಂದು ಟೆಂಡರ್ ಅಧಿಸೂಚನೆ ಹೊರಡಿಸಿದೆ.

ಈ ಅಧಿಸೂಚನೆ ರದ್ದುಪಡಿಸಲು ಕೋರಿರುವ ಅರ್ಜಿದಾರರು, ಕರ್ನಾಟಕ ಅಬಕಾರಿ ಇಲಾಖೆಯು ಸದ್ಯ ಕಾಗದ ಆಧಾರಿತ ಹಾಲೋಗ್ರಾಮ್ ಹೊಂದಿದ ಲೇಬಲ್ (ಇಎಎಲ್) ಅಂಟಿಸಲಾಗುತ್ತಿದೆ. ಇದರಲ್ಲಿ ಹಲವು ಭದ್ರತಾ ಗುಣಲಕ್ಷಣಗಳು ಇವೆ. ಅಬಕಾರಿ ಸುಂಕ ಪಾವತಿ ಮತ್ತು ಗ್ರಾಹಕರ ಸುರಕ್ಷತೆಯನ್ನೂ ಖಚಿತಪಡಿಸುತ್ತದೆ. ಮೇಲಾಗಿ ಕಾಗದ ಆಧಾರಿತ ಲೇಬಲ್ ಜೈವಿಕವಾಗಿ ಸಂಸ್ಕರಣೆ ಮಾಡಬಹುದಾಗಿದೆ. ಪ್ರತಿ ತಿಂಗಳು 32 ಕೋಟಿ 24*75 ಎಂಎಂ ಅಳತೆಯ ಲೇಬಲ್ ಅಗತ್ಯವಿದೆ. ಅಷ್ಟು ಲೇಬಲ್‌ಗಳು ಪ್ರತಿ ತಿಂಗಳು ಭೂಮಿ ಸೇರುತ್ತವೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಆದರೆ, ಪಾಲಿಯೆಸ್ಟರ್ ಜೈವಿಕವಾಗಿ ಸಂಸ್ಕರಣೆ ಕಷ್ಟಸಾಧ್ಯ. ಇದು ಸಾರ್ವಜನಿಕರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಹೀಗಾಗಿ, ಪಾಲಿಯೆಸ್ಟರ್ ಲೇಬಲ್ ಉತ್ಪಾದನೆಗೆ ಹೊರಡಿಸಿದ ಟೆಂಡರ್ ಅಧಿಸೂಚನೆ ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ಹಾಗೆಯೇ, ಟೆಂಡರ್‌ನ ತಾಂತ್ರಿಕ ಬಿಡ್‌ಗೆ ತಡೆಯಾಜ್ಞೆ ನೀಡಬೇಕು ಎಂದು ಮಧ್ಯಂತರ ಮನವಿ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News